[yop_poll id=”11″]
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನೈ ಕ್ಯಾಚ್-22 ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ನಿರ್ಭೀತಿಯ ಕ್ರಿಕೆಟ್ ಆಡುವುದಕ್ಕೆ ಖ್ಯಾತವಾಗಿದ್ದ ಮಹೇಂದ್ರಸಿಂಗ್ ಧೋನಿ ನೇತೃತ್ವದ ತಂಡ ಇನ್ನೂ ಟೂರ್ನಿಯ ಅರ್ಧಭಾಗದಲ್ಲೇ ಅಳಿವು ಉಳಿವು ಸ್ಥಿತಿ ಎದುರಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಫೀಯರ್ಲೆಸ್ ಕ್ರಿಕೆಟ್ ಮಂತ್ರವನ್ನು ಟೀಮಿಗೆ ಬೋಧಿಸಿದ್ದೇ ಧೋನಿ. ಆದರೆ ಆವರೇ ಈಗ ನಂಬಲು ಸಾಧ್ಯವಾಗದಷ್ಟು ಡಿಫೆನ್ಸಿವ್ ಆಗಿಬಿಟ್ಟಿದ್ದಾರೆ. ಹೊಡೆತಗಳನ್ನು ಬಾರಿಸುವ ಪ್ರಯತ್ನ ಮಾಡುತ್ತಿರುವರಾದರೂ ಮೊದಲಿನಂತೆ ಅವು ಕನೆಕ್ಟ್ ಆಗುತ್ತಿಲ್ಲ. ಹಿಂದಿನ ಐಪಿಎಲ್ಗಳಲ್ಲಿ ಅವರು ಬ್ಯಾಟ್ ಬೀಸಿದ ಮರುಕ್ಷಣವೇ ಬಾಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಲ್ಯಾಂಡ್ ಆಗುತ್ತಿತ್ತು. ಧೋನಿಗೆ ವಯಸ್ಸಾಗಿಬಿಟ್ಟಿದೆಯೇ ಅಥವಾ ಅವರು ಫಾರ್ಮ್ನಲ್ಲಿಲ್ಲವೇ? ಪ್ರಾಯಶಃ ಎರಡೂ ಸರಿ.
ಸುರೇಶ್ ರೈನಾ ಅವರ ಅನುಪಸ್ಥಿತಿ ಚೆನೈಯನ್ನು ವಿಪರೀತವಾಗಿ ಕಾಡುತ್ತಿದೆ. ಅವರಿಂದ ತೆರವಾಗಿರುವ ಮೂರನೇ ಕ್ರಮಾಂಕಕ್ಕೆ ಯಾರೆಂದರೆ ಯಾರೂ ಫಿಟ್ ಆಗುತ್ತಿಲ್ಲ. ರೈನಾ ಅಪ್ರತಿಮ ಎಡಗೈ ಆಟಗಾರನಲ್ಲದೆ ವಿಶ್ವದರ್ಜೆಯ ಫೀಲ್ಡರ್ ಮತ್ತು ಉಪಯುಕ್ತ ಬೌಲರ್ ಕೂಡ ಆಗಿದ್ದರು. ಅವರ ಸ್ಥಾನದಲ್ಲಿ ಆಡುತ್ತಿರುವ ಅಂಬಟಿ ರಾಯುಡು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಚೆನ್ನಾಗಿ ಆಡಿದ್ದಾರೆ.
ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲಿರುವ ಹೈದರಾಬಾದ್ ಸ್ಥಿತಿ ಸಹ ನಾಜೂಕಾಗಿದೆ. ಚೆನೈಗಿಂತ ಒಂದು ಪಂದ್ಯ ಜಾಸ್ತಿ ಗೆದ್ದಿರುವುದರಿಂದ 6 ಪಾಯಿಂಟ್ಗಳೊಂದಿಗೆ ಧೋನಿ ಪಡೆಗಿಂತ ಉತ್ತಮ ಸ್ಥಾನದಲ್ಲಿದೆ. ರವಿವಾರದಂದು ಗೆಲ್ಲುವ ಸ್ಥಿತಿಯಲ್ಲಿದ್ದಾಗ್ಯೂ ರಾಜಸ್ತಾನ ರಾಯಲ್ಸ್ಗೆ ಸೋತಿದ್ದು ಟೀಮಿನ ಆತ್ಮವಿಶ್ವಾಸವನ್ನು ಕದಡಿದೆಯಲ್ಲದೆ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದಿಂದಾಗಿ ಆಡದಂತಾಗಿರುವುದು, ಟೀಮಿನ ಸಮತೋಲನವನ್ನ್ನು ಏರುಪೇರು ಮಾಡಿದೆ.
ಹೈದರಾಬಾದ್ಗೆ ಬ್ಯಾಟಿಂಗ್ ವಿಭಾಗದಲ್ಲಿ ಉಲ್ಲೇಖಿಸುವಂಥ ಸಮಸ್ಯೆಗಳಿಲ್ಲ. ನಾಯಕ ಡೇವಿಡ್ ವಾರ್ನರ್, ಅವರ ಆರಂಭಿಕ ಜೊತೆಗಾರ ಜಾನಿ ಬೇರ್ಸ್ಟೊ, ಮನೀಶ್ ಪಾಂಡೆ ಮತ್ತು ಕೇನ್ ವಿಲಿಯಮ್ಸನ್ ರನ್ ಗಳಿಸುತ್ತಿದ್ದಾರೆ. ಪ್ರಿಯಮ್ ಗರ್ಗ್ ಬ್ಯಾಟಿಂಗ್ನಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ. ಆಲ್ರೌಂಡರ್ ವಿಜಯ ಶಂಕರ್ಗೆ ಯಾರಾದರು ಗಾಯಗೊಂಡರೆ ಮಾತ್ರ ಆಡುವ ಇಲೆವೆನ್ನಲ್ಲಿ ಅವಕಾಶ ಸಿಗುತ್ತದೆ. ಹಾಗಾಗಿ, ಆವರ ಆತ್ಮವಿಶ್ವಾಸದ ಲೆವಲ್ ಮೇಲೇಳುತ್ತಿಲ್ಲ.
ಬೌಲಿಂಗ್ ವಿಭಾಗವು ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿದ ವಾರ್ನರ್ ಟೀಮಿಗೆ ಇಲ್ಲಿ ಕೆಲ ನ್ಯೂನತೆಗಳಿವೆ. ವೇಗದ ಬೌಲರ್ ಸಂದೀಪ್ ಶರ್ಮಗೆ ವಿಕೆಟ್ ಪಡೆಯಲಾಗುತ್ತಿಲ್ಲ ಮತ್ತು ಬ್ಯಾಟ್ಸ್ಮನ್ಳನ್ನು ನಿಯಂತ್ರಿಸಲು ಸಹ ಆಗುತ್ತಿಲ್ಲ. ಇವತ್ತಿನ ಗೇಮ್ಗೆ ಅವರನ್ನು ಡ್ರಾಪ್ ಮಾಡುವ ಸಾಧ್ಯತೆಯಿದೆ. ಖಲೀಲ್ ಅಹ್ಮದ್ ಮತ್ತು ಯಾರ್ಕರ್ ಪರಿಣಿತ ಟಿ ನಟರಾಜನ್ ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ ಆದರೆ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅವರಿಬ್ಬರು, ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಅವರಿಂದ ಚಚ್ಚಿಸಿಕೊಂಡರು. ಹೈದರಾಬಾದ್ ಟೀಮಿನ ಮತ್ತೊಬ್ಬ ಆಲ್ರೌಂಡರ್ ಅಭಿಷೇಕ್ ಶರ್ಮ ತಮ್ಮ ಆಯ್ಕೆಗೆ ನ್ಯಾಯ ಒದಗಿಸುತ್ತಿಲ್ಲ.
ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಸಿಎಸ್ಕೆ ತಂಡವನ್ನು ಧೋನಿ ಹೇಗೆ ಮುನ್ನಡೆಸುತ್ತಾರೆ ಎನ್ನುವುದು ಇವತ್ತಿನ ಕುತೂಹಲಕಾರಿ ಅಂಶ.
Published On - 4:59 pm, Tue, 13 October 20