10,000 ರನ್​ ಪೂರೈಸಿದ ಎರಡನೇ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್.. ಈ ಸಾಧನೆಯ ವಿಶೇಷತೆಗಳೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Mar 12, 2021 | 3:25 PM

Mithali Raj | ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಇಬ್ಬರೂ ಆಟಗಾರ್ತಿಯರು 10000 ರನ್‌ಗಳ ಗಡಿ ದಾಟಿದ್ದಾರೆ. ಆದರೆ, ಈ ಇಬ್ಬರು 10000 ರನ್‌ ಗಳಿಸಿದ ಸಾಧನೆ ಮಾಡಿದರ ನಡುವೆ 3 ವಿಶೇಷ ಹೋಲಿಕೆಗಳಿವೆ.

10,000 ರನ್​ ಪೂರೈಸಿದ ಎರಡನೇ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್.. ಈ ಸಾಧನೆಯ ವಿಶೇಷತೆಗಳೇನು ಗೊತ್ತಾ?
ಮಿಥಾಲಿ ರಾಜ್
Follow us on

ಲಕ್ನೋ: ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್ ಅವರು ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನ ಮಾಡಿದ್ದಾರೆ. ಅದೇನೆಂದರೆ, ಮಿಥಾಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 10,000 ರನ್ ಪೂರೈಸಿದ ಎರಡನೇ ಮಹಿಳಾ ಕ್ರಿಕೆಟರ್​ ಆಗಿ ಹೊರಹೊಮ್ಮಿದ್ದಾರೆ. ಲಕ್ನೋದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ (Bharat Ratna Shri Atal Bihari Vajpayee Ekana Cricket Stadium) ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ, ಅನುಭವಿ ಭಾರತೀಯ ಮಹಿಳಾ ಕ್ರಿಕೆಟರ್​ ಈ ಸಾಧನೆ ಮಾಡಿದ್ದಾರೆ. ಮಿಥಾಲಿಗೆ ಮುಂಚಿತವಾಗಿ, ಇಂಗ್ಲೆಂಡ್ ಮಹಿಳಾ ಕ್ರಿಕೆಟರ್​ ಚಾರ್ಲೊಟ್ ಎಡ್ವರ್ಡ್ಸ್ ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್​ ಆಗಿದ್ದಾರೆ. ಮಿಥಾಲಿ ತನ್ನ 212 ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಮಿಥಾಲಿ ರಾಜ್ 10000 ರನ್ ಗಳಿಸಿದ ಎರಡನೇ ಕ್ರಿಕೆಟರ್​
ಮಿಥಾಲಿ ರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಎರಡನೇ ಮಹಿಳಾ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ತಮ್ಮ 311 ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ ಅವರು 75 ಅರ್ಧಶತಕ ಮತ್ತು 8 ಶತಕಗಳನ್ನು ಬಾರಿಸಿದ್ದಾರೆ. ಮಿಥಾಲಿಗೆ ಮುಂಚಿತವಾಗಿ, ಈ ಸಾಧನೆಯನ್ನು 2016 ರಲ್ಲಿ​ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟರ್ ಷಾರ್ಲೆಟ್ ಎಡ್ವರ್ಡ್ಸ್ ಮಾಡಿದ್ದರು. ಎಡ್ವರ್ಡ್ಸ್ 309 ಪಂದ್ಯಗಳಲ್ಲಿ 10,273 ರನ್ ಗಳಿಸಿದ್ದಾರೆ. ಅವರು 67 ಅರ್ಧಶತಕ ಮತ್ತು 13 ಶತಕಗಳನ್ನು ಬಾರಿಸಿದ್ದಾರೆ.


ಎಡ್ವರ್ಡ್ಸ್- ಮಿಥಾಲಿ 10000 ರನ್‌ ಸಾಧನೆಯ ವಿಶೇಷ
ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಇಬ್ಬರೂ ಆಟಗಾರ್ತಿಯರು 10,000 ರನ್‌ಗಳ ಗಡಿ ದಾಟಿದ್ದಾರೆ. ಆದರೆ, ಈ ಇಬ್ಬರು 10,000 ರನ್‌ ಗಳಿಸಿದ ಸಾಧನೆ ಮಾಡಿದರ ನಡುವೆ 3 ವಿಶೇಷ ಹೋಲಿಕೆಗಳಿವೆ. ಮೊದಲ ಹೋಲಿಕೆ ಏನೆಂದರೆ, ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಈ ಇಬ್ಬರೂ ಆಟಗಾರ್ತಿಯರು ಈ ಅದ್ಭುತ ಸಾಧನೆ ಮಾಡಿದ್ದಾರೆ.

ಎರಡನೆಯ ಹೋಲಿಕೆ ಏನೆಂದರೆ, ದಕ್ಷಿಣ ಆಫ್ರಿಕಾದ ಆಟಗಾರ್ತಿ ಲಾರಾ ವೋಲ್ವಾರ್ಟ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಡ್ವರ್ಡ್ಸ್ 10,000 ರನ್​ಗಳನ್ನ ಪೂರ್ಣಗೊಳಿಸಿದರೆ, ಲಾರಾ ವೋಲ್ವಾರ್ಟ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕಿಯಾಗಿ ತಂಡದ ಸಾರಥ್ಯವಹಿಸಿದ ಮೊದಲ ಪಂದ್ಯದಲ್ಲಿ ಮಿಥಾಲಿ 10,000 ರನ್​ಗಳನ್ನು ಪೂರ್ಣಗೊಳಿಸಿದ್ದಾರೆ. ಇದಲ್ಲದೆ, ಮೂರನೆಯ ಹೋಲಿಕೆಯೆಂದರೆ, ಈ ಇಬ್ಬರೂ ಆಟಗಾರ್ತಿಯರು ತಮ್ಮ 10,000 ರನ್​ಗಳನ್ನು ಬೌಂಡರಿ ಬಾರಿಸುವುದರೊಂದಿಗೆ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:India vs England: ಇಂದಿನಿಂದ T20 ಕದನ.. ಆಯ್ಕೆ ಮಂಡಳಿಗೆ ತಲೆನೋವಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ