ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್; ಕರ್ನಾಟಕಕ್ಕೆ ಚೊಚ್ಚಲ ಚಿನ್ನ ಗೆದ್ದ ದಿವ್ಯಾ..!
ಭಾರತದ ಮಹಿಳಾ ಶೂಟರ್‌ಗಳು ದೋಹಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮನು ಭಾಕರ್, ಇಶಾ ಸಿಂಗ್ ಮತ್ತು ಕನ್ನಡತಿ ಟಿ.ಎಸ್. ದಿವ್ಯಾ ಅವರ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ. ಕರ್ನಾಟಕಕ್ಕೆ ಮೊದಲ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ತಂದ ದಿವ್ಯಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ಕತಾರ್‌ನ ದೋಹಾದಲ್ಲಿ ನಡೆದ 2026ರ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಶೂಟರ್‌ಗಳು ಭರ್ಜರಿ ಸಾಧನೆ ಮಾಡಿದ್ದಾರೆ. ಅಕ್ಟೋಬರ್ 10 ರಂದು ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಮನು ಭಾಕರ್, ಇಶಾ ಸಿಂಗ್ ಹಾಗೂ ಕನ್ನಡತಿ ಟಿಎಸ್ ದಿವ್ಯಾ ಅವರನ್ನೊಳಗೊಂಡ ಭಾರತ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದೆ.
ಭಾರತ ತಂಡಕ್ಕೆ ಚಿನ್ನದ ಪದಕ
ತಂಡದ ಅರ್ಹತಾ ಸುತ್ತಿನಲ್ಲಿ ಮೂವರು ಭಾರತೀಯ ಶೂಟರ್‌ಗಳು ಒಟ್ಟು 870-26x ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದಿದ್ದರು. ಹಂಗೇರಿ 873-30x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ದಕ್ಷಿಣ ಕೊರಿಯಾ 870-35x ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಅಂತಿಮವಾಗಿ ಭಾರತ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಕನ್ನಡತಿ ದಿವ್ಯಾ ಪ್ರದರ್ಶನ ಹೀಗಿತ್ತು
ಭಾರತದ ಪರ ಇಶಾ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. ಪ್ರಿಸಿಷನ್ ವಿಭಾಗದ ಮೂರು ಸರಣಿಗಳಲ್ಲಿ ಕ್ರಮವಾಗಿ 97, 96 ಹಾಗೂ 99 ಅಂಕ ಗಳಿಸಿದ ಅವರು ಒಟ್ಟು 292 ಅಂಕಗಳನ್ನು ತಮ್ಮದಾಗಿಸಿಕೊಂಡರು. ಇನ್ನು ಮನು ಭಾಕರ್ ಮತ್ತು ಟಿಎಸ್ ದಿವ್ಯಾ ತಲಾ 289 ಅಂಕ ಗಳಿಸಿದರು. ಮನು ಕ್ರಮವಾಗಿ 96, 96 ಹಾಗೂ 97 ಅಂಕ ಪಡೆದರೆ, ದಿವ್ಯಾ 97, 98 ಹಾಗೂ 94 ಅಂಕ ಗಳಿಸಿದರು.
ವೈಯಕ್ತಿಕ ವಿಭಾಗದಲ್ಲಿ ಎಡವಿದ ದಿವ್ಯಾ
ಟೀಮ್ ಈವೆಂಟ್ನಲ್ಲಿ ಸ್ವರ್ಣ ಗೆಲ್ಲುವ ಮೂಲಕ ಕನ್ನಡತಿ ದಿವ್ಯಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ವಿಶ್ವ ಚಾಂಪಿಯನ್ ಆಗಿರುವ ದಿವ್ಯ ಅವರಿಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಆದಾಗ್ಯೂ ದಿವ್ಯಾ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದು, ಅರ್ಹತಾ ಸುತ್ತಿನಲ್ಲಿ 10ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
