ಪ್ಲೇ ಆಫ್ ಹಂತದಲ್ಲಿ ಈಗ ನಾಲ್ಕು ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಪ್ ಎರಡು ತಂಡಗಳು ಅಂದರೆ, ಮುಂಬೈ ಮತ್ತು ಡೆಲ್ಲಿ ನವೆಂಬರ್ 5ರಂದು ಅಂದರೆ ನಾಳೆ (ಗುರುವಾರ) ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ಟೀಮು ಫೈನಲ್ ತಲುಪುತ್ತದೆ. ಸೋಲುವ ತಂಡ ಟೂರ್ನಿಯಿಂದೇನೂ ನಿರ್ಗಮಿಸುವುದಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಂದಿಗೆ ಆಡಿ ಫೈನಲ್ಗೆ ಅರ್ಹತೆ ಗಿಟ್ಟಿಸುವ ಮತ್ತೊಂದು ಅವಕಾಶ ಅದಕ್ಕೆ ಸಿಗುತ್ತದೆ. ಎಲಿಮಿನೇಟರ್ ಪಂದ್ಯ ಪಾಯಿಂಟ್ಸ್ ಟೇಬಲ್ನಲ್ಲಿ 3ಮತ್ತು 4 ನೇ ಸ್ಥಾನ ಪಡೆದ ಹೈದರಾಬಾದ ಮತ್ತು ಬೆಂಗಳೂರು ನಡುವೆ ನವೆಂಬರ್ 6ರಂದು (ಶುಕ್ರವಾರ) ಅಬು ಧಾಬಿಯ ಶೇಖ್ ಜಾಯೆದ್ ಮೈದಾನದಲ್ಲಿ ನಡೆಯಲಿದೆ. ಸದರಿ ಪಂದ್ಯದಲ್ಲಿ ಗೆಲ್ಲುವ ಟೀಮು ಕ್ವಾಲಿಫೈಯರ್ 2 ರಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುತ್ತದೆ. ಸೋಲುವ ತಂಡ ಟೂರ್ನಿಯಿಂದ ನಿರ್ಗಮಿಸುತ್ತದೆ.
ಅಂದಹಾಗೆ, ಕ್ವಾಲಿಫೈಯರ್ 2ರಲ್ಲಿ ಕ್ವಾಲಿಫೈಯರ್ 1ರಲ್ಲಿ ಸೋತ ಮತ್ತು ಎಲಿಮಿನೇಟರ್ನಲ್ಲಿ ಗೆದ್ದ ತಂಡಗಳು ಫೈನಲ್ನಲ್ಲಿ ಆಡುವ ಅರ್ಹತೆ ಗಿಟ್ಟಿಸಲು ಹೋರಾಡುತ್ತವೆ. ಈ ಪಂದ್ಯ ಅಬು ಧಾಬಿಯಲ್ಲಿ ನವೆಂಬರ್ 8 ರಂದು ನಡೆಯಲಿದ್ದು ಸೋಲುವ ತಂಡ ಟೂರ್ನಿಯಿಂದ ಹೊರಬೀಳುತ್ತದೆ.
ಕ್ವಾಲಿಫೈಯರ್ 2ರಲ್ಲಿ ಗೆಲ್ಲುವ ಟೀಮು, ಅದಾಗಲೇ ಕ್ವಾಲಿಫೈಯರ್ 1 ರಲ್ಲಿ ಗೆದ್ದು ಫೈನಲ್ ಪ್ರವೇಶಿದ ಟೀಮಿನೊಂದಿಗೆ ಐಪಿಎಲ್ 2020 ಕಿರೀಟ ಧರಿಸಲು ಸೆಣಸುತ್ತದೆ. ಈ ಸೀಸನ್ನ ಕಟ್ಟಕಡೆಯ ಪಂದ್ಯ ನವೆಂಬರ್ 10 ರಂದು ದುಬೈಯಲ್ಲಿ ನಡೆಯಲಿದೆ.
14 ಪಂದ್ಯಗಳಿಂದ 670 ರನ್ ಗಳಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್ ಆರೇಂಜ್ ಕ್ಯಾಪಿನ ಒಡೆಯರಾದರು. ಹೈದರಾಬಾದ್ನ ಡೇವಿಡ್ ವಾರ್ನರ್ 14 ಪಂದ್ಯಗಳಿಂದ 529, ಡೆಲ್ಲಿ ಕ್ಯಾಪಿಟಲ್ಸ್ನ ಶಿಖರ್ ಧವನ್ 525 (14), ಆರ್ಸಿಬಿಯ ದೇವದತ್ ಪಡಿಕ್ಕಲ್ 472 (14), ಆರ್ಸಿಬಿಯ ವಿರಾಟ್ ಕೊಹ್ಲಿ 460 (14), ಚೆನೈ ಸೂಪರ್ ಕಿಂಗ್ಸ್ನ ಫಫ್ ಡು ಪ್ಲೆಸ್ಸಿ 449 (13), ಮುಂಬೈನ ಕ್ವಿಂಟನ್ ಡಿ ಕಾಕ್ 443 (14), ಕೆಕೆಆರ್ನ ಶುಬ್ಮನ್ ಗಿಲ್ 440 (14), ಮುಂಬೈನ ಇಶಾನ್ ಕಿಷನ್ 428 (12) ಮತ್ತು ಪಂಜಾಬ್ನ ಮಾಯಾಂಕ್ ಅಗರ್ವಾಲ್ 424 (11) ಗಳಿಸಿ ಟಾಪ್ ಸ್ಕೋರರ್ಗಳೆನಿಸಿಕೊಂಡರು.
ಬೌಲರ್ಗಳ ಪೈಕಿ 14 ಪಂದ್ಯಗಳಿಂದ 25 ವಿಕೆಟ್ ಪಡೆದ ಡೆಲ್ಲಿಯ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಉಳಿದಂತೆ, ಮುಂಬೈನ ಜಸ್ಪ್ರೀತ್ ಬುಮ್ರಾ 23 (13), ಅವರ ಜೊತೆಗಾರ ಟ್ರೆಂಟ್ ಬೌಲ್ಟ್ 20 (13), ಆರ್ಸಿಬಿಯ ಯುಜ್ವೇಂದ್ರ ಚಹಲ್ 20 (14), ಪಂಜಾಬ್ನ ಮೊಹಮ್ಮದ್ ಶಮಿ 20 (14), ರಾಜಸ್ತಾನ್ ರಾಯಲ್ಸ್ನ ಜೊಫ್ರಾ ಆರ್ಚರ್ 20 (14), ಡೆಲ್ಲಿಯ ಌನ್ರಿಖ್ ನೊರ್ಕಿಯ 19 (13), ಹೈದರಾಬಾದ್ನ ರಶೀದ್ ಖಾನ್ 19 (14), ಕೆಕೆಆರ್ನ ವರುಣ್ ಚಕ್ರವರ್ತಿ 17 (13) ಮತ್ತು ಮುಂಬೈನ ದೀಪಕ್ ಚಹರ್ 15 (14) ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲಿ ಮಿಂಚಿದರು.