Punjab Kings: ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಹೆಸರೇ ಬದಲಾಯ್ತು, ಹೊಸ ಹೆಸರು ಡಾಭಾದಂತಿದೆ ಎಂದು ಕಾಲೆಳೆದ ನೆಟ್ಟಿಗರು

Punjab Kings: ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಹೆಸರೇ ಬದಲಾಯ್ತು, ಹೊಸ ಹೆಸರು ಡಾಭಾದಂತಿದೆ ಎಂದು ಕಾಲೆಳೆದ ನೆಟ್ಟಿಗರು
ಪಂಜಾಬ್​ ಕಿಂಗ್ಸ್​ ನೂತನ ಲೋಗೋ

Kings XI Punjab: ಹೊಸ ಹೆಸರು ಚೆನ್ನಾಗಿಲ್ಲ, ಯಾವುದೋ ಲೋಕಲ್​ ಡಾಭಾ ಹೆಸರು ಇದ್ದ ಹಾಗಿದೆ. KXIP ಎಂದು ಕರೆಯಲು ಚೆನ್ನಾಗಿತ್ತು ಈಗ PBKS ಎನ್ನುವುದು ಕೆಟ್ಟದಾಗಿ ಕೇಳಿಸುತ್ತೆ ಎಂದೂ ಹೇಳಿದ್ದಾರೆ. ಈ ಬದಲಾವಣೆಗೆ ರಾಜಸ್ಥಾನ್​ ರಾಯಲ್ಸ್​ ತಂಡ ಕೂಡ ಪ್ರತಿಕ್ರಿಯಿಸಿದೆ.

Skanda

|

Feb 18, 2021 | 12:36 PM

ಐಪಿಎಲ್​ 2021ರ ಹರಾಜು (IPL 2021 Auction) ಪ್ರಕ್ರಿಯೆಗೆ ಇನ್ನೇನು ಕೆಲ ಕ್ಷಣಗಳಷ್ಟೇ ಬಾಕಿ ಉಳಿದಿವೆ. ಹರಾಜಿನಲ್ಲಿ ಅನೇಕ ಆಟಗಾರರ ತಂಡ ಬದಲಾಗಲಿದೆ. ಕಳೆದ ಬಾರಿ ಯಾವುದೋ ತಂಡದಲ್ಲಿ ಆಡಿದವರು, ಈ ಬಾರಿ ಇನ್ನಾವುದೋ ತಂಡದ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದ್ದಾರೆ. ಈ ಮಧ್ಯೆ ಹೆಚ್ಚು ಕನ್ನಡಿಗ ಆಟಗಾರರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದ ಕಿಂಗ್ಸ್​ ಇಲೆವೆನ್ ಪಂಜಾಬ್ (Kings XI Punjab)​ ತಂಡ ತನ್ನ ಹೆಸರು ಮತ್ತು ಲೋಗೋವನ್ನೇ ಬದಲಾಯಿಸಿಕೊಂಡಿದೆ. ಪ್ರೀತಿ ಜಿಂಟಾ ಹಾಗೂ ಮತ್ತಿತರರ ಒಡೆತನದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಈ ಬಾರಿ ಹೊಸ ರೂಪದೊಂದಿಗೆ ಕಂಗೊಳಿಸಲಿದೆ. ಕಳೆದ ಕೆಲ ದಿನಗಳಿಂದ ತನ್ನಲ್ಲಿ ಏನೋ ಬದಲಾವಣೆಯಾಗಲಿದೆ ಎಂಬ ಸುಳಿವನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಾ ಕುತೂಹಲ ಹುಟ್ಟಿಸಿದ್ದ ತಂಡ ಕೊನೆಗೂ ತನ್ನ ಹೊಸ ಹೆಸರು ಮತ್ತು ಲೋಗೋವನ್ನು (Brand Name and Logo) ಅಧಿಕೃತವಾಗಿ ಬದಲಾಯಿಸಿದೆ.

ಇದೀಗ ಪಂಜಾಬ್​ ಕಿಂಗ್ಸ್ (Punjab Kings) ಎಂದು ಮರುನಾಮಕರಣಗೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊಸ ಲೋಗೋವನ್ನೂ ಅನಾವರಣ ಮಾಡಿದೆ. ಲೋಗೋದಲ್ಲಿ ಅತಿದೊಡ್ಡ ಮಟ್ಟದ ಬದಲಾವಣೆ ಕಂಡುಬರದಿದ್ದರೂ ಕೆಲ ಸಣ್ಣಪುಟ್ಟ ಬದಲಾವಣೆ ಜೊತೆಗೆ ಹೊಸ ಹೆಸರನ್ನು ಲೋಗೋದಲ್ಲಿ ಸೇರಿಸಿಕೊಂಡಿದೆ. ಪ್ರೀತಿ ಜಿಂಟಾ, ಮೋಹಿತ್​ ಬುರ್ಮಾನ್​, ನೆಸ್​ ವಾಡಿಯಾ ಹಾಗೂ ಕರಣ್​ ಪಾಲ್ ಅವರ ಜಂಟಿ ಒಡೆತನದ ತಂಡ ನೂತನ ಬದಲಾವಣೆ ಜೊತೆ ಕಂಗೊಳಿಸುತ್ತಿದೆ. 2008ರಿಂದಲೂ ಟ್ರೋಫಿ ಗೆಲ್ಲಲು ಹವಣಿಸುತ್ತಿರುವ ತಂಡದ ಅದೃಷ್ಟ ಈ ಬಾರಿಯಾದರೂ ಖುಲಾಯಿಸಲಿದೆಯಾ ಎಂದು ಕಾದುನೋಡಬೇಕಿದೆ.

ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ತಂಡದ ನಾಯಕ ಕೆ.ಎಲ್​.ರಾಹುಲ್​, ನನಗೆ ವೈಯಕ್ತಿಕವಾಗಿ ಕಿಂಗ್ಸ್​ ಇಲೆವೆನ್​ ಎಂಬ ಹೆಸರು ಪ್ರಿಯವಾದದ್ದು, ಆದರೆ ವಾಸ್ತವದಲ್ಲಿ ಈ ತಂಡ ಕೇವಲ 11 ಜನರಿಗಷ್ಟೇ ಸೀಮಿತವಾಗಿದ್ದಲ್ಲ. ಹೀಗಾಗಿ ತಂಡದಲ್ಲಿರುವ ಎಲ್ಲರನ್ನೂ ಪ್ರತಿನಿಧಿಸುತ್ತಾ, ಒಂದು ಕುಟುಂಬದಂತೆ ಕಾಣಿಸಿಕೊಳ್ಳಲು ಈ ಬದಲಾವಣೆ ಆಗಿದೆ. ಕಳೆದ ವರ್ಷ ನಮ್ಮ ತಂಡ ಕೆಲ ಸತ್ಯದ್ಭುತ ಪ್ರದರ್ಶನಗಳನ್ನು ನೀಡಿತ್ತು. ಮುಗಿದೇ ಹೋಯಿತು ಎಂಬ ಪಂದ್ಯಾವಳಿಗಳನ್ನೂ ನಂಬಲಾಗದ ರೀತಿಯಲ್ಲಿ ಗೆದ್ದಿದ್ದೇವೆ. ಗೆಲುವಿನ ಸನಿಹಕ್ಕೆ ಬಂದಿದ್ದ ನಾವು ಇನ್ನು ಕೆಲವು ಪಂದ್ಯಗಳನ್ನು ಗೆಲ್ಲಬಹುದಿತ್ತು ಎಂದು ಅನೇಕ ಬಾರಿ ಅನ್ನಿಸಿದೆ. ಈಗ ಈ ಬದಲಾವಣೆ ನಮಗೆ ಹೊಸ ಅದೃಷ್ಟ ತಂದುಕೊಡುವ ಭರವಸೆ ಇದೆ ಎಂದು ಹೇಳಿದ್ದಾರೆ. ಇನ್ನು ತಂಡದ ಫ್ರಾಂಚೈಸಿ ಮೋಹಿತ್​ ಬುರ್ಮಾನ್​, ಎಲ್ಲ ವಿಚಾರದಲ್ಲಿಯೂ ಬದಲಾವಣೆ ಇದ್ದೇ ಇರುತ್ತದೆ. ಹೊಸತನವನ್ನು ನೀಡಲು, ಹೊಸ ಉತ್ಸಾಹವನ್ನು ತುಂಬಲು ಬದಲಾವಣೆ ಸಹಕರಿಸುತ್ತದೆ. ಅಂತೆಯೇ ನಾವು ಕೂಡ ಹೊಸತನದೊಂದಿಗೆ ಮಿಂಚುವ ಸಲುವಾಗಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಂಡದ ಸಿಇಓ ಸತೀಶ್ ಮೆನನ್, ಹೆಸರು ಹಾಗೂ ಲೋಗೋ ಬದಲಾದ ತಕ್ಷಣ ನಮ್ಮ ರೀತಿನೀತಿಗಳು ಬದಲಾಗುವುದಿಲ್ಲ. ಈ ಬದಲಾವಣೆ ಏನಿದ್ದರೂ ಹೊಸತನ್ನು ಸ್ವಾಗತಿಸುವುದಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಬದಲಾವಣೆ ಕುರಿತು ರಾಜಸ್ಥಾನ್ ರಾಯಲ್ಸ್​ ಪ್ರತಿಕ್ರಿಯೆ ಏನು ಬದಲಾವಣೆ ಆಗಬಹುದೆಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಪಂಜಾಬ್​ ತಂಡದ ಅಭಿಮಾನಿಗಳು ಸಹ ಹೊಸ ಹೆಸರು ಮತ್ತು ಲೋಗೋವನ್ನು ನೋಡಿ ಸಂತಸಪಟ್ಟಿದ್ದು, ತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ. ಅಂತೆಯೇ ಕೆಲವರು ಹೊಸ ಹೆಸರು ಚೆನ್ನಾಗಿಲ್ಲ, ಯಾವುದೋ ಲೋಕಲ್​ ಡಾಭಾ ಹೆಸರು ಇದ್ದ ಹಾಗಿದೆ. KXIP ಎಂದು ಕರೆಯಲು ಚೆನ್ನಾಗಿತ್ತು ಈಗ PBKS ಎನ್ನುವುದು ಕೆಟ್ಟದಾಗಿ ಕೇಳಿಸುತ್ತೆ ಎಂದೂ ಹೇಳಿದ್ದಾರೆ. ಈ ಬದಲಾವಣೆಗೆ ರಾಜಸ್ಥಾನ್​ ರಾಯಲ್ಸ್​ ತಂಡ ಕೂಡ ಪ್ರತಿಕ್ರಿಯಿಸಿದ್ದು, ನಿಮ್ಮ ಹೆಸರು ಬದಲಾಗಿರಬಹುದು ಆದರೆ ನಿಮ್ಮನ್ನು ಎದುರು ನೋಡಲು ನಮ್ಮಲ್ಲಿರುವ ಉತ್ಸಾಹ ಹಿಂದಿನಂತೆಯೇ ಇರಲಿದೆ ಎಂದು ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ: ಐಪಿಎಲ್ 2021 ಹರಾಜು ಪ್ರಕ್ರಿಯೆ ವೇಳೆ ಫ್ರಾಂಚೈಸಿಗಳು ಪಾಲಿಸಲೇಬೇಕಾದ 5 ನಿಯಮಗಳು

Follow us on

Related Stories

Most Read Stories

Click on your DTH Provider to Add TV9 Kannada