ಗಾಯಗೊಂಡಿರುವ ಬಾಬರ್ ಮತ್ತು ಇಮಾಮ್ ಮೊದಲ ಟೆಸ್ಟ್ ಆಡುವುದಿಲ್ಲ: ಪಿಸಿಬಿ

|

Updated on: Dec 21, 2020 | 8:03 PM

ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಗಾಯಾಳುಗಳ ಚಿಂತೆ ಕಾಡುತ್ತಿದೆ. ಹೆಬ್ಬಟ್ಟಿನ ಮೂಳೆ ಮುರಿದುಕೊಂಡಿರುವ ನಾಯಕ ಬಾಬರ್ ಅಜಂ ಮತ್ತು ಆರಂಭ ಆಟಗಾರ ಇಮಾಮ್ ಉಲ್ ಹಕ್ 26ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ನಲ್ಲಿ ಅಡುವುದಿಲ್ಲವೆಂದು ಪಿಸಿಬಿ ಹೇಳಿದೆ.

ಗಾಯಗೊಂಡಿರುವ ಬಾಬರ್ ಮತ್ತು ಇಮಾಮ್ ಮೊದಲ ಟೆಸ್ಟ್ ಆಡುವುದಿಲ್ಲ: ಪಿಸಿಬಿ
ಬಾಬರ್ ಆಜಂ
Follow us on

ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟಿ20ಐ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಮತ್ತೊಂದು ಆಘಾತ ಎದುರಾಗಿದೆ. ಟೀಮಿನ ನಾಯಕ ಬಾಬರ್ ಆಜಂ ಮತ್ತು ಆರಂಭ ಆಟಗಾರ ಇಮಾಮ್ ಉಲ್ ಹಕ್ ಗಾಯಗೊಂಡಿದ್ದು ಇಬ್ಬರೂ 26ರಂದು ಮೌಂಟ್ ಮ್ಯಾಗ್ನುಯಿಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್​ನಲ್ಲಿ ಆಡುವುದಿಲ್ಲ.

ಅವರ ಗಾಯಗಳ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಜನವರಿ 3 ರಂದು ಶುರುವಾಗುವ ಎರಡನೇ ಟೆಸ್ಟ್​ಗೆ ಅವರಿಬ್ಬರು ಲಭ್ಯರಾಗುವರೆ ಎನ್ನುವುದನ್ನು ನಂತರ ತಿಳಿಸಲಾಗುವುದೆಂದು ಹೇಳಿದೆ.

ಬಾಬರ್ ಅನುಪಸ್ಥಿತಿಯಲ್ಲಿ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಟೀಮಿನ ನಾಯಕತ್ವ ವಹಿಸಲಿದ್ದಾರೆಂದು ಹೇಳಿರುವ ಪಿಸಿಬಿ, ಬಾಬರ್ ಮತ್ತು ಇಮಾಮ್ ಇಬ್ಬರೂ ನೆಟ್ಸ್​ನಲ್ಲಿ ಹೆಬ್ಬಟ್ಟಿನ ಮೂಳೆಗಳನ್ನು ಮುರಿದುಕೊಂಡಿದ್ದು ಚೇತರಿಸಿಕೊಳ್ಳಲು ಕನಿಷ್ಠ 2-3 ವಾರ ಬೇಕಾಗಬಹುದು ಎಂದು ತಿಳಿಸಿದೆ.

ಇಮಾಮ್ ಉಲ್ ಹಕ್​

24 ವರ್ಷದ ಇಮ್ರಾನ್ ಬಟ್​ರನ್ನು ಬದಲೀ ಆಟಗಾರನಾಗಿ ಪಾಕಿಸ್ತಾನ ತಂಡದಲ್ಲಿ ಸೇರಿಸಲಾಗಿದೆ. 2019-20ರ ಡೊಮೆಸ್ಟಿಕ್ ಸೀಸನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಟ್ 62 ರ ಸರಾಸರಿಯಲ್ಲಿ 4 ಶತಕ ಮತ್ತು 3 ಅರ್ಧ ಶತಕಗಳನ್ನೊಳಗೊಂಡಂತೆ 934 ರನ್ ಬಾರಿಸಿದ್ದರು.

ನ್ಯೂಜಿಲೆಂಡ್-ಪಾಕಿಸ್ತಾನ ನಡುವೆ ಟಿ20ಐ ಸರಣಿಯ ಕೊನೆ ಪಂದ್ಯ ನಾಳೆ ನೇಪಿಯರ್​ನಲ್ಲಿ ನಡೆಯಲಿದ್ದು ಸರಣಿ ಅದಾಗಲೇ ಅತಿಥೇಯರ ಪಾಲಾಗಿರುವುದರಿಂದ ಇದು ಔಪಚಾರಿಕತೆಗಾಗಿ ನಡೆಯಲಿದೆ. ಪಾಕಿಸ್ತಾನದ ಹೆಡ್ ಕೋಚ್ ಮಿಸ್ಬಾ ಉಲ್ ಹಕ್, ಆಜಂ ಮತ್ತು ಇಮಾಮ್​ ಅವರಿಗಾಗಿರುವ ಗಾಯಗಳ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ರಿಜ್ವಾನ್

‘ಎರಡನೇ ಟೆಸ್ಟ್ ಶುರುವಾಗಲು ಇನ್ನೂ ಎರಡು ವಾರಗಳ ಸಮಯವಿದೆ. ಆದರೆ, ನೆಟ್ಸ್​ನಲ್ಲಿ ಅಭ್ಯಾಸ ಮಾಡದೆ ಟೆಸ್ಟ್​ನಲ್ಲಿ ಆಡುವುದು ಬಾಬರ್​ಗೆ ಕಷ್ಟವಾಗಲಿದೆ. ಹಾಗಾಗಿ ಅವರನ್ನು ಆಡಿಸುವುದಕ್ಕೆ ಅವಸರ ಮಾಡುತ್ತಿಲ್ಲ. ಅವರ ಅನುಪಸ್ಥಿತಿ ಮತ್ತು ಟಿ20ಐ ಸರಣಿಯನ್ನು ಸೋತಿರುವುದರಿಂದ ಪಾಕಿಸ್ತಾನದ ಆಟಗಾರರು ಕೊನೆಯ ಟಿ20 ಪಂದ್ಯ ಮತ್ತು ಟೆಸ್ಟ್​ಗಳಲ್ಲಿ ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ’ ಎಂದು ಮಿಸ್ಬಾ ಹೇಳಿದರು.

Published On - 7:48 pm, Mon, 21 December 20