ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ- ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಂತಿಮ ಹಣಾಹಣಯಲ್ಲಿ ಭಾರತೀಯ ಪುರುಷರ ತಂಡ ನೇಪಾಳ ತಂಡವನ್ನು 54-36 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರೆ, ಮಹಿಳೆಯರ ಫೈನಲ್ನಲ್ಲಿ ಭಾರತ ಮಹಿಳಾ ತಂಡ ನೇಪಾಳ ತಂಡವನ್ನು 78-38 ಅಂಕಗಳಿಂದ ಮಣಿಸಿದೆ.
ಹೀಗೆ ಚೊಚ್ಚಲ ಖೋ- ಖೋ ವಿಶ್ವಕಪ್‌ನಲ್ಲಿ ಭಾರತೀಯರು ಚಾಂಪಿಯನ್ ಪಟ್ಟದೊಂದಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಐತಿಹಾಸಿಕ ಸಾಧನೆಯ ಹೊರತಾಗಿಯೂ ಭಾರತೀಯ ಖೋ-ಖೋ ಪಟುಗಳಿಗೆ ನಗದು ಬಹುಮಾನ ಸಿಕ್ಕಿಲ್ಲ ಎಂಬುದೇ ಅಚ್ಚರಿ.
ಖೋ-ಖೋ ವಿಶ್ವಕಪ್‌ನಲ್ಲಿ ಎರಡೂ ವಿಭಾಗಗಳಲ್ಲಿ ಅಜೇಯರಾಗಿ ಉಳಿದು ಪ್ರಶಸ್ತಿ ಗೆದ್ದುಕೊಂಡರೂ ಭಾರತೀಯರು ಬಹುಮಾನ ಮೊತ್ತ ಪಡೆದಿಲ್ಲ. ಇದಕ್ಕೆ ಮುಖ್ಯ ಕಾರಣ, ಆಯೋಜಕರ ನಿರ್ಧಾರ. ಈ ಟೂರ್ನಿಯ ಆರಂಭಕ್ಕೂ ಮುನ್ನವೇ ನಗದು ಬಹುಮಾನ ನೀಡುವುದಿಲ್ಲ ಎಂದು ನಿರ್ಧರಿಸಲಾಗಿತ್ತು. ಇದರಿಂದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದರೂ ಯಾವುದೇ ನಗದು ಬಹುಮಾನ ನೀಡಲಾಗಿಲ್ಲ.
ಇನ್ನು ಗೆದ್ದ ತಂಡಗಳಿಗೆ ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೇ ತಂಡದಲ್ಲಿರುವ ಆಟಗಾರರಿಗೆ ಪದಕಗಳನ್ನು ಸಹ ನೀಡಲಾಯಿತು. ಇದೇ ವೇಳೆ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಖೋ-ಖೋ ವಿಶ್ವಕಪ್ಗೆ ಆಗಮಿಸುವ ಸಾಗರೋತ್ತರ ಆಟಗಾರರಿಗೆ ಉಂಟಾಗಬಹುದಾದ ತೆರಿಗೆ ಕಾನೂನುಗಳ ತೊಡಕುಗಳನ್ನು ತಪ್ಪಿಸಲು ಯಾವುದೇ ರೀತಿಯ ನಗದು ಬಹುಮಾನವನ್ನು ನೀಡದಿರಲು ನಿರ್ಧರಿಸಿದ್ದೇವೆ ಎಂದು ಖೋ-ಖೋ ವಿಶ್ವಕಪ್ ಆಯೋಜಕರು ಟೂರ್ನಿ ಆರಂಭಕ್ಕೂ ಮುನ್ನವೇ ತಿಳಿಸಿದ್ದರು. ಹೀಗಾಗಿ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಗಳಿಗೆ ನಗದು ಬಹುಮಾನ ನೀಡಲಾಗಿಲ್ಲ.
ಇದರ ಜೊತೆಗೆ ಈ ಕ್ರೀಡೆ ಆಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಾಯೋಜಕತ್ವ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಚೊಚ್ಚಲ ಟೂರ್ನಿಗೆ ಆರ್ಥಿಕ ಸಮಸ್ಯೆಗೆ ಎದುರಾಗಿದ್ದು, ಈ ಹಣಕಾಸಿನ ಸಮಸ್ಯೆಯನ್ನು ಸರಿ ಹೊಂದಿಸಲು ಮೊದಲೇ ಬಹುಮಾನ ಮೊತ್ತವನ್ನು ನೀಡದಿರಲು ನಿರ್ಧರಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.
ಇದನ್ನೂ ಓದಿ: ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್
ಒಟ್ಟಿನಲ್ಲಿ 20 ತಂಡಗಳೊಡನೆ ನಡೆದ ಚೊಚ್ಚಲ ಖೋ-ಖೋ ವಿಶ್ವಕಪ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಖೋ-ಖೋ ಟೂರ್ನಿಗಳಿಗೆ ಉತ್ತಮ ಪ್ರಾಯೋಜಕತ್ವ ಸಿಗುವ ನಿರೀಕ್ಷೆಯಿದೆ.