ಕೆಲವು ಆಟಗಾರರು ಹಾಗೂ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಕಂಡುಬಂದ ಕಾರಣ ಐಪಿಎಲ್ 2021 ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ನಿಲ್ಲಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ಐಪಿಎಲ್ 2021ನ್ನು ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ಬೃಹತ್ ಟೂರ್ನಿಯನ್ಮು ತಡೆದದ್ದರಿಂದ ಬಿಸಿಸಿಐಗೆ ಬಹಳಷ್ಟು ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಐಪಿಎಲ್ ಸರಣಿಯನ್ನು ಅಷ್ಟು ಸುಲಭವಾಗಿ ಕೈಬಿಡುಬ ಯೋಚನೆ ಬಿಸಿಸಿಐಗೆ ಖಂಡಿತಾ ಇಲ್ಲ ಎನ್ನಲಾಗುತ್ತಿದೆ.
ಐಪಿಎಲ್ 2021ರ ಆರಂಭದ ವೇಳೆಯಲ್ಲಿ ಕೂಡ ಐಪಿಎಲ್ ಸಂಘಟಿಸಬೇಕೆ, ಬೇಡವೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಕೊವಿಡ್ ಸಾಂಕ್ರಾಮಿಕದ ಕಾಲದಲ್ಲಿ ಐಪಿಎಲ್ ನಡೆಸುವುದು ಸೂಕ್ತವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಸಿಸಿಐ ಅಂಥಾ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳಲಿಲ್ಲ. ಐಪಿಎಲ್‌ನ 14ನೇ ಆವೃತ್ತಿಯನ್ನು ಹೇಗಾದರೂ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಸರಣಿಯನ್ನು ಮುಂದೂಡಲು ಕೂಡ ಒಲವು ತೋರಿರಲಿಲ್ಲ.
ಆದರೆ, ಕಳೆದ ಕೆಲವು ದಿನಗಳಲ್ಲಿ ಚಿತ್ರಣ ಸಂಪೂರ್ಣ ಬದಲಾವಣೆ ಕಂಡಿತು. ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಕೆಲ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗದ ಜನರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತು. ಆದರೆ, ಆದಷ್ಟು ಶೀಘ್ರದಲ್ಲಿ ಮತ್ತು ಸೂಕ್ತ ರೀತಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ ಬಿಸಿಸಿಐ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಹತ್ತು ದಿನಗಳಲ್ಲೇ ಐಪಿಎಲ್ ಸಂಘಟಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ ಎಂದೂ ಮಾತುಗಳು ಕೇಳಿಬಂದಿವೆ. ಫ್ರಾಂಚೈಸಿಯ ಕೊರೊನಾ ಸೋಂಕಿತರಿಗೆ ಬೇಕಾದ ಕ್ವಾರಂಟೈನ್ ಅವಧಿಯನ್ನು ಕೂಡ ಬಿಸಿಸಿಐ ಲೆಕ್ಕ ಹಾಕಿದೆ. ಈ ವಿಧದಲ್ಲಿ ಸಂಸ್ಥೆ ಐಪಿಎಲ್ ನಡೆಸಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಐಪಿಎಲ್ ನಡೆಸಲು ಇದೆ ಈ ಮೂರು ಆಯ್ಕೆಗಳು:
ಐಪಿಎಲ್ ನಡೆಸಲು ಬಿಸಿಸಿಐಗೆ ಎರಡು ಮೂರು ಆಯ್ಕೆಗಳು ಇವೆ. ಅವುಗಳಲ್ಲಿ ಮೊದಲನೆಯದು ಮುಂಬೈನಲ್ಲಿ ಒಂದೇ ಕಡೆ ಮುಂದಿನ ಪಂದ್ಯಗಳನ್ನು ಸಂಘಟಿಸುವುದು. ಮುಂಬೈನಲ್ಲಿ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಗಳಿವೆ. ವಾಂಖೆಡೆ, ಬ್ರಬೋರ್ನ್ ಸ್ಟೇಡಿಯಂ ಹಾಗೂ ಮುಂಬೈ ಜಿಮ್ನಾಸಿಯಂ ಮೈದಾನ. ಪಂದ್ಯಕ್ಕಾಗಿ ಒಂದೇ ಸ್ಥಳದಲ್ಲಿ ತಂಗುವುದು ಸೂಕ್ತವಾಗಿದೆ. ಸ್ಥಳೀಯ ಹೊಟೇಲ್ಗಳಲ್ಲಿ ವಾಸ್ತವ್ಯದ ವ್ಯವಸ್ಥೆಯ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂಬ ಸುದ್ದಿ ಇದೆ. ಸಂಪೂರ್ಣ ಬಯೋ ಬಬಲ್ನಲ್ಲಿ ಪಂದ್ಯ ನಡೆಸುವುದು ಮೊದಲ ಆಯ್ಕೆಯಾಗಿದೆ.
ಎರಡನೇ ಆಯ್ಕೆಯಾಗಿ ಉಳಿದ ಐಪಿಎಲ್ ಪಂದ್ಯವನ್ನು ಜೂನ್ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಜೂನ್ನಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ತಗ್ಗುವ ನಿರೀಕ್ಷೆ ಇದೆ. ಹಾಗಾಗಿ ಆ ವೇಳೆ ಐಪಿಎಲ್ ಸಂಘಟಿಸುವ ಅವಕಾಶವಿದೆ. ಇದಕ್ಕೆ ಅಡೆತಡೆ ಎಂದರೆ, ಜೂನ್ನಲ್ಲಿ ಭಾರತ- ನ್ಯೂಜಿಲ್ಯಾಂಡ್ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ಐಪಿಎಲ್ ನಡೆಯುವುದಾದರೆ, ಟೆಸ್ಟ್ ಚಾಂಪಿಯನ್ಶಿಪ್ನ್ನು ಮುಂದೂಡಬೇಕಾಗಿ ಬರಬಹುದು. ಟೆಸ್ಟ್ ಪಂದ್ಯವು ಜೂನ್ 18ರಂದು ನ್ಯೂಜಿಲ್ಯಾಂಡ್ನ ಸೌತಂಪ್ಟನ್ನಲ್ಲಿ ನಡೆಯಲಿದೆ. ಇದಕ್ಕೆ ಬಿಸಿಸಿಐ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ಈ ಎರಡನೇ ಆಯ್ಕೆ ಕೂಡ ಅಸಾಧ್ಯವಾದರೆ, ಐಪಿಎಲ್ 2021 ಸರಣಿಯನ್ನು ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಟಿ20 ವಿಶ್ವಕಪ್ಗೂ ಮೊದಲು ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ. ಟಿ20 ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಬೇಕಿದೆ. ಒಂದುವೇಳೆ, ಆಗಲೂ ಕೊರೊನಾ ಅಲೆ ತಗ್ಗದಿದ್ದರೆ, ಟಿ20 ವಿಶ್ವಕಪ್ ಯುಎಇನಲ್ಲಿ ನಡೆಯಲಿದೆ. ಅದೇ ವೇಳೆಗೆ ಐಪಿಎಲ್ ಸರಣಿಯನ್ನೂ ನಡೆಸುವ ಉದ್ದೇಶವನ್ನು ಬಿಸಿಸಿಐ ಹೊಂದಿದೆ.
ಇದನ್ನೂ ಓದಿ: IPL 2021: ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಆಸಿಸ್ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲು ಹೊಸ ಉಪಾಯ, ಬಿಸಿಸಿಐ ಸಹಾಯ!
IPL 2021: ಐಪಿಎಲ್ ಹಣೆಬರಹವನ್ನು ನಿರ್ಧರಿಸಿತು 10 ನಿಮಿಷಗಳ ಆನ್ಲೈನ್ ಸಭೆ; ಇಲ್ಲಿದೆ ವಿವರ
Published On - 8:56 am, Thu, 6 May 21