ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 14ನೇ ಆವೃತ್ತಿಗಾಗಿ ಆಟಗಾರರ ಹರಾಜು ಇಂದು ನಡೆಯಲಿದೆ. ಚೆನ್ನೈನಲ್ಲಿ ಎಲ್ಲಾ 8 ಫ್ರಾಂಚೈಸಿಗಳು 291 ಕ್ರಿಕೆಟಿಗರ ಭವಿಷ್ಯವನ್ನು ಇಂದು ನಿರ್ಧರಿಸಲಿವೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರಾದ ಸ್ಟೀವ್ ಸ್ಮಿತ್, ಹರ್ಭಜನ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಉಮೇಶ್ ಯಾದವ್ ಅವರ ಭವಿಷ್ಯ ನಿರ್ಧರವಾಗಲಿದೆ. ಒಂದು ಸಾವಿರಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಕೇವಲ 292 ಆಟಗಾರರಿಗೆ ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.
ತಂಡದ ಮಾಲೀಕರು, ಕೈಗಾರಿಕೋದ್ಯಮಿಗಳು, ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳು, ತಂತ್ರಜ್ಞರು, ಮಾಜಿ ಆಟಗಾರರು, ತರಬೇತುದಾರರು ಮತ್ತು ವಿಶ್ಲೇಷಣೆಕಾರರವರೆಗೆ ಹರಾಜಿನಲ್ಲಿ ಸಾಕಷ್ಟು ದೊಡ್ಡ ಮತ್ತು ಪ್ರಮುಖ ವ್ಯಕ್ತಿಗಳು ಇರಲಿದ್ದಾರೆ. ಆದರೆ ಹರಾಜನ್ನು ಮನರಂಜನಾತ್ಮಕವಾಗಿ ನಡೆಸಿಕೊಡುವ ಮತ್ತು ನೂರಾರು ಆಟಗಾರರ ಹೆಸರುಗಳನ್ನು ಒಂದರ ನಂತರ ಒಂದರಂತೆ ತಾಳ್ಮೆಯಿಂದ ಕರೆದು ಹರಾಜು ನಡೆಸುವ ಜವಾಬ್ದಾರಿಯನ್ನು ಈ ವ್ಯಕ್ತಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
ಐಪಿಎಲ್ 2021 ರ ಹರಾಜು ನಡೆಸಿಕೊಡುವವರು ಯಾರು?
ಚೆನ್ನೈನಲ್ಲಿ ಗುರುವಾರ ಹರಾಜು ನಡೆಸಿಕೊಡುತ್ತಿರುವ ವ್ಯಕ್ತಿ ಹಗ್ ಎಡ್ಮೀಡ್ಸ್ (Hugh Edmeades), ಬ್ರಿಟಿಷ್ ಅಂತರರಾಷ್ಟ್ರೀಯ ಲಲಿತಕಲೆ, ಕ್ಲಾಸಿಕ್ ಕಾರು ಮತ್ತು ಚಾರಿಟಿ ಹರಾಜುದಾರ. ಎಡ್ಮೀಡ್ಸ್ ಕ್ರಿಕೆಟ್ ಕ್ಷೇತ್ರವೊಂದರಲ್ಲೇ ಅಲ್ಲ, ಇತರೆ ರಂಗಗಳಲ್ಲೂ ತಮ್ಮ ವೃತ್ತಿ ನೈಪುಣ್ಯತೆ ಮೆರೆದಿದ್ದಾರೆ. ಅಂತರರಾಷ್ಟ್ರೀಯ ಹರಾಜುದಾರರಾಗಿ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು 2500 ಕ್ಕೂ ಹೆಚ್ಚು ಹರಾಜನ್ನು ನಡೆಸಿದ್ದಾರೆ. ಎಡ್ಮೀಡ್ಸ್ ಬ್ರಿಟಿಷ್ ಅಂತರರಾಷ್ಟ್ರೀಯ ಲಲಿತಕಲೆ, ಕ್ಲಾಸಿಕ್ ಕಾರು ಮತ್ತು ಚಾರಿಟಿ ಹರಾಜುದಾರರಾಗಿದ್ದಾರೆ. ವರ್ಣ ಚಿತ್ರಗಳು, ಉತ್ತಮ ಪೀಠೋಪಕರಣಗಳು, ಪಿಂಗಾಣಿ ಮತ್ತು ಕಲಾಕೃತಿಗಳು, ಮತ್ತು ಚಲನಚಿತ್ರ ಮತ್ತು ಕ್ರೀಡಾ ಸ್ಮರಣಿಕೆಗಳು ಸೇರಿದಂತೆ ಹಲವಾರು ವಸ್ತುಗಳನ್ನು ಹರಾಜು ಕೂಗುವುದರಲ್ಲಿ ಎಡ್ಮೀಡ್ಸ್ ಅನುಭವ ಹೊಂದಿದ್ದಾರೆ.
ಎಡ್ಮೀಡ್ಸ್ ವಿಶ್ವದ 30 ನಗರಗಳಲ್ಲಿ 850 ಕ್ಕೂ ಹೆಚ್ಚು ಚಾರಿಟಿ ನಿಧಿ ಸಂಗ್ರಹಣೆಗಳಿಗಾಗಿ ಹರಾಜು ನಡೆಸಿದ್ದಾರೆ. ಚಿಲ್ಡ್ರನ್ ಇನ್ ನೀಡ್ ಸಹಾಯಕ್ಕಾಗಿ ಅವರು 2005 ರಲ್ಲಿ ಬಿಬಿಸಿಯ ದೂರದರ್ಶನದ ಪ್ರಸಿದ್ಧ ಹರಾಜನ್ನು ನಡೆಸಿದ್ದಾರೆ. 2018 ರಲ್ಲಿ, ಎಡ್ಮೀಡ್ಸ್ ಅವರನ್ನು ಬಿಸಿಸಿಐ 2019 ಐಪಿಎಲ್ ಹರಾಜುದಾರರನ್ನಾಗಿ ನೇಮಿಸಿತು. ಪ್ರತಿಷ್ಠಿತ ಐಪಿಎಲ್ ಹರಾಜನ್ನು ನಡೆಸಲು ಆಯ್ಕೆಯಾಗಿದ್ದ ರಿಚರ್ಡ್ ಮ್ಯಾಡ್ಲಿ (ಯುನೈಟೆಡ್ ಕಿಂಗ್ಡಂ ನ ಪ್ರಸಿದ್ಧ ಹರಾಜುದಾರ) ಅವರ ನಂತರ, ಐಪಿಎಲ್ ಹರಾಜುದಾರರಾದ ಎರಡನೇ ವ್ಯಕ್ತಿ ಇವರಾಗಿದ್ದಾರೆ.