ನಿಮ್ಮ ಕೈಗಳು ರಕ್ತದಿಂದ ತೋಯ್ದು ಹೋಗಿವೆ! ಆಸ್ಟ್ರೇಲಿಯಾ ಪ್ರಧಾನಿ ನಿರ್ಧಾರಕ್ಕೆ ಕೆಂಡಕಾರಿದ ಮಾಜಿ ಆಸಿಸ್ ಕ್ರಿಕೆಟಿಗ

| Updated By: Skanda

Updated on: May 04, 2021 | 7:37 AM

ನಮ್ಮ ಸರ್ಕಾರವು ಆಸ್ಟ್ರೇಲಿಯಾದ ಜನರ ಸುರಕ್ಷತೆಯನ್ನು ಬಯಸಿದ್ದರೆ, ಅವರು ನಮ್ಮನ್ನು ಮನೆಗೆ ಹೋಗಲು ಬಿಡುತ್ತಿದ್ದರು ಎಂದು ಸ್ಲೇಟರ್ ಟ್ವೀಟ್ ಮಾಡಿದ್ದಾರೆ.

ನಿಮ್ಮ ಕೈಗಳು ರಕ್ತದಿಂದ ತೋಯ್ದು ಹೋಗಿವೆ! ಆಸ್ಟ್ರೇಲಿಯಾ ಪ್ರಧಾನಿ ನಿರ್ಧಾರಕ್ಕೆ ಕೆಂಡಕಾರಿದ ಮಾಜಿ ಆಸಿಸ್ ಕ್ರಿಕೆಟಿಗ
ಮೈಕೆಲ್ ಸ್ಲೇಟರ್
Follow us on

ಭಾರತದಲ್ಲಿ ಕೊರೊನಾ ಎರಡನೇ ಅಲೆ ಈ ಸಮಯದಲ್ಲಿ ಸಾಕಷ್ಟು ಹಾನಿಯನ್ನುಂಟುಮಾಡಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ನಿಯಂತ್ರಿಸಲಾಗುತ್ತಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಮತ್ತು ಜನರಿಗೆ ಒಂದಾದರ ಮೇಲೆ ಒಂದರಂತೆ ಸಮಸ್ಯೆಗಳು ಎದುರಾಗುತ್ತಿವೆ. ಅನೇಕ ದೇಶಗಳು ಭಾರತದಿಂದ ಬರುವ ವಿಮಾನಗಳನ್ನು ನಿಷೇಧಿಸಿವೆ. ಅವುಗಳ ಪೈಕಿ ಆಸ್ಟ್ರೇಲಿಯಾ ಸಹ ಇದೆ. ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ತಮ್ಮ ದೇಶದ ಜನರಿಗೆ ವಿಮಾನಯಾನವನ್ನು ನಿಷೇಧಿಸುವುದರ ಜೊತೆಗೆ ಬೀಗಮುದ್ರೆ ವಿಧಿಸಿದೆ. ಮೇ 15 ರವರೆಗೆ ಯಾವುದೇ ಆಸ್ಟ್ರೇಲಿಯಾದವರು ತಮ್ಮ ದೇಶವನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅವರು ನಿಯಮಗಳನ್ನು ಮುರಿಯಲು ಪ್ರಯತ್ನಿಸಿದರೆ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ದೇಶದ ಜನರಿಗೆ ಹೆಚ್ಚಿನ ಹೊರೆಯಾಗದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ,  ಆರಂಭಿಕ ಆಟಗಾರ ಮೈಕೆಲ್ ಸ್ಲೇಟರ್ ತಮ್ಮ ದೇಶದ ಸರ್ಕಾರದ ಈ ನಿರ್ಧಾರವನ್ನು ಮತ್ತು ಅಲ್ಲಿನ ಪ್ರಧಾನ ಮಂತ್ರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸ್ಲೇಟರ್ ಐಪಿಎಲ್ -14 ರಲ್ಲಿ ಕಾಮೆಂಟೆಟರ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಅವರು ಐಪಿಎಲ್ ತೊರೆದು ಮಾಲ್ಡೀವ್ಸ್‌ಗೆ ಹೋಗುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಗಳಿವೆ.

ಟ್ವೀಟ್ ಮಾಡುವ ಮೂಲಕ ಪಿಎಂಗೆ ಟಾಂಗ್
ಮಾರಿಸನ್ ಟ್ವೀಟ್​ಗೆ ಮರು ಟ್ವೀಟ್​ ಮಾಡಿರುವ ಸ್ಲೇಟರ್, ನಿಮ್ಮ ಕೈಗಳು ರಕ್ತದಿಂದ ತೋಯ್ದು ಹೋಗಿವೆ ಎಂದಿದ್ದಾರೆ . ನಮ್ಮ ಸರ್ಕಾರವು ಆಸ್ಟ್ರೇಲಿಯಾದ ಜನರ ಸುರಕ್ಷತೆಯನ್ನು ಬಯಸಿದ್ದರೆ, ಅವರು ನಮ್ಮನ್ನು ಮನೆಗೆ ಹೋಗಲು ಬಿಡುತ್ತಿದ್ದರು ಎಂದು ಸ್ಲೇಟರ್ ಟ್ವೀಟ್ ಮಾಡಿದ್ದಾರೆ. ನಮ್ಮನ್ನು ಈ ರೀತಿ ಪರಿಗಣಿಸಲು ನಿಮಗೆ ಎಷ್ಟು ಧೈರ್ಯ. ನೀವು ಸಂಪರ್ಕತಡೆಯನ್ನು ಹೇಗೆ ನಿರ್ವಹಿಸುತ್ತಿದ್ದೀರಿ. ಐಪಿಎಲ್‌ನಲ್ಲಿ ಕೆಲಸ ಮಾಡಲು ನನಗೆ ಸರ್ಕಾರದ ಅನುಮತಿ ಇತ್ತು, ಆದರೆ ಈಗ ನನ್ನನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದಿದ್ದಾರೆ.

ಸರ್ಕಾರ ಮೊದಲಿನಿಂದಲೂ ಟೀಕೆಗೆ ಗುರಿಯಾಗಿದೆ
ಆಸ್ಟ್ರೇಲಿಯಾ ದೇಶದ ಸರ್ಕಾರದ ಮೇಲೆ ಮುರಿದುಬಿದ್ದವರಲ್ಲಿ ಸ್ಲೇಟರ್ ಒಬ್ಬರೇ ಏನಿಲ್ಲ. ಇದಕ್ಕೂ ಮುನ್ನ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿಯ ಎರಿಕ್ ಪಾರ್ಟಲು ಕೂಡ ತಮ್ಮ ಸರ್ಕಾರವನ್ನು ಟೀಕಿಸಿದ್ದಾರೆ. ಪಾರ್ಟಲು ಟ್ವಿಟ್ಟರ್ ಮೂಲಕ ತಮ್ಮ ಕೋಪವನ್ನು ಹೊರಹಾಕಿದ್ದರು.

ಕೆಲವು ಆಟಗಾರರು ಐಪಿಎಲ್ ತೊರೆದಿದ್ದಾರೆ
ಇದಕ್ಕೂ ಮುನ್ನ, ಆಸ್ಟ್ರೇಲಿಯಾದ ಕೆಲವು ಆಟಗಾರರು ಐಪಿಎಲ್ ಅನ್ನು ಮಧ್ಯದಲ್ಲಿ ತೊರೆದಿದ್ದಾರೆ ಮತ್ತು ಇದಕ್ಕೆ ಕಾರಣ ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳು ಎನ್ನುವುದೂ ಗುಟ್ಟಾಗಿ ಉಳಿದಿಲ್ಲ. ಆಡಮ್ ಜಂಪಾ, ಕೇನ್ ರಿಚರ್ಡ್ಸನ್ ಮತ್ತು ಆಂಡ್ರ್ಯೂ ಟೈ ಅವರು ಐಪಿಎಲ್ -14 ಮಿಡ್ವೇಯಿಂದ ಹೊರಬಂದ ಆಸ್ಟ್ರೇಲಿಯಾದ ಆಟಗಾರರು. ಜಂಪಾ ಮತ್ತು ಕೇನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರೆ, ಟೈ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಜಂಪಾ ಐಪಿಎಲ್ ಬಯೋ ಬಬಲ್ ಅನ್ನು ಸಹ ಪ್ರಶ್ನಿಸಿದ್ದರು. ಸದ್ಯ ಮೇ 15 ರವರೆಗೆ ಭಾರತದಿಂದ ಬರುವ ವಿಮಾನಗಳನ್ನು ಆಸ್ಟ್ರೇಲಿಯಾ ಸರ್ಕಾರ ನಿಷೇಧಿಸಿದ್ದು ಮುಂದೆ ಏನಾಗಲಿದೆ ಎಂದು ನೋಡಬೇಕಿದೆ.