ಖ್ಯಾತ ಮಹಿಳಾ ಓಟಗಾರ್ತಿ ಸೇರಿದಂತೆ ಭಾರತದ ಇಬ್ಬರು ಅಥ್ಲೀಟ್​ಗಳು ಡೋಪಿಂಗ್ ಟೆಸ್ಟ್​ನಲ್ಲಿ ವಿಫಲ

ಅವರಲ್ಲಿ ಒಬ್ಬರು ಪ್ರಖ್ಯಾತ 400 ಮೀಟರ್ ಓಟಗಾರ್ತಿಯಾಗಿದ್ದು ಹಲವಾರು 4X400 ರೀಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಟೋಕಿಯೋ ಒಲಂಪಿಕ್ಸ್​ನಲ್ಲಿ ಮಹಿಳಾ ರೀಲೇ ತಂಡದ ಭಾಗವಾಗುವುದು ಖಚಿತವಾಗಿತ್ತು.

ಖ್ಯಾತ ಮಹಿಳಾ ಓಟಗಾರ್ತಿ ಸೇರಿದಂತೆ ಭಾರತದ ಇಬ್ಬರು ಅಥ್ಲೀಟ್​ಗಳು ಡೋಪಿಂಗ್ ಟೆಸ್ಟ್​ನಲ್ಲಿ ವಿಫಲ
ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ

Updated on: Mar 13, 2021 | 9:34 PM

ಈ ವರ್ಷ ಟೊಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ರೇಸ್​​ಲ್ಲಿರುವ ಅಥ್ಲೀಟ್​ಗಳ ಪೈಕಿ ಇಬ್ಬರು ಕಳೆದ ತಿಂಗಳು ಪಾಟಿಯಾಲಾದ ಇಂಡಿಯನ್ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ ನಡೆದ ಡೋಪ್ ಟೆಸ್ಟ್​ನಲ್ಲಿ ವಿಫಲರಾಗಿದ್ದಾರೆಂದು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕದ (ನಾಡಾ) ಪ್ರಧಾನ ಕಾರ್ಯದರ್ಶಿ ನವೀನ್ ಅಗರ್​ವಾಲ್ ಶನಿವಾರದಂದು ಬಹಿರಂಗಪಡಿಸಿದರು.

ಅವರಲ್ಲಿ ಒಬ್ಬರು ಪ್ರಖ್ಯಾತ 400 ಮೀಟರ್ ಓಟಗಾರ್ತಿಯಾಗಿದ್ದು ಹಲವಾರು 4X400 ರೀಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಟೋಕಿಯೋ ಒಲಂಪಿಕ್ಸ್​ನಲ್ಲಿ ಮಹಿಳಾ ರೀಲೇ ತಂಡದ ಭಾಗವಾಗುವುದು ಖಚಿತವಾಗಿತ್ತು. ಆದರೆ, ಆಕೆ ಹಾಗೂ ಮತ್ತೊಬ್ಬ ಅಥ್ಲೀಟ್​ ಹೆಸರನ್ನು ನಾಡಾ ಆಗಲೀ ಆಥವಾ ಭಾರತದ ಅಥ್ಲೆಟಿಕ್ಸ್ ಒಕ್ಕೂಟವಾಗಲೀ ಬಹಿರಂಗ ಪಡಿಸಿಲ್ಲ.

‘ಡೋಪಿಂಗ್ ಟೆಸ್ಟ್​ನಲ್ಲಿ ವಿಫಲರಾಗಿರುವ ಅಥ್ಲೀಟ್​ಗಳ ಹೆಸರುಗಳನ್ನು ನಾನು ಹೇಳಲಾರೆ. ಆದರೆ ವಿಷಯವೇನೆಂದರೆ ಪಾಟಿಯಾಲಾದ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ ನಾವು ನಮೂನೆಗಳನ್ನು (ಸ್ಯಾಂಪಲ್​) ಸಂಗ್ರಹಿಸಿದ್ದೆವು. ಅವುಗಳಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ದೊರೆತಿವೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ,’ ಎಂದು ಪಿಟಿಐ ಸುದ್ದಿಸಂಸ್ಥೆ ಜೊತೆ ಶನಿವಾರ ಮಾತಾಡಿದ ಅಗರ್​ವಾಲ್ ಹೇಳಿದರು.

‘ಇದು ಒಲಂಪಿಕ್ ವರ್ಷ ಆಗಿರುವುದರಿಂದ ನಮ್ಮ ಗಮನವೆಲ್ಲ ಪ್ರಮುಖ ಸಂಭಾವ್ಯ ಅಥ್ಲೀಟ್​ಗಳ ಮೇಲಿದೆ ಮತ್ತು ಅವರ ಪರೀಕ್ಷಣೆ ಪದೇಪದೆ ನಡೆಯಲಿದೆ. ಸೀನಿಯರ್​ ರಾಷ್ಟ್ರೀಯ ಹಂತದ ಕೆಳಗಿರರುವವರಿಗೆ ನಾವು ಈ ವರ್ಷ ಡೋಪಿಂಗ್ ಟೆಸ್ಟ್​ಗಳನ್ನು ನಡೆಸುತ್ತಿಲ್ಲ,’ಎಂದು ಅವರು ಹೇಳಿದರು.
ಈ ಚರ್ಚೆಯಲ್ಲಿರುವ ಉದ್ದೀಪನ ಮದ್ದು (ಶಕ್ತಿವರ್ಧಕ) ಮಿಥೈಲೆಕ್ಸಾನ್-2-ಅಮೈನ್ ಆಗಿದ್ದು ಇದು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) 2021 ರಲ್ಲಿ ಪ್ರಕಟಿಸಿರುವ ನಿಷೇಧಿತ ಮದ್ದುಗಳಲ್ಲಿ ಒಂದಾಗಿದೆ.

ಸದ್ಯದ ಬೆಳವಣಿಗೆ ಪ್ರಕಾರ ಡೋಪಿಂಗ್ ಟೆಸ್ಟ್​ನಲ್ಲಿ ವಿಫಲರಾಗಿರುವ ಅಥ್ಲೀಟ್​ಗಳನ್ನು ತಾತ್ಕಾಲಿಕವಾಗಿ ಸಸ್ಪೆಂಡ್​ ಮಾಡಲಾಗಿದೆಯಾದರೂ ಅವರಿಬ್ಬರಿಗೆ ನಾಡಾದ ಉದ್ದೀಪನ ನಿಗ್ರಹ ಶಿಸ್ತು ಸಮಿತಿಯೆದುರು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಅವಕಾಶ ನೀಡಲಾಗಿದೆ. ಆಥ್ಲೀಟ್​ಗಳು ಕೆಲವು ಸಲ ಅರಿವಿಗೆ ಗೊತ್ತಾಗದೆ ಆಕಸ್ಮಿಕವಾಗಿ ನಿಷೇಧಿತ ಪದಾರ್ಥಗಳನ್ನು ಉಪಯೋಗಿಸುವ ಸಾಧ್ಯತೆ ಇರುವುದರಿಂದ ಈ ಅವಕಾಶವನ್ನು ಅವರಿಗೆ ನೀಡಲಾಗಿದೆ.

ಅಥ್ಲೀಟ್​ಗಳು ನಿಷೇಧಿತ ಪದಾರ್ಥ ಬಳಸಿದ್ದು ಸಾಬೀತಾದರೆ ಅವರು ಎರಡರಿಂದ 4 ವರ್ಷಗಳ ಕಾಲ ನಿಷೇಧಕ್ಕೊಳಗಾಗಬಹುದು. ಅದರೆ ಅವರು ತಮ್ಮ ಮೇಲೆ ವಿಧಿಸುವ ನಿಷೇಧವನ್ನು ರದ್ದುಪಡಿಸುವಂತೆ ನಾಡಾದ ಉಚ್ಛ ಅಂಗವಾಗಿರುವ ಉದ್ದೀಪನ ಮದ್ದು ನಿಗ್ರಹದ ಅಪೀಲ್ಸ್ ಸಮಿತಿಗೆ ಮನವಿ ಸಲ್ಲಿಸಬಹುದು

ಇದನ್ನೂ ಓದಿ: ಅಂದು ಡ್ರಮ್ಮರ್ ಆಗಿದ್ದ ಉಡುಪಿಯ ಯುವಕ, ಈಗ ಅಥ್ಲೆಟಿಕ್ಸ್​ನ ಬಿರುಸಿನ ಓಟಗಾರ!