ಫುಲ್ ಜೋಶ್… 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್

|

Updated on: Aug 26, 2024 | 9:00 AM

England vs Sri Lanka: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 5 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಆಂಗ್ಲರ ಪಡೆಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಮಾರ್ಕ್​ ವುಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ವೇಗಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ವೇಗಿ ಮಾರ್ಕ್​ ವುಡ್ ಹೊರಬಿದ್ದಿದ್ದಾರೆ. ತೊಡೆ ನೋವಿನ ಕಾರಣ ಲಂಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಿಗೆ ವುಡ್ ಅಲಭ್ಯರಾಗಿದ್ದಾರೆ. ಇದೀಗ ಅವರ ಬದಲಿಗೆ 20 ವರ್ಷದ ಯುವ ಎಡಗೈ ವೇಗಿ ಜೋಶ್ ಹಲ್ ಅನ್ನು ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈಗಾಗಲೇ ಕೌಂಟಿ ಕ್ರಿಕೆಟ್​ನಲ್ಲಿ​ ತನ್ನ ನಿಖರ ದಾಳಿಯಿಂದ ಸಂಚಲನ ಸೃಷ್ಟಿಸಿರುವ ಜೋಶ್ ಹಲ್ ಇದೀಗ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.

6 ಅಡಿ ಎತ್ತರದ ಯುವ ವೇಗಿ ಈಗಾಗಲೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ 9 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಜೇಮ್ಸ್ ಅ್ಯಂಡರ್ಸನ್ ನಿವೃತ್ತಿಯ ಬಳಿಕ ಗಸ್ ಅಟ್ಕಿನ್ಸನ್ ಅವರನ್ನು ಪರಿಚಯಿಸಿ ಯಶಸ್ವಿಯಾಗಿರುವ ಇಂಗ್ಲೆಂಡ್ ಇದೀಗ 20 ವರ್ಷದ ಜೋಶ್ ಹಲ್​ಗೂ ತಂಡದಲ್ಲಿ ಸ್ಥಾನ ನೀಡಿದ್ದು, ಈ ಮೂಲಕ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ವಿಶೇಷ ಎಂದರೆ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಎನಿಸಿಕೊಂಡಿರುವ ಜೇಮ್ಸ್ ಅ್ಯಂಡರ್ಸನ್ ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜೋಶ್ ಹಲ್​ನಂತಹ ಯುವ ತರುಣರಿಗೆ ಜಿಮ್ಮಿ ಗರಡಿಯಲ್ಲಿ ಪಳಗಲು ಉತ್ತಮ ಅವಕಾಶ ದೊರೆತಂತಾಗಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎಡಗೈ ವೇಗಿ ಜೋಶ್ ಹಲ್ ಸಂಚಲನ ಸೃಷ್ಟಿಸಿದರೂ ಅಚ್ಚರಿಪಡಬೇಕಿಲ್ಲ.  ಏಕೆಂದರೆ ಹಲ್ ಅವರ ಹಲ್​ಚಲ್ ಎಬ್ಬಿಸುವ ಬೌಲಿಂಗ್ ಶೈಲಿ ಹಾಗಿದೆ…ಅದರ ವಿಡಿಯೋ ಝಲಕ್ ಈ ಮೇಲೆ ನೀಡಲಾಗಿದ್ದು, ವೀಕ್ಷಿಸಬಹುದು.

 

Follow us on