ಐಪಿಎಲ್ 17ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಸರಣಿಯಲ್ಲಿ ಮೊದಲ ಹಾಗೂ ಕೊನೆಯ ಬಾರಿ ಮುಖಾಮುಖಿಯಾಗಿವೆ. ಏಕೆಂದರೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿವಿಧ ಗುಂಪುಗಳಲ್ಲಿದ್ದು, ಈ ಸೀಸನ್ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಲಿವೆ. ಇದಲ್ಲದೆ ಲೀಗ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಉಭಯ ತಂಡಗಳಿಗೂ ಗೆಲುವು ಬಹಳ ಮುಖ್ಯ. ಇಲ್ಲದಿದ್ದರೆ, ಪ್ಲೇಆಫ್ ಹಾದಿ ಎರಡೂ ತಂಡಗಳಿಗೂ ಕಷ್ಟವಾಗಲಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಬಹಿರಂಗವಾಗಿದೆ.
ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಎರಡು ತಂಡಗಳ ನಡುವೆ 32 ಪಂದ್ಯಗಳು ನಡೆದಿವೆ. ಅದರಲ್ಲಿ ಮುಂಬೈ 18 ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು 14 ಪಂದ್ಯಗಳನ್ನು ಗೆದ್ದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ ನಡೆದ ಪಂದ್ಯಗಳ ಬಗ್ಗೆ ಹೇಳುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 10 ಪಂದ್ಯಗಳು ನಡೆದಿದ್ದು, ಅದರಲ್ಲಿ 7 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಮತ್ತು 3 ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದೆ. ಇದರರ್ಥ ಐಪಿಎಲ್‌ನಲ್ಲಿ ಆರ್ಸಿಬಿ ವಿರುದ್ಧ ಮುಂಬೈ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ.