ಹಣದ ಹೊಳೆಯನ್ನೇ ಹರಿಸುವ ಆಟ ಎಂದು ಪ್ರಸಿದ್ಧವಾಗಿರುವ ಐಪಿಎಲ್ನಲ್ಲಿ ಈ ಬಾರಿ ಆಟಗಾರರಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹರಾಜು ಪ್ರಕ್ರಿಯೆಯ ಭಾಗವಾಗಿರುವ 8 ತಂಡಗಳೂ ಅತ್ಯುತ್ತಮ ಆಟಗಾರರಿಗಾಗಿ ಸೆಣೆಸಾಟ ನಡೆಸುತ್ತಿದ್ದು, ಉತ್ತಮರಲ್ಲಿ ಉತ್ತಮರು ನಮ್ಮ ಪಾಲಾಗಬೇಕೆಂಬ ಕಾರಣಕ್ಕೆ ಬಹಳ ಲೆಕ್ಕಾಚಾರದೊಂದಿಗೆ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಕ್ರಿಸ್ ಮೋರಿಸ್: ಇದುವರೆಗೆ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಎಂಬ ಖ್ಯಾತಿಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಪಾತ್ರವಾಗಿದ್ದಾರೆ. ಬರೋಬ್ಬರಿ ₹16.25 ಕೋಟಿಗೆ ಹರಾಜಾಗಿರುವ ಮೋರಿಸ್, ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಕ್ರಿಸ್ ಮೋರಿಸ್ ಅವರ ಮೂಲಬೆಲೆ ₹75 ಲಕ್ಷವಾಗಿದ್ದು ಕಳೆದ ಬಾರಿ ಬೆಂಗಳೂರು ತಂಡ ಅವರನ್ನು ಖರೀದಿಸಿ ನಂತರ ರಿಲೀಸ್ ಮಾಡಿತ್ತು.
ಗ್ಲೆನ್ ಮ್ಯಾಕ್ಸ್ವೆಲ್: ಗ್ಲೆನ್ ಮ್ಯಾಕ್ಸ್ವೆಲ್ಗೆ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ₹14.25ಕೋಟಿಗೆ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ. ಕಳೆದ ಬಾರಿ ಪಂಜಾಬ್ ತಂಡದಲ್ಲಿ ನೀರಸ ಪ್ರದರ್ಶನ ತೋರಿದ್ದ ಮ್ಯಾಕ್ಸ್ವೆಲ್ ನಂತರ ಆಸ್ಟ್ರೇಲಿಯಾದಲ್ಲಿ ಆಡುವಾಗ ಅಬ್ಬರಿಸಿದ್ದರು. ಅವರ ಈ ಪ್ರದರ್ಶನವೇ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ, ಸ್ವತಃ ಮ್ಯಾಕ್ಸ್ವೆಲ್ ಆರ್‌ಸಿಬಿ ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದರಿಂದ ಅವರನ್ನು ಬೆಂಗಳೂರು ತಂಡ ಖರೀದಿಸಬಹುದು ಎಂಬ ಮಾತುಗಳು ಹರಿದಾಡುತ್ತಿದ್ದವು. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಮೂಲಬೆಲೆ ₹2ಕೋಟಿಯಾಗಿದ್ದು, ಕಳೆದ ಬಾರಿ ₹10.75 ಕೋಟಿಗೆ ಪಂಜಾಬ್ ತಂಡದ ಪಾಲಾಗಿದ್ದರು. ಆದರೆ, ಈ ವರ್ಷ ಪಂಜಾಬ್ ತಂಡವು ಮ್ಯಾಕ್ಸ್ವೆಲ್ ಅವರ ಕೈಬಿಟ್ಟಿದ್ದು, ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಊಹಿಸದ ರೀತಿಯಲ್ಲಿ ಬೇಡಿಕೆ ವ್ಯಕ್ತವಾಗಿ ಕೊನೆಗೆ ಆರ್‌ಸಿಬಿ ಪಾಲಾಗಿದ್ದಾರೆ.
ಜೇ ರಿಚರ್ಡ್ಸನ್ : ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿರುವ ಪಂಜಾಬ್ ಕಿಂಗ್ಸ್ ಬೌಲಿಂಗ್ ವಲಯದ ಬಲ ಹೆಚ್ಚಿಸಲು ಗಮನ ಹರಿಸಿದಂತೆ ಕಾಣುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಬಿಡ್ಡಿಂಗ್ ವಾರ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ₹14 ಕೋಟಿ ನೀಡಿ ಆಸಿಸ್ ವೇಗಿ ಜೇ ರಿಚರ್ಡ್ಸನ್ ಅವರನ್ನು ಖರೀದಿ ಮಾಡಿದೆ.
ಕೆ.ಗೌತಮ್: ಕನ್ನಡಿಗ ಕೆ ಗೌತಮ್ ₹9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಗೌತಮ್ ಅವರನ್ನು ಕೊಳ್ಳಲು ಆರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿಗಿಳಿದಿದ್ದವು. ನಂತರ ಬಂದ ಚೆನ್ನೈ, ಉಳಿದ ತಂಡಗಳನ್ನೆಲ್ಲಾ ಮೀರಿಸಿ ₹9. 25 ಕೋಟಿಗೆ ಗೌತಮ್ ಅವರನ್ನು ಕೊಂಡುಕೊಂಡಿತು.
ರಿಲೇ ಮೆರೆಡಿತ್: ಆಸ್ಟ್ರೇಲಿಯಾದ ಆಟಗಾರ ರಿಲೇ ಮೆರೆಡಿತ್ ಬರೋಬ್ಬರಿ ₹8 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದಾರೆ. ಮೆರೆಡಿತ್ ಅವರನ್ನು ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮೆರೆಡಿತ್ ಅವರನ್ನು ಪಡೆಯುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.
ಕೈಲ್ ಜೇಮಿಸ್ಸನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ಲೆನ್ ಮ್ಯಾಕ್ಸ್ವೆಲ್ಗೆ ₹14.25ಕೋಟಿ ನೀಡಿ ಹುಬ್ಬೇರುವಂತೆ ಮಾಡಿತ್ತು. ಆದರೆ, ಈಗ ಅವರನ್ನೂ ಮೀರಿಸಿ ನ್ಯೂಜಿಲೆಂಡ್‌ನ 7 ಅಡಿ ಎತ್ತರದ ವೇಗದ ಬೌಲರ್ ಕೈಲ್ ಜೇಮಿಸ್ಸನ್ ಅವರಿಗೆ ₹15 ಕೋಟಿ ನೀಡಿ ಖರೀದಿ ಮಾಡಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ತಂಡದ ನಡುವೆ ಬಿಡ್ಡಿಂಗ್ ವಾರ್ ನಡೆಸಿದ ಆರ್‌ಸಿಬಿ ಭಾರಿ ಪೈಪೋಟಿ ಕೊಟ್ಟು ಕೈಲ್ ಜೇಮಿಸ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
Published On - 3:45 pm, Thu, 18 February 21