ಅಬುಧಾಬಿ: ಮರಳುಗಾಡಿನ ಮಹಾಯುದ್ಧದ 21ನೇ ಪಂದ್ಯದಲ್ಲಿಂದು ಚೆನ್ನೈ ಮತ್ತು ಕೊಲ್ಕತ್ತಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ 10 ರನ್ಗಳ ರೋಚಕ ಜಯ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಭಟಿಸಿದ ಕೆಕೆಆರ್ ಆರಂಭಿಕ ರಾಹುಲ್ ತ್ರಿಪಾಟಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. 51 ಎಸೆತಗಳನ್ನ ಎದುರಿಸಿದ್ದ ರಾಹುಲ್ ತ್ರಿಪಾಟಿ, 8 ಬೌಂಡರಿ, 3 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದ್ರು.
ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಡ್ವೇನ್ ಬ್ರಾವೋ ಅದ್ಭುತ ಬೌಲಿಂಗ್ ಮಾಡಿದ್ರು. 4 ಓವರ್ಗಳಲ್ಲಿ 37 ರನ್ ನೀಡಿದ ಬ್ರಾವೋ, ರಾಹುಲ್ ತ್ರಿಪಾಟಿ, ಕಮಲೇಶ್ ನಾಗರಕೋಟಿ, ಶಿವಂ ಮಾವಿ ವಿಕೆಟ್ ಪಡೆದು, ಕೆಕೆಆರ್ ಸ್ಕೋರ್ ಕಡಿಮೆ ಮಾಡಿದ್ರು.
13ನೇ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಲೆಗ್ ಸ್ಪಿನ್ನರ್ ಕರಣ್ ಶರ್ಮಾ, ತಮ್ಮ ಕೈಚಳಕ ತೋರಿಸಿದ್ರು. ಪಿಯೂಷ್ ಚಾವ್ಲಾ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಕರಣ್, 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಎರಡು ವಿಕೆಟ್ ಪಡೆದ್ರು.
ನಿನ್ನೆಯ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ ಕಮಾಲ್ ಮಾಡಿದ್ರು. ಒಟ್ಟು ನಾಲ್ಕು ಕ್ಯಾಚ್ ಹಿಡಿದ ಎಂ.ಎಸ್.ಧೋನಿ, ಒಂದು ರನೌಟ್ ಕೂಡ ಮಾಡಿದ್ರು, ಧೋನಿ ಕೀಪಿಂಗ್ಗೆ ಶುಭಮನ್, ಮಾರ್ಗನ್, ರಸ್ಸೆಲ್, ಶಿವಂ ಮಾವಿ ಬಲಿಯಾದ್ರು.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರು ಬ್ಯಾಟ್ಸ್ಮನ್ಗಳು ಒಂದಂಕಿಗೆ ಔಟಾಗಿದ್ದಾರೆ. ಚೆನ್ನೈ ಬೌಲಿಂಗ್ ದಾಳಿಗೆ ಮಂಕಾದ ನಿತಿಶ್ ರಾಣಾ, ಇಯಾನ್ ಮಾರ್ಗನ್ ಸೇರಿದಂತೆ 6 ಬ್ಯಾಟ್ಸ್ಮನ್ಗಳು ಒಂದಂಕಿಗೆ ಪೆವಿಲಿಯನ್ ಸೇರಿದ್ರು.
ನಿನ್ನೆಯ ಪಂದ್ಯದಲ್ಲಿ ಕೆಕೆಆರ್ ಎರಡು ವಿಕೆಟ್ ಕಳೆದಕೊಂಡ ನಂತ್ರ ಸುನಿಲ್ ನರೈನ್ ಕಣಕ್ಕಿಳಿದಿದ್ದು, ಆಶ್ಚರ್ಯ ತಂದಿದೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಮಾರ್ಗನ್, ಕಾರ್ತಿಕ್ ಮುನ್ನ ನರೈನ್ ಕಣಕ್ಕಿಳಿದು ಅಚ್ಚರಿಯುಂಟು ಮಾಡಿದ್ರು.
ಚೆನ್ನೈ ತಂಡದ ವಿರುದ್ಧ 10 ರನ್ಗಳ ರೋಚಕ ಗೆಲುವು ಸಾಧಿಸಿರೋ ಕೆಕೆಆರ್, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಆಡಿರೋ 5 ಪಂದ್ಯಗಳ ಪೈಕಿ 3ಪಂದ್ಯಗಳನ್ನ ಗೆದ್ದು ಎರಡರಲ್ಲಿ ಸೋತಿರೋ ಕೆಕೆಆರ್, 6 ಅಂಕ ಕಲೆಹಾಕಿದೆ.