ಬಹು-ದೂರದ ಓಟದಲ್ಲಿ ಮೂರು ಮೂರು ಗಿನ್ನಿಸ್ ದಾಖಲೆಗಳನ್ನು ಬರೆದಿರುವ ಭಾರತದ ಅಗ್ರ ಅಲ್ಟ್ರಾ ರನ್ನರ್ (Indian Long Distance Runner) ಸೂಫಿಯಾ ಸೂಫಿ (Sufiya Sufi), ಈ ಬಾರಿ ಭಾರತದ ಹೊರಗೆ ತಮ್ಮ ನಾಲ್ಕನೇ ಗಿನ್ನಿಸ್ ವಿಶ್ವ ದಾಖಲೆ ಮುಡಿಗೇರಿಸಿಕೊಂಡಿದ್ದಾರೆ. 30 ಗಂಟೆ 34 ನಿಮಿಷಗಳಲ್ಲಿ 200 ಕಿಲೋಮೀಟರ್‌ಗೂ ಅಧಿಕ ದೂರವನ್ನು ಕ್ರಮಿಸುವ ಮೂಲಕ ಕತಾರ್‌ನಲ್ಲಿ ಸೂಫಿ ಅವರು ತಮ್ಮ 4ನೇ ಗಿನ್ನಿಸ್ ದಾಖಲೆ (Guiness World Record) ಬರೆದಿದ್ದಾರೆ. ಕತಾರ್‌ನ (Qatar) ದಕ್ಷಿಣದಿಂದ ಆರಂಭವಾದ ಈ ಓಟ ಉತ್ತರದಲ್ಲಿ ಅಂತ್ಯಗೊಂಡಿದೆ. ಕಳೆದ ಜನವರಿಯಲ್ಲಿ ಅಬು ಸಮ್ರಾದಿಂದ ಆರಂಭವಾದ ಈ ಓಟ, ದೋಹಾ ಮೂಲಕ ಹಾದು ಅಲ್ ರುಯೆಜ್‌ನಲ್ಲಿ ಕೊನೆಗೊಂಡಿತು. ಈ ಪ್ರಯಾಣದಲ್ಲಿ ಸೂಫಿ ಅವರು 210 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಿದ್ದಾರೆ. ಕತಾರ್‌ನ ಸುಡುವ ಬಿಸಿಲನ್ನು ಲೆಕ್ಕಿಸದೆ ಈ ದಾಖಲೆ ಬರೆದಿರುವ ಸೂಫಿ ಅವರಿಗೆ ದಾರಿ ಮಧ್ಯೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದರ ಜೊತೆಗೆ ಮೂರು ಬಾರಿ ವಾಂತಿ ಕೂಡ ಮಾಡಿಕೊಂಡರು. ಆದರೆ ತಮ್ಮ ಹೋರಾಟ ಬಿಡದ ಸೂಫಿಯಾ, ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದಲ್ಲಿ ಅಲ್ಟ್ರಾ ರನ್ನಿಂಗ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ರಾಜಸ್ಥಾನ ಮೂಲದ ಸೂಫಿಯಾ ಸೂಫಿ, ರನ್ನರ್ ಆಗುವುದಕ್ಕೂ ಮುನ್ನ ಏರ್ಲೈನ್ನಲ್ಲಿ ಉದ್ಯೋಗಿಯಾಗಿದ್ದರು. ಆದರೆ ಆನಂತರ, 2018 ರಲ್ಲಿ ತನ್ನ ಏರ್‌ಲೈನ್ ಉದ್ಯೋಗವನ್ನು ತೊರೆದ ಸೂಫಿಯಾ ಅಲ್ಟ್ರಾ ರನ್ನರ್ ಆಗಿ ತಮ್ಮನ್ನು ತಾವು ಗುರುತಿಸಿಕೊಂಡರು. ವಿಶ್ರಾಂತಿ ಮತ್ತು ಒತ್ತಡ-ಮುಕ್ತವಾಗಿರಬೇಕೆಂಬ ಬಯಕೆಯೊಂದಿಗೆ ಈ ಹೊಸ ಸಾಹಸಕ್ಕೆ ಕೈಹಾಕಿದ ಸೂಫಿಯಾ ಸೂಫಿ ಅವರು ಕಳೆದ ವರ್ಷ, ಸಿಯಾಚಿನ್ನಿಂದ ರನ್ನಿಂಗ್ ಆರಂಭಿಸಿ, ಕಾರ್ಗಿಲ್ ಯುದ್ಧ ಸ್ಮಾರಕದವರೆಗೂ ಕ್ರಮಿಸುವುದರೊಂದಿಗೆ ಭಾರತೀಯ ಸೇನಾ ಯೋಧರು ಮತ್ತು ಹುತಾತ್ಮರಿಗೆ ಗೌರವ ಸಲ್ಲಿಸಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಾವು ನಿರ್ಮಿಸಿರುವ 4ನೇ ಗಿನ್ನೆಸ್ ವಿಶ್ವ ದಾಖಲೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೂಫಿ, ನನ್ನ ನಾಲ್ಕನೇ ವಿಶ್ವ ದಾಖಲೆ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಈಗ ಕತಾರ್‌ನಲ್ಲಿ ಅತಿ ವೇಗದ ಓಟದ ದಾಖಲೆಯನ್ನು ಭಾರತ ಹೊಂದಿದೆ. ದೇಶಕ್ಕಾಗಿ ಈ ದಾಖಲೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದೂ ಸೂಫಿ ಹೇಳಿಕೊಂಡಿದ್ದಾರೆ.
My 4th world record is official now.
Now INDIA holds the World Record for the Fastest Run Across QATAR, and I am so proud that I got this opportunity to bring it to my Country. #worldrecord #ultrarunning pic.twitter.com/NQ3tr1uDTc
— Sufiya Sufi Runner (@sufirunner) February 22, 2023
ಕತಾರ್‌ನಲ್ಲಿ ಈ ದಾಖಲೆ ಬರೆಯುವುದರೊಂದಿಗೆ ವಿದೇಶದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಸೂಫಿ ಪಾತ್ರರಾಗಿದ್ದಾರೆ. ಈ ಹಿಂದೆ ಅವರು ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನ ಗೋಲ್ಡನ್ ಚತುರ್ಭುಜ ರಸ್ತೆಯಲ್ಲಿ 6,002 ಕಿಮೀ ಕ್ರಮಿಸುವುದರೊಂದಿಗೆ ಗಿನ್ನೆಸ್ ದಾಖಲೆ ಮಾಡಿದ್ದರು. ಈ ದೂರವನ್ನು ಕ್ರಮಿಸಲು ಅವರು ಬರೋಬ್ಬರಿ 110 ದಿನ, 23 ಗಂಟೆ 24 ನಿಮಿಷಗಳನ್ನು ತೆಗೆದುಕೊಂಡಿದ್ದರು. ಡಿಸೆಂಬರ್ 16, 2020 ರಂದು ಪ್ರಾರಂಭವಾಗಿದ್ದ ಸೂಫಿ ಅವರ ಈ ಓಟ, ಏಪ್ರಿಲ್ 6, 2021 ರಂದು ಮುಕ್ತಾಯಗೊಂಡಿತ್ತು.
ಇದಕ್ಕೂ ಮೊದಲು 2019 ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಓಡುವ ಮೂಲಕ ಸೂಫಿ ತಮ್ಮ ಮೊದಲ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಮಾರ್ಗವನ್ನು ಕ್ರಮಿಸಲು 87 ದಿನಗಳು 2 ಗಂಟೆ 17 ನಿಮಿಷಗಳನ್ನು ತೆಗೆದುಕೊಂಡಿದ್ದ ಸೂಫಿ, ಈಗ ವಿದೇಶಕ್ಕೆ ಹೋಗಿ ವಿಶ್ವ ದಾಖಲೆ ಮಾಡಿದ್ದು, 2024ರಲ್ಲಿ ಹೊಸ ಅಭಿಯಾನಕ್ಕೆ ಕೈ ಹಾಕಲಿದ್ದಾರೆ ಎಂಬ ಮಾಹಿತಿಯೂ ಇದೆ.
Published On - 3:52 pm, Fri, 24 February 23