IPL 2021 Auction: ಐಪಿಎಲ್ 2021 ಹರಾಜಿನಲ್ಲಿದ್ದಾರೆ 14 ಕನ್ನಡಿಗರು, ಕರ್ನಾಟಕದವರಿಗೆ ಆದ್ಯತೆ ಕೊಡುತ್ತಾ RCB

IPL 2021 Auction: ಐಪಿಎಲ್ 2021 ಹರಾಜಿನಲ್ಲಿದ್ದಾರೆ 14 ಕನ್ನಡಿಗರು, ಕರ್ನಾಟಕದವರಿಗೆ ಆದ್ಯತೆ ಕೊಡುತ್ತಾ RCB
ಸಂಗ್ರಹ ಚಿತ್ರ

IPL 2021: ಈ ವರ್ಷ ಕೆ ಗೌತಮ್, ಸುಚಿತ್​ ಜಗದೀಶ, ಅನಿರುದ್ಧ ಜೋಶಿ, ಶುಭಂ ಹೆಗ್ಡೆ, ಕರುಣ್​ ನಾಯರ್, ಅಭಿಮನ್ಯು ಮಿಥುನ್, ರೋನಿತ್​ ಮೋರೆ ಸೇರಿದಂತೆ ಒಟ್ಟು 14 ಜನ ಕರ್ನಾಟಕದ ಆಟಗಾರರಲ್ಲಿ ಯಾರಿಗೆ ಆರ್​ಸಿಬಿ ಮಣೆ ಹಾಕಲಿದೆ ಎಂದು ನೋಡಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.

Skanda

|

Feb 18, 2021 | 6:39 PM

ಐಪಿಎಲ್​ 2021 ಹರಾಜು ಪ್ರಕ್ರಿಯೆ (IPL 2021 Auction) ಆರಂಭವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೆ ಗೌತಮ್, ಸುಚಿತ್​ ಜಗದೀಶ, ಅನಿರುದ್ಧ ಜೋಶಿ, ಶುಭಂ ಹೆಗ್ಡೆ, ಕರುಣ್​ ನಾಯರ್, ಅಭಿಮನ್ಯು ಮಿಥುನ್, ರೋನಿತ್​ ಮೋರೆ ಸೇರಿದಂತೆ ಒಟ್ಟು 14 ಜನ ಕರ್ನಾಟಕದ ಆಟಗಾರರು ಲಭ್ಯವಿದ್ದಾರೆ. ಈ ಪೈಕಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಕರ್ನಾಟಕದ ಯಾವ ಆಟಗಾರರಿಗೆ ಮಣೆ ಹಾಕಲಿದೆ? ಪ್ರತಿವರ್ಷವೂ ಕನ್ನಡಿಗರಿಗೆ ಆದ್ಯತೆ ನೀಡಲ್ಲ ಎಂಬ ಆರೋಪಕ್ಕೆ ತುತ್ತಾಗುತ್ತಿರುವ ಆರ್​ಸಿಬಿ ಈಗಲಾದರೂ ಆ ದೂಷಣೆಯಿಂದ ಮುಕ್ತವಾಗಲು ಪ್ರಯತ್ನಿಸಲಿದೆಯಾ? ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿ ಮೂಡಿದೆ.

ಕೆ.ಎಲ್​.ರಾಹುಲ್​, ರಾಬಿನ್​ ಉತ್ತಪ್ಪ ಸೇರಿದಂತೆ ಕರ್ನಾಟಕದ ಹಲವು ಆಟಗಾರರು ಈಗಾಗಲೇ ಐಪಿಎಲ್​ನಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಪಂಜಾಬ್​ ಕಿಂಗ್ಸ್​ ತಂಡಕ್ಕಂತೂ ಕನ್ನಡಿಗರು ಹೆಚ್ಚೂ ಕಡಿಮೆ ಆರ್​ಸಿಬಿಗೆ ನೀಡಿದಷ್ಟೇ ಪ್ರೀತಿ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಪಂಜಾಬ್​ ತಂಡದಲ್ಲಿ ಮಿಂಚುತ್ತಿರುವ ಕನ್ನಡ ನೆಲದ ಆಟಗಾರರು. ಅಲ್ಲಿನ ನಾಯಕನೂ ಕನ್ನಡಿಗನೇ ಆಗಿರುವ ಕಾರಣ ಇಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ಅವರ ಆಟವನ್ನು ನೋಡುವುದು ಖುಷಿ.

ಕರ್ನಾಟಕದ ಆಟಗಾರರು ಯಾವ ತಂಡದಲ್ಲಿದ್ದರೂ ಪ್ರೀತಿ, ಪ್ರೋತ್ಸಾಹ ನೀಡುವುದರಲ್ಲಿ ಕನ್ನಡಿಗರು ಕಿಂಚಿತ್ತೂ ಕೊರತೆ ಮಾಡುವುದಿಲ್ಲ. ಆದರೆ, ಅವರು ನಮ್ಮದೇ ತಂಡವಾದ ಆರ್​ಸಿಬಿಯಲ್ಲಿದ್ದರೆ ಇನ್ನೂ ಚೆನ್ನ ಎನ್ನುವುದು ಹೆಬ್ಬಯಕೆಯಷ್ಟೇ. ಹೀಗಾಗಿಯೇ ಪ್ರತಿಬಾರಿಯೂ ಐಪಿಎಲ್​ ತಂಡ ರಚಿಸುವ ಸಂದರ್ಭದಲ್ಲಿ ಬೆಂಗಳೂರು ತಂಡ ಕನ್ನಡಿಗರಿಗೆ ಆದ್ಯತೆ ನೀಡಬಹುದಾ ಎಂದು ವೀಕ್ಷಕರು ಕಣ್ಣು ಮಿಟುಕಿಸದೇ ಕಾಯುತ್ತಾರೆ. ಇಷ್ಟಾದರೂ ಈ ವಿಚಾರದಲ್ಲಿ ಆರ್​ಸಿಬಿ ಅನೇಕ ಸಲ ಕನ್ನಡಿಗರಿಗೆ ನಿರಾಸೆ ಮಾಡಿದೆ. ಹೀಗಾಗಿ, ಈ ವರ್ಷ ಕೆ ಗೌತಮ್, ಸುಚಿತ್​ ಜಗದೀಶ, ಅನಿರುದ್ಧ ಜೋಶಿ, ಶುಭಂ ಹೆಗ್ಡೆ, ಕರುಣ್​ ನಾಯರ್, ಅಭಿಮನ್ಯು ಮಿಥುನ್, ರೋನಿತ್​ ಮೋರೆ ಸೇರಿದಂತೆ ಒಟ್ಟು 14 ಜನ ಕರ್ನಾಟಕದ ಆಟಗಾರರಲ್ಲಿ ಯಾರಿಗೆ ಆರ್​ಸಿಬಿ ಮಣೆ ಹಾಕಲಿದೆ ಎಂದು ನೋಡಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನು ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ 8 ಫ್ರಾಂಚೈಸಿಗಳಿಗೆ ಗರಿಷ್ಠ ₹85 ಕೋಟಿ ವ್ಯಯಿಸುವ ಅವಕಾಶವಿದೆ. ಅಷ್ಟೂ ತಂಡಗಳ ಪೈಕಿ ಪಂಜಾಬ್​ ಕಿಂಗ್ಸ್​ ಅತಿ ಹೆಚ್ಚು ಅಂದರೆ ₹53.2 ಕೋಟಿ ಉಳಿಸಿಕೊಂಡಿದ್ದರೆ, ರಾಜಸ್ಥಾನ ₹37.85 ಕೋಟಿ ಉಳಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ತಮ್ಮಲ್ಲಿದ್ದ ಕೆಲ ಆಟಗಾರರನ್ನು ಕೈ ಬಿಟ್ಟು ಖಾತೆಯಲ್ಲಿ ಸದ್ಯ ಹೆಚ್ಚು ಹಣ ಉಳಿಸಿಕೊಂಡಿವೆ. ಇನ್ನೊಂದೆಡೆ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ತಂಡಗಳು ಅತಿ ಕಡಿಮೆ ಅಂದರೆ ಕೇವಲ ₹10.75 ಕೋಟಿಯನ್ನು ಕೈಯಲ್ಲಿ ಉಳಿಸಿಕೊಂಡಿವೆ. ಹೀಗಾಗಿ ಈ ತಂಡಗಳು ಹೊಸಬರನ್ನು ಖರೀದಿ ಮಾಡುವಾಗ ಹೆಚ್ಚು ವ್ಯಯಿಸುವುದು ಸಾಧ್ಯವಿಲ್ಲ.

ಇದನ್ನೂ ಓದಿ: ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಹೆಸರೇ ಬದಲಾಯ್ತು, ಹೊಸ ಹೆಸರು ಡಾಭಾದಂತಿದೆ ಎಂದು ಕಾಲೆಳೆದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada