IPL 2021: ಐಪಿಎಲ್ ಹಣೆಬರಹವನ್ನು ನಿರ್ಧರಿಸಿತು 10 ನಿಮಿಷಗಳ ಆನ್‌ಲೈನ್ ಸಭೆ; ಇಲ್ಲಿದೆ ವಿವರ
ಬಿಸಿಸಿಐ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಿ ನಂತರ ಸೂಕ್ತ ರೀತಿಯಲ್ಲಿ ಪಂದ್ಯಗಳನ್ನು ನಡೆಸಲು ಯೋಚಿಸಿತು. ಆದರೆ ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯು ತುಂಬಾ ದೊಡ್ಡ ಅಪಾಯವೆಂದು ಮನಗಂಡು ಸರಣಿ ನಿಲ್ಲಿಸುವುದೇ ಸರಿ ಎಂದು ತೀರ್ಮಾನಿಸಲಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿಯ ಆನ್‌ಲೈನ್ ಸಭೆ ಮಂಗಳವಾರ ಬೆಳಿಗ್ಗೆ ಕೇವಲ 10 ನಿಮಿಷಗಳ ಕಾಲ ನಡೆಯಿತು. ಈ ವೇಳೆ ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಮುಂದೂಡಲು ನಿರ್ಧರಿಸಲಾಯಿತು. ಸರಣಿಯಲ್ಲಿ ಭಾಗವಹಿಸಿದ್ದ ಕೆಲ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟ ಕಾರಣ ಟೂರ್ನಿಯನ್ನು ಮುಂದುವರಿಸಲಾಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಷಾ ತಿಳಿಸಿದರು. ಆಟಗಾರರ ಸುರಕ್ಷತೆ ಅತ್ಯಂತ ಮುಖ್ಯ ಮತ್ತು ಪಂದ್ಯಾವಳಿಯನ್ನು ಮುಂದೂಡುವುದು ಈಗಿರುವ ಒಂದೇ ಆಯ್ಕೆಯಾಗಿದೆ ಎಂದು ಕಾರ್ಯದರ್ಶಿ ಜೇ ಷಾ ಸದಸ್ಯರಿಗೆ ತಿಳಿಸಿದರು.
ಸಭೆಯಲ್ಲಿ ಸದಸ್ಯರೊಬ್ಬರು ಪಂದ್ಯಾವಳಿ ಮುಂದುವರಿಯಬೇಕೆಂದು ಬಯಸಿದ್ದರು, ಆದರೆ ಬಹುಮತವು ಸದ್ಯಕ್ಕೆ ಟೂರ್ನಿಯನ್ನು ಮುಂದೂಡುವ ಪರವಾಗಿತ್ತು. ಭಾರತದಲ್ಲಿ ಹದಗೆಟ್ಟಿರುವ ಸಾಂಕ್ರಾಮಿಕ ರೋಗದ ಮಧ್ಯೆ ಬಿಸಿಸಿಐ ನಡೆಸುತ್ತಿದ್ದ ಪಂದ್ಯಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. 29 ಪಂದ್ಯಗಳನ್ನು ಆಡಿ 31 ಪಂದ್ಯಗಳನ್ನು ನಡೆಸಲು ಉಳಿದಿರುವಾಗ ಅರ್ಧಕ್ಕೆ ಸರಣಿ ನಿಲ್ಲಿಸಬೇಕಾಯಿತು.
ಎರಡೂ ನಗರಗಳು ಹೊಸ ಕೋವಿಡ್ -19 ಪ್ರಕರಣಗಳಲ್ಲಿ ನಿಗದಿತ ಏರಿಕೆಗೆ ಸಾಕ್ಷಿಯಾಗುತ್ತಿರುವುದರಿಂದ ಮುಂದಿನ ಹಂತದ ಪಂದ್ಯದ ಸ್ಥಳಗಳಾದ ಕೋಲ್ಕತಾ ಮತ್ತು ಬೆಂಗಳೂರಿಗೆ ಪ್ರಯಾಣಿಸಲು ಆಟಗಾರರು ಜಾಗರೂಕರಾಗಿದ್ದರು. ಪ್ರಯಾಣವನ್ನು ಕಡಿಮೆ ಮಾಡಲು ಒಂದೇ ನಗರದಲ್ಲಿ ಎಲ್ಲಾ ತಂಡಗಳಿಗೆ ಹೊಸ ಬಯೋ ಬಬ್ ಸ್ಥಾಪಿಸುವುದು ಅಪ್ರಾಯೋಗಿಕ ಎಂದು ಬಿಸಿಸಿಐ ಅಧಿಕಾರಿಗಳು ಕೂಡ ಅರ್ಥಮಾಡಿಕೊಂಡರು.
ಬಿಸಿಸಿಐ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಿ ನಂತರ ಸೂಕ್ತ ರೀತಿಯಲ್ಲಿ ಪಂದ್ಯಗಳನ್ನು ನಡೆಸಲು ಯೋಚಿಸಿತು. ಆದರೆ ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯು ತುಂಬಾ ದೊಡ್ಡ ಅಪಾಯವೆಂದು ಮನಗಂಡು ಸರಣಿ ನಿಲ್ಲಿಸುವುದೇ ಸರಿ ಎಂದು ತೀರ್ಮಾನಿಸಲಾಯಿತು.
ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾದ ಕಾರಣ ಪಂದ್ಯಾವಳಿಯನ್ನು ಮುಂದೂಡುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ನಾವು ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಪ್ರೋಟೋಕಾಲ್‌ಗಳನ್ನು ಪಾಲಿಸಿದ್ದೇವೆ ಆದರೆ ವೈರಾಣು ಒಳನುಸುಳಿದೆ. ನಾವು ಚರ್ಚೆ ನಡೆಸಿ ಪಂದ್ಯಾವಳಿಯನ್ನು ಮುಂದೂಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇವೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದರು.
ಆಟಗಾರರು, ಸಿಬ್ಬಂದಿ ಮತ್ತು ಐಪಿಎಲ್ ಸಂಘಟನೆಯಲ್ಲಿ ಪಾಲ್ಗೊಳ್ಳುವ ಇತರರ ಸುರಕ್ಷತೆಯ ಬಗ್ಗೆ ಬಿಸಿಸಿಐ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಎಲ್ಲಾ ಪಾಲುದಾರರ ಸುರಕ್ಷತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದು ಕಷ್ಟಕರ ಸಮಯ, ವಿಶೇಷವಾಗಿ ಭಾರತದಲ್ಲಿ, ನಾವು ಕೆಲ ಸಕಾರಾತ್ಮಕ ಭಾವನೆ ಮತ್ತು ಸಂತಸ ತರಲು ಪ್ರಯತ್ನಿಸಿದ್ದರೂ, ಪಂದ್ಯಾವಳಿಯನ್ನು ಈಗ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಐಪಿಎಲ್ 2021 ರಲ್ಲಿ ಭಾಗವಹಿಸಿದ ಎಲ್ಲರನ್ನೂ ಸುರಕ್ಷಿತವಾಗಿ ಮರಳಿ ಕಳುಹಿಸಲು ಬಿಸಿಸಿಐ ಎಲ್ಲ ರೀತಿಯಿಂದಲೂ ಶ್ರಮಿಸುತ್ತದೆ ಎಂದು ಬಿಸಿಸಿಐ ಹೇಳಿತ್ತು.
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಭಾಗಿಯಾಗಿದ್ದ ಆಸಿಸ್ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲು ಹೊಸ ಉಪಾಯ, ಬಿಸಿಸಿಐ ಸಹಾಯ!
(IPL 2021 10 mins online meeting decided fate of IPL BCCI about Covid19 Crisis)
Published On - 6:50 pm, Wed, 5 May 21