LSG ನಾಯಕತ್ವದೊಂದಿಗೆ ರಿಷಭ್ ಪಂತ್​ಗೆ ಹೊಸ ಜವಾಬ್ದಾರಿ

|

Updated on: Jan 21, 2025 | 9:01 AM

IPL 2025 Rishabh Pant: ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಮತ್ತೊಂದು ಬಿಗ್ ಅಪ್​ಡೇಟ್ ಹೊರಬಿದ್ದಿದೆ. ಈ ಬಾರಿಯ ಐಪಿಎಲ್​ನಲ್ಲಿ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಚರ್ಚೆ ನಡೆದಿದೆ. ಇದನ್ನು ಖುದ್ದು ರಿಷಭ್ ಪಂತ್ ಅವರೇ ಖಚಿತಪಡಿಸಿದ್ದಾರೆ. ಹೀಗಾಗಿ ಐಪಿಎಲ್ 2025 ರಲ್ಲಿ ರಿಷಭ್ LSG ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

LSG ನಾಯಕತ್ವದೊಂದಿಗೆ ರಿಷಭ್ ಪಂತ್​ಗೆ ಹೊಸ ಜವಾಬ್ದಾರಿ
Rishabh Pant
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಸೋಮವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಂತ್ ಅವರನ್ನು LSG ತಂಡದ ನೂತನ ನಾಯಕನಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಇದರೊಂದಿಗೆ ಐಪಿಎಲ್ 2025 ರಲ್ಲಿ ಪಂತ್ ಮುಂದಾಳತ್ವದಲ್ಲಿ ಲಕ್ನೋ ಪಡೆ ಕಣಕ್ಕಿಳಿಯುವುದು ಕನ್ಫರ್ಮ್ ಆದಂತಾಗಿದೆ. ಇತ್ತ ನಾಯಕತ್ವದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್​ ರಿಷಭ್ ಪಂತ್ ಅವರಿಗೆ ಮತ್ತೊಂದು ಜವಾಬ್ದಾರಿ ವಹಿಸಲು ಮುಂದಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಪಂತ್ ಮುಂಬರುವ ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ರಿಷಭ್ ಹಾಗೂ LSG ತಂಡದ ಮೆಂಟರ್ ಝಹೀರ್ ಖಾನ್ ನಡುವೆ ಚರ್ಚೆ ನಡೆದಿದೆ.

ಐಪಿಎಲ್​ ಆರಂಭಕ್ಕೂ ಮುನ್ನವೇ ಇಂತಹದೊಂದು ಚರ್ಚೆ ನಡೆಯಲು ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಆರಂಭಿಕರ ಕೊರತೆ. LSG ಫ್ರಾಂಚೈಸಿ ಈ ಬಾರಿ ಆರಂಭಿಕನ ಸ್ಥಾನಕ್ಕೆ ಖರೀದಿಸಿದ್ದು ಸೌತ್ ಆಫ್ರಿಕಾದ ದಾಂಡಿಗ ಐಡೆನ್ ಮಾರ್ಕ್ರಾಮ್ ಅವರನ್ನು. ಆದರೆ ಅವರೊಂದಿಗೆ ಕಣಕ್ಕಿಳಿಯುವ ಮತ್ತೋರ್ವ ಆಟಗಾರ ಯಾರು ಎಂಬುದೇ ಈಗ ಪ್ರಶ್ನೆ.

ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬಲಿಷ್ಠ ದಾಂಡಿಗರ ದಂಡೇ ಇದ್ದು, ಇವರೆಲ್ಲರೂ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು. ಇಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲು ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಶಹಬಾಝ್ ಅಹ್ಮದ್, ಮಿಚೆಲ್ ಮಾರ್ಷ್ ಇದ್ದಾರೆ.

ಹಾಗೆಯೇ ಮೂರನೇ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಆರಂಭಿಕನ ಸ್ಥಾನಕ್ಕೆ ಭಾರತೀಯ ಆಟಗಾರನ ಅಗತ್ಯತೆಯಿದೆ. ಹೀಗಾಗಿ ರಿಷಭ್ ಪಂತ್ ಅವರನ್ನೇ ಆರಂಭಿಕನಾಗಿ ಕಣಕ್ಕಿಳಿಸಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಚಿಂತಿಸಿದೆ.

ಒಂದು ವೇಳೆ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿದರೆ, ಅವರಿಗೆ ಜೋಡಿಯಾಗಿ ಐಡೆನ್ ಮಾರ್ಕ್ರಾಮ್ ಅಥವಾ ಮಿಚೆಲ್ ಮಾರ್ಷ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಆಕ್ರಮಣಕಾರಿ ದಾಂಡಿಗರನ್ನು ಕಣಕ್ಕಿಳಿಸಿ ಪವರ್​ಪ್ಲೇನಲ್ಲಿ ಪವರ್​ ಪ್ರದರ್ಶಿಸಿಲು LSG ಫ್ರಾಂಚೈಸಿ ಮಾಸ್ಟರ್​ ಪ್ಲ್ಯಾನ್ ರೂಪಿಸುತ್ತಿದೆ.

ಆ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಲು ಲಕ್ನೋ ತಂಡದಲ್ಲಿ ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಆಯುಷ್ ಬದೋನಿಯಂತಹ ದಾಂಡಿಗರಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕನಾಗಿ ರಿಷಭ್ ಪಂತ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ಅವೇಶ್ ಖಾನ್, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ ದೀಪ್, ಹಿಮ್ಮತ್ ಸಿಂಗ್, ಎಂ. ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಶಹಬಾಝ್ ಅಹ್ಮದ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಮ್ಯಾಥ್ಯೂ ಬ್ರೀಟ್ಝ್ಕ್​.