ನಾವೀಗಾಗಲೇ ಚರ್ಚಿಸಿರುವಂತೆ ಈ ಸಲದ ಐಪಿಎಲ್ ಪಂದ್ಯಗಳು ಖಾಲಿ ಮೈದಾನದಲ್ಲಿ ಮತ್ತು ಟೂರ್ನಿಯ ಗ್ಲಾಮರ್ ಭಾಗವಾಗಿದ್ದ ಚೀರ್ ಲೀಡರ್ಗಳ ಅನುಪಸ್ಥಿತಿಯಲ್ಲಿ ನಡೆಯಲಿವೆ. ಕಳೆದೆಲ್ಲ ಟೂರ್ನಮೆಂಟ್ಗಳಲ್ಲಾದಂತೆ ವಿಜೃಂಭಣೆಯ ಉದ್ಘಾಟನಾ ಸಮಾರಂಭವೂ ಇರುವುದಿಲ್ಲ. ಪ್ಯಾಂಡೆಮಿಕ್ನ ಹರಡುವಿಕೆಯನ್ನು ತಡೆಯಲು ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಆದರೆ, ಟೂರ್ನಿಯನ್ನು ಆಯೋಜಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡಂತಿಲ್ಲ. ಶಾರ್ಜಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘‘ಮೈದಾನಗಳಿಗೆ ಹೋಗಿ ಪಂದ್ಯಗಳನ್ನು ನೋಡುವುದು ಸಾಧ್ಯವಾಗದಿದ್ದರೆ ಜನ ಮನೆಗಳಲ್ಲಿ ಕೂತು ಟಿವಿ ಪರದೆಗಳ ಮೇಲೆ ಅದನ್ನು ವೀಕ್ಷಿಸುತ್ತಾರೆ. ಇದರಿಂದ ಬ್ರಾಡ್ಕಾಸ್ಟರ್ಗಳ ರೇಟಿಂಗ್ ಮುಗಿಲು ಮುಟ್ಟುತ್ತದೆ. ಟಿವಿ ವಿವರ್ಶಿಪ್ ಈ ಸಲ ಹೊಸ ದಾಖಲೆ ನಿರ್ಮಿಸಲಿದೆ,’’ ಎಂದು ಹೇಳಿದರು.
ಐಪಿಎಲ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾತಾಡಿರುವ ರಾಜಸ್ತಾನ ರಾಯಲ್ಸ್ ಟೀಮಿಗೆ ಆಡುವ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ, ‘‘ನಾಲ್ಕಾರು ತಿಂಗಳ ಕಾಲ ಮುಂದೂಡಲ್ಪಟ್ಟು ಈಗ ಆರಂಭವಾಗುತ್ತಿರುವ ಟೂರ್ನಿಯು ಕ್ರಿಕೆಟ್ ಪ್ರೇಮಿಗಳಲ್ಲಿ ನವೋಲ್ಲಾಸ ಮೂಡಿಸಿದೆ, ಮಾನವಕುಲ ಏನೆಲ್ಲ ಅನುಭವಿಸಬೇಕಾಗಿ ಬಂದ ಈ ವರ್ಷ ನಿಜಕ್ಕೂ ವಿಶೇಷವಾಗಿದೆ. ಇದು ನಮಗೆಲ್ಲ ಅನಿಶ್ಚಿತತೆಯ ಸಮಯ, ಕ್ರೀಡಾಪಟುಗಳಾಗಿ ನಾವು ಪರಿಸ್ಥಿತಿ ಸಾಮಾನ್ಯಗೊಳ್ಳುವುದನ್ನು ಎದುರು ನೋಡುತ್ತಿದ್ದೆವು. ಈ ಟೂರ್ನಮೆಂಟ್ ಅಂಥ ಅವಕಾಶವನ್ನು ನಮ್ಮೆಲ್ಲರಿಗೆ ಒದಗಿಸುತ್ತಿದೆ.’’ ಎಂದಿದ್ದಾರೆ.