ಸದ್ಯ ಕೊಹ್ಲಿ ಬಾಯ್ಸ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯತ್ತ ಗಮನ ಕೇಂದ್ರಿಕರಿಸಿದ್ದಾರೆ. ಆದ್ರೆ ಆರ್ಸಿಬಿ ಆಪದ್ಬಾಂಧವ ಎಬಿ ಡಿವಿಲಿಯರ್ಸ್, ಈಗಲೇ ಮಿಲಿಯನ್ ಡಾಲರ್ ಟೂರ್ನಿ ಮೇಲೆ ಕಣ್ಣಿಟ್ಟಿದ್ದಾರೆ. ಎಬಿ ಡಿವಿಲಿಯರ್ಸ್.. ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ.. ಆದ್ರೆ ಎದುರಾಳಿಗಳ ಪಾಲಿಗೆ ರಿಯಲ್ ವಿಲನ್. ಎಬಿಡಿ ಹೀಗೇ ಬ್ಯಾಟಿಂಗ್ ಮಾಡ್ತಾರೆ ಅಂತ ಯಾರಿಂದಲೂ ಊಹೆ ಮಾಡೋಕಾಗಲ್ಲ. ಯಾಕಂದ್ರೆ ಎಬಿಡಿ ಬೌಲರ್ಗಳ ನಿರೀಕ್ಷೆಗೂ ಮೀರಿ ಬ್ಯಾಟಿಂಗ್ ಪ್ರಾವಿಣ್ಯತೆ ತೋರಿಸುವ ಆಟಗಾರ.
ಎಬಿಡಿ ಐಫೋನ್ ಔಟ್
ಅದ್ರಲ್ಲೂ ಈ ಬಾರಿಯ ಐಪಿಎಲ್ನಲ್ಲಿ ಎಬಿಡಿ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಯಾಕಂದ್ರೆ ಕೊಹ್ಲಿಗಿಂತ ಮೊದಲೇ, ಡಿವಿಲಿಯರ್ಸ್ ಈ ಬಾರಿ ಐಪಿಎಲ್ ಮೇಲೆ ಗಮನ ಕೇಂದ್ರಿಕರಿಸಿದ್ದಾರೆ. ಐಪಿಎಲ್ಗಾಗಿ ದಕ್ಷಿಣ ಆಫ್ರಿಕಾದಲ್ಲೇ ಸೂಪರ್ ಸ್ಟಾರ್ ವಿಭಿನ್ನವಾದ ತಾಲೀಮು ನಡೆಸಿಕೊಳ್ತಿದ್ದಾರೆ. ಆರ್ಸಿಬಿ ಪಾಲಿಗೆ ಆಪತ್ಬಾಂಧವನಾಗಿ ಗುರುತಿಸಿಕೊಂಡಿರುವ ಎಬಿಡಿ, ಈ ಸಲ ಕಪ್ ಗೆಲ್ಲಿಸಿಕೊಡೋದಕ್ಕೆ ಮಾಡಿಕೊಳ್ಳುತ್ತಿರುವ ತಯಾರಿ ಇದು. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿರವ ತಮ್ಮ ನಿವಾಸದಲ್ಲಿರುವ ನೆಟ್ಸ್ನಲ್ಲಿ ಎಬಿಡಿ, ಐಫೋನ್ ಔಟ್ ಮಾಡಿ ಗಮನ ಸೆಳೆದಿದ್ದಾರೆ.
ತಾವು ನೆಟ್ ಪ್ರಾಕ್ಟೀಸ್ ಮಾಡುತ್ತಿರೋ ದೃಶ್ಯವನ್ನ ಎಬಿಡಿ ಐಫೋನ್ನಲ್ಲಿ ಸೆರೆ ಹಿಡಿಯುತ್ತಿದ್ರು. ಈ ವೇಳೆ ಎಬಿಡಿ ಹೊಡೆದ ಸ್ಟ್ರೇಟ್ ಡ್ರೈವ್ ಶಾಟ್, ಡಿವಿಲಿಯರ್ಸ್ ಇಟ್ಟ ಐಫೋನ್ಗೆ ಬಡಿದು ಬೀಳಿಸಿದೆ. ತಾವು ಸಿಡಿಸಿದ ಶಾಟ್ಗೆ ಐಫೋನ್ ಬಿದ್ದ ವಿಡಿಯೋವನ್ನು ಮಿಸ್ಟರ್ ತ್ರಿಸಿಕ್ಸ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಎಬಿಡಿ ಐಫೋನ್ ಔಟ್ ಎಂದು ಅಡಿ ಬರಹ ನೀಡಿದ್ದಾರೆ.
ಒಟ್ನಲ್ಲಿ ಎಬಿ ಡಿವಿಲಿಯರ್ಸ್ ಈ ಬಾರಿ ಆರ್ಸಿಬಿಗೆ ಐಪಿಎಲ್ ಕಪ್ ಗೆಲ್ಲಿಸಿಕೊಡೋಕೆ ಪಣತೊಟ್ಟಿದ್ದಾರೆ. ಅದ್ರಲ್ಲೂ ಭಾರತದಲ್ಲೇ ಐಪಿಎಲ್ ನಡೆಯುತ್ತಿರೋದ್ರಿಂದ, ಎಬಿಡಿ ಬ್ಯಾಟ್ನಿಂದ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಯೋದ್ರಲ್ಲಿ ಅನುಮಾನವೇ ಇಲ್ಲ.
ಕೊನೆಯ 10 ಓವರ್‌ಗಳಲ್ಲಿ ಎಬಿ ಅಪಾಯಕಾರಿ
ಐಪಿಎಲ್ 2021 ರಲ್ಲಿ ಎಬಿ ಡಿವಿಲಿಯರ್ಸ್ ಅವರ ಅಬ್ಬರವನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ 10 ನೇ ಓವರ್ ನಂತರ ಬ್ಯಾಟಿಂಗ್ ಮಾಡಲು ಬಂದಾಗ ಡಿವಿಲಿಯರ್ಸ್ ಆಟವನ್ನು ನೋಡುವುದೆ ಚೆಂದ. ಕೊನೆಯ 10 ಓವರ್‌ಗಳಲ್ಲಿ ಎದುರಾಳಿ ತಂಡದ ಬೌಲರ್ಗಳನ್ನು ಮನಸೋಇಚ್ಚೆ ದಂಡಿಸುವ ಡಿವಿಲಿಯರ್ಸ್ ರನ್ ಮಳೆಯನ್ನೇ ಹರಿಸುತ್ತಾರೆ.
ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಆವೃತ್ತಿಯ ಅಂಕಿ ಅಂಶವನ್ನೇ ಗಮನಿಸಿದರೆ, ಕಳೆದ ಆವೃತ್ತಿಯಲ್ಲಿ 10 ಓವರ್ಗಳ ನಂತರ ಒಟ್ಟು 9 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದಿರುವ ಡಿವಿಲಿಯರ್ಸ್ 187. 42 ಸ್ಟ್ರೈಕ್ ರೆಟ್ನಲ್ಲಿ ಬರೋಬ್ಬರಿ 298 ರನ್ ಗಳಿಸಿದ್ದಾರೆ. ಇದರಲ್ಲಿ ಅಮೋಘ 4 ಅರ್ಧಶತಕ ಸಹ ಸೇರಿವೆ. ಕೊನೆಯ 10 ಓವರ್ನಲ್ಲಿ 59.6 ರ ಸರಾಸರಿಯಲ್ಲಿ ರನ್ ಗಳಿಸಿರುವ ಡಿವಿಲಿಯರ್ಸ್, ಎದುರಾಳಿಗಳಿಗೆ ತುಂಬಾ ಅಪಾಯಕಾರಿಯಾಗುತ್ತಾರೆ.
ಹಾಗೆಯೇ ಮೊದಲ 10 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ಸಮಯದಲ್ಲಿ ಡಿವಿಲಿಯರ್ಸ್, 5 ಇನ್ನಿಂಗ್ಸ್‌ಗಳಲ್ಲಿ ಕೇವಲ 156 ರನ್ ಗಳಿಸಿದ್ದಾರೆ. 122.83 ಸ್ಟ್ರೈಕ್ ರೇಟ್‌ನೊಂದಿಗೆ 1 ಅರ್ಧಶತಕವನ್ನು ಗಳಿಸಿರುವ ಡಿವಿಲಿಯರ್ಸ್ ಅವರ ಸರಾಸರಿ 31.2 ಆಗಿದೆ. ಹೀಗಾಗಿ ಡಿವಿಲಿಯರ್ಸ್ ಕೊನೆಯ 10 ಓವರ್ಗಳಲ್ಲೇ ಬ್ಯಾಟಿಂಗ್ಗೆ ಬರುವುದು ಸೂಕ್ತವೆನಿಸುತ್ತದೆ.