ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League – IPL) ಟೂರ್ನಿಯಲ್ಲಿ ಪ್ರತಿಬಾರಿಯೂ ಆರ್‌ಸಿಬಿ (Royal Challengers Bangalore – RCB) ಈವರೆಗೆ ಎಲ್ಲಾ ಆವೃತ್ತಿಗಳಲ್ಲೂ ಕಪ್ ಗೆಲ್ಲುವ ಆಸೆಯೊಂದಿಗೆ ಕಣಕ್ಕಿಳಿಯುತ್ತದೆ. ಆದರೆ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿ ಸರಣಿಯಿಂದ ಹೊರನಡೆಯುತ್ತದೆ. ಮೂರು ಬಾರಿ ಫೈನಲ್ ತಲುಪಿದರೂ ಕೂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇರುವುದು ತಂಡದ ದುರಾದೃಷ್ಟವೇ ಸರಿ. ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಪ್ ಗೆಲ್ಲುವ ವಿಶ್ವಾಸವಿದೆ.
2020ರ ಐಪಿಎಲ್ ಆವೃತ್ತಿಯಲ್ಲಿ ನಾಕ್‌ಔಟ್ ಹಂತಕ್ಕೆ ಕಾಲಿಟ್ಟಿದ್ದ ವಿರಾಟ್ ಕೊಹ್ಲಿ ಬಳಗ ಬ್ಯಾಟಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತು ಸನ್‌ರೈಸರ್ಸ್ ಹೈದರಾಬಾದ್ ಎದುರು ಮುಗ್ಗರಿಸಿತ್ತು. ಈ ಮೂಲಕ ಟೂರ್ನಿಯಲ್ಲಿ 4ನೇ ಸ್ಥಾನಿಯಾಗಿ ತನ್ನ ಅಭಿಯಾನ ಅಂತ್ಯಗೊಳಿಸಿತು.
ಇದೀಗ ಐಪಿಎಲ್ 2021ರ ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಪ್ರದರ್ಶನ ಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಕಡೆಗೆ ಗಮನ ಹರಿಸಿದೆ. ಕಳೆದ ಬಾರಿ ನಿರೀಕ್ಷೆಗೆ ತಕ್ಕಂತೆ ಆಟವಾಡದ ಆಟಗಾರರಿಗೆ ಈ ಬಾರಿ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ನಾಳೆ ನಡೆಯುವ ಹರಾಜಿನಲ್ಲಿ ಬ್ಯಾಟಿಂಗ್ ಜೊತೆಗೆ ಮಧ್ಯಮ ಕ್ರಮಾಂಕ ಬಲ ಪಡಿಸಿಕೊಳ್ಳಲು ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು..
ಉಳಿಸಿಕೊಂಡಿರುವ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮಹಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಜೋಶ್ ಫಿಲಿಪೆ, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್
ತಂಡದಿಂದ ಕೈಬಿಟ್ಟ ಆಟಗಾರರು: ಕ್ರಿಸ್ ಮೋರಿಸ್, ಶಿವಂ ದುಬೆ, ಆರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉದಾನಾ, ಗುರ್ಕೀರತ್ ಮನ್.