ಲೆಜೆಂಡರಿ ವೇಗದ ಬೌಲರ್ ನ್ಯೂಜಿಲೆಂಡ್ನ ಸರ್ ರಿಚರ್ಡ್ ಹ್ಯಾಡ್ಲೀ ಅವರು ವೇಗದ ಬೌಲಿಂಗ್ ಮತ್ತು ಬೌಲರ್ಗಳನ್ನು ಕಾಡುವ ಗಾಯಗಳ ಬಗ್ಗೆ ಮಾತಾಡುತ್ತಿದ್ದರೆ ಇಡೀ ಕ್ರಿಕೆಟ್ ವಿಶ್ವ ನಿಶ್ಶಬ್ದವಾಗಿ ಕೂತು ಕೇಳಿಸಿಕೊಳ್ಳುತ್ತದೆ. ಅವರ ಖ್ಯಾತಿಯೇ ಆಂಥದ್ದು. ಐಸಿಸಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಅವರು ಭಾರತ ಮತ್ತು ವಿಶ್ವದ ಅಗ್ರಮಾನ್ಯ ಬೌಲರ್ ಎನಿಸಿರುವ ಜಸ್ಪ್ರೀತ್ ಬುಮ್ರಾ ಪದೇಪದೆ ಗಾಯಗೊಳ್ಳುತ್ತಿರುವ ಬಗ್ಗೆ ಮಾತಾಡಿದ್ದಾರೆ. ನಿಸ್ಸಂದೇಹವಾಗಿ ಬುಮ್ರಾ ಭಾರತದ ಬೌಲಿಂಗ್ ಆಕ್ರಮಣದ ಬೆನ್ನೆಲುಬಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರು ಕ್ರಿಕೆಟ್ ಎಲ್ಲ ಫಾರ್ಮಾಟ್ಗಳಲ್ಲಿ ಮಿಂಚಿರುವುದು ಅವರು ಯಾವುದೇ ಆವೃತ್ತಿಗೆ ಹೊಂದಿಕೊಳ್ಳಬಲ್ಲರೆನ್ನುವುದನ್ನು ಸೂಚಿಸುತ್ತದೆ. ಆದರೆ ತಮ್ಮ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯಿಂದಾಗಿ ಅವರು ಪದೇಪದೆ ಗಾಯಗೊಂಡು ಒಂದೆರಡು ವರ್ಷಗಳಿಂದ ಹಲವಾರು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಬುಮ್ರಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಷ್ಟು ದಿನ ಬಾಳಬಹುದೆನ್ನುವುದು ಇನ್ನೂ ದೃಢಪಡಬೇಕಿದೆ ಎಂದು ಹ್ಯಾಡ್ಲೀ ಹೇಳುತ್ತಾರೆ.
‘ಜಸ್ಪ್ರೀತ್ ಅವರು ಎಷ್ಟು ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಬಾಳಲಿದ್ದಾರೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಸಾಂಪ್ರದಾಯಿಕ ಶೈಲಿ ಮತ್ತು ನೈಜ್ಯ ಬೌಲಿಂಗ್ ಌಕ್ಷನ್ ಮತ್ತು ಟೆಕ್ನಿಕ್ನೊಂದಿಗೆ ಬೌಲ್ ಮಾಡುವ ಇತರ ವೇಗದ ಬೌಲರ್ಗಳಿಗಿಂತ ಅವರು ಹೆಚ್ಚು ಗಾಯಗಳಿಗೊಳಗಾಗಲಿದ್ದಾರೆಂಬ ಸಂದೇಹ ನನ್ನಲ್ಲಿದೆ. ಅವರು ತಮ್ಮ ಶೈಲಿಯಿಂದ ದೇಹದ ಭಾಗಗಳ ಮೇಲೆ ಇತ್ತಡ ಹೇರುವುದರಿಂದ ಅವರ ಕೆಲವು ಗಾಯಗಳು ಗಂಭೀರ ಸ್ವರೂಪದವುಗಳಾಗಹುದು,’ ಎಂದು ಹ್ಯಾಡ್ಲೀ ಹೇಳಿದ್ದಾರೆ.
‘ಅವರ ಯಾವುದೇ ಗಾಯ ಕರೀಯರ್ ಅನ್ನು ಕೊನೆಗೊಳಿಸುವಂಥದ್ದು ಆಗೋದು ಬೇಡ ಎಂದು ನಾನು ಆಶಿಸುತ್ತೇನೆ, ಯಾಕೆಂದರೆ ಅವರು ಬೌಲಿಂಗ್ ಮಾಡುವುದನ್ನು ನೋಡುವುದೇ ಒಂದು ಆನಂದ. ತಮ್ಮ ವೇಗ, ಪುಟಿತ ಮತ್ತು ಮೂವ್ಮೆಂಟ್ನಿಂದ ಅವರು ಬ್ಯಾಟ್ಸ್ಮನ್ಗಳನ್ನು ಎಲ್ಲ ರೀತಿಯ ತೊಂದರೆಗಳಿಗೆ ಈಡು ಮಾಡುತ್ತಾರೆ,’ ಎಂದು ಹ್ಯಾಡ್ಲೀ ಹೇಳಿದ್ದಾರೆ.
‘ಜಾಸ್ತಿ ರನಪ್ ಇಲ್ಲದೆ ಬೌಲ್ ಮಾಡುವ ಜಸ್ಪ್ರೀತ್ ಅಸಾಂಪ್ರದಾಯಿಕ ಬೌಲಿಂಗ್ ಕೆಟೆಗೆರಿಯಲ್ಲಿ ಫಿಟ್ ಆಗುತ್ತಾರೆ. ಅವರು ಬೌಲ್ ಮಾಡುವ ಟೆಕ್ನಿಕ್ ನಂಬಿಕೆಯನ್ನು ಮೀರಿದ್ದಾಗಿದೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿದೆ. ಹಾಗಾಗೇ ನಾನು ಅವರನ್ನು ಶೋಲ್ಡರ್ ಅಥವಾ ಸ್ಟ್ರೆಂಗ್ತ್ ಬೌಲರ್ ಎಂದು ಕರೆಯುತ್ತೇನೆ; ಯಾಕೆಂದರೆ, ಅವರ ಬಲ ಮತ್ತು ವೇಗ ಅವರ ಬೌಲಿಂಗ್ ಌಕ್ಷನ್ನ ಅಂತಿಮ ಭಾಗದಲ್ಲಿ ಚೆಂಡನ್ನು ರಿಲೀಸ್ ಮಾಡುವಾಗ ಉದ್ಭವಿಸುತ್ತದೆ,’ ಎಂದು ಹ್ಯಾಡ್ಲೀ ಹೇಳಿದ್ದಾರೆ.
‘ಒಬ್ಬ ಉದಯೋನ್ಮುಖ ಬೌಲರ್ಗೆ ಬುಮ್ರಾ ಅವರ ಬೌಲಿಂಗ್ ಟೆಕ್ನಿಕ್ ಕೋಚ್ ಮಾಡುವುದು ಬಹಳ ಕಷ್ಟವಾಗುತ್ತದೆ, ಅಲ್ಲದೆ ಅದನ್ನು ಹೇಳಿಕೊಡುವ ಪ್ರಯತ್ನವನ್ನು ಯಾವುದೇ ಕೋಚ್ ಮಾಡಲಾರ. ಯಾಕೆಂದರೆ ಅದು ಗಾಯಗಳ ಸಮಸ್ಯೆಯನ್ನು ಸೃಷ್ಟಿಸುತ್ತದೆ,’ ಅಂತ ಲೆಜೆಂಡರಿ ಆಟಗಾರ ಹೇಳಿದ್ದಾರೆ.
‘ಆದರೆ, ಕೆಲ ಯವ ಬೌಲರ್ಗಳು ಅವರನ್ನು ಅನುಕರಿಸುವ ಪ್ರಯತ್ನ ಮಾಡಬಹುದೆಂದು ನಾನು ಭಾವಿಸುತ್ತೇನೆ. ಯುವ ಬೌಲರ್ಗಳಿಗೆ ತಮ್ಮದೇ ಆದ ಅಥವಾ ಅವರಿಗಿಷ್ಟವಾಗುವ ಶೈಲಿಯನ್ನು ಅಳವಡಿಸಿಕೊಳ್ಳಲು ಬಿಡಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ವೇಗದ ಬೌಲಿಂಗ್ನ ಭಾಗವಾಗಿರುವ ಸ್ಕಿಲ್ಗಳನ್ನು ಟ್ಯೂನ್ ಮಾಡಿ ಮತ್ತು ಈ ಕಲೆಯ ಉತ್ತಮ ಅಂಶಗಳನ್ನು ತಿಳಿಸಿ ನೆರವಾಗಬೇಕು,’ ಎಂದು ಅಂತಿಮವಾಗಿ ಹ್ಯಾಡ್ಲೀ ಹೇಳಿದ್ದಾರೆ.
ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಭಾರತ ಮತ್ತು ನ್ಯೂಜಿಲೆಂಡ್ ಜೂನ್ 18ರಿಂದ ಸೌಥಾಂಪ್ಟನ್ನ ಏಜಿಯಾಸ್ ಬೋಲ್ನಲ್ಲಿ ಸೆಣಸಲಿವೆ. ಈ ಟೆಸ್ಟ್ನಲ್ಲಿ ಬುಮ್ರಾ ಅವರು ರಾಷ್ಟ್ರೀಯ ತಂಡಕ್ಕೆ ವಾಪಸ್ಸಾಗಲಿದ್ದಾರೆ. ಫೆಬ್ರವರಿಯಲ್ಲಿ ಅವರು ಕೊನೆಯ ಬಾರಿಗೆ ಭಾರತದ ಪರ ಆಡಿದ್ದರು.
ಇದನ್ನೂ ಓದಿ: WTC: ಗಾಯಗೊಂಡಿದ್ದ ಸೀನಿಯರ್ಗಳು ವಾಪಸ್ಸಾಗಲಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಗದು