ನನ್ನ ದಾಖಲೆಯನ್ನು ಸರಿಗಟ್ಟುವ ಅವಕಾಶ ರವಿಚಂದ್ರನ್ ಅಶ್ವಿನ್​ಗಿದೆ: ಮುರಳೀಧರನ್

ಅಶ್ವಿನ್ ಇದುವರೆಗೆ 74 ಟೆಸ್ಟ್ ಪಂದ್ಯಗಳನ್ನಾಡಿದ್ದು, 377 ವಿಕೆಟ್ ಕಬಳಿಸಿದ್ದಾರೆ. ಮುಂದಿನ ವಾರ ಬ್ರಿಸ್ಬೇನ್​ನಲ್ಲಿ ತಮ್ಮ ಕೆರೀಯರ್​ನ 100 ನೇ ಟೆಸ್ಟ್​ ಆಡಲಿರುವ ಲಿಯಾನ್ 396 ವಿಕೆಟ್ ಕಿತ್ತಿದ್ದಾರೆ. ನಿಸ್ಸಂದೇಹವಾಗಿ ಅವರು ಈಗಿನ ಸ್ಪಿನ್ನರ್​ಗಳ ಪೈಕಿ ಶ್ರೇಷ್ಠರು. ಆದರೆ, ಮುರಳಿ ತಲುಪಿದ ಶಿಖರವನ್ನು ಅವರಿಂದ ಮುಟ್ಟಲಾದೀತೆ?

ನನ್ನ ದಾಖಲೆಯನ್ನು ಸರಿಗಟ್ಟುವ ಅವಕಾಶ ರವಿಚಂದ್ರನ್ ಅಶ್ವಿನ್​ಗಿದೆ: ಮುರಳೀಧರನ್
ರವಿಚಂದ್ರನ್ ಅಶ್ವಿನ್
ಅರುಣ್​ ಕುಮಾರ್​ ಬೆಳ್ಳಿ Edited By:

Updated on: Jan 14, 2021 | 7:41 PM

ಟೆಸ್ಟ್​ ಕ್ರಿಕೆಟ್​ನಲ್ಲಿ ಬೌಲರ್​ಗಳು 300 ವಿಕೆಟ್ ಪಡೆದರೆ ಮತ್ತು ಬ್ಯಾಟ್ಸ್​ಮನ್​ಗಳು 5,000 ಕ್ಕಿಂತ ಜಾಸ್ತಿ ರನ್ ಗಳಿಸಿದರೆ ಅವರ ದಾಖಲೆಗಳನ್ನು ಯಾರೂ ಸರಿಗಟ್ಟಲಾರರು ಅಂತಾ ಭಾವಿಸುವ ಒಂದು ಕಾಲವಿತ್ತು. ಆದರೆ ಆ ಕಾಲ ಕ್ರಮೇಣವಾಗಿ ಬದಲಾಗುವುದನ್ನು ಕ್ರಿಕೆಟ್​ ಪ್ರೇಮಿಗಳು ಗಮನಿಸುತ್ತಾ ಬಂದಿದ್ದಾರೆ.

ಭಾರತದ ಸಚಿನ್ ತೆಂಡೂಲ್ಕರ್ ಹೆಚ್ಚು ಕಡಿಮೆ 16,000 (15,921) ರನ್​ಗಳನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಬಾರಿಸಿ ವಿದಾಯ ಹೇಳಿದರು. ಹಾಗೆಯೇ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಬರೋಬ್ಬರಿ 800 ವಿಕೆಟ್​ ಪಡೆಯುವ ಸಾಧನೆ ಮಾಡಿದರು. 300ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳು ಮತ್ತು 5,000 ಕ್ಕಿಂತ ಜಾಸ್ತಿ ರನ್ ಗಳಿಸಿದ ಸಾಕಷ್ಟು ಬ್ಯಾಟ್ಸ್​ಮನ್​ಗಳು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಮಗೀಗ ಸಿಗುತ್ತಾರೆ.

ನಾವಿಲ್ಲಿ ಬೌಲರ್​ಗಳನ್ನು ಕುರಿತು ಮಾತ್ರ ಚರ್ಚಿಸುವ. ನಿಮಗೆಲ್ಲ ಗೊತ್ತಿರುವ ಹಾಗೆ ಮುರಳಿ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್​ಗಳೊಂದಿಗೆ ಮೂರನೇ ಸ್ಥಾನದಲ್ಲಿರುವವರು ನಮ್ಮ ಹುಡುಗ ಅನಿಲ್ ಕುಂಬ್ಳೆ.

ಮುತ್ತಯ್ಯ ಮುರಳೀಧರನ್

ಹಾಗಾದರೆ, ಪ್ರಸಕ್ತ ಬೌಲರ್​ಗಳ ಪೈಕಿ ಮುರಳಿಯ ದಾಖಲೆಯನ್ನು ಯಾರಾದರೂಸರಿಗಟ್ಟಬಲ್ಲರೆ? ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ನೇಥನ್ ಲಿಯಾನ್ ಅವರಿಗೆ ಆ ಅವಕಾಶ ಇರಬಹುದಾದರೂ 800 ವಿಕೆಟ್ ಪಡೆಯುವುದು ಸುಲಭದ ಮಾತು ಅಲ್ಲ. ಅಶ್ವಿನ್ ಇದುವರೆಗೆ 74 ಟೆಸ್ಟ್ ಪಂದ್ಯಗಳನ್ನಾಡಿದ್ದು, 377 ವಿಕೆಟ್ ಕಬಳಿಸಿದ್ದಾರೆ. ಮುಂದಿನ ವಾರ ಬ್ರಿಸ್ಬೇನ್​ನಲ್ಲಿ ತಮ್ಮ ಕೆರೀಯರ್​ನ 100 ನೇ ಟೆಸ್ಟ್​ ಆಡಲಿರುವ ಲಿಯಾನ್ 396 ವಿಕೆಟ್ ಕಿತ್ತಿದ್ದಾರೆ. ನಿಸ್ಸಂದೇಹವಾಗಿ ಅವರು ಈಗಿನ ಸ್ಪಿನ್ನರ್​ಗಳ ಪೈಕಿ ಶ್ರೇಷ್ಠರು. ಆದರೆ, ಮುರಳಿ ತಲುಪಿದ ಶಿಖರವನ್ನು ಅವರಿಗೆ ಮುಟ್ಟಲಾದೀತೆ?

ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮುರಳಿ ಭಾರತೀಯ ಬೌಲರ್​ಗೆ ಖಂಡಿತವಾಗಿಯೂ ಅವಕಾಶವಿದೆ ಎಂದು ಹೇಳಿದ್ದಾರೆ.

ಯಾರು 800 ವಿಕೆಟ್​ ಪಡೆಯಬಲ್ಲರು ಎನ್ನುವುದು ನಿಮ್ಮ ಪ್ರಶ್ನೆಯೇ? ಅಶ್ವಿನ್ ಆ ಸಾಧನೆ ಮಾಡಬಹುದಾದ ಬೌಲರ್ ಎಂದು ನನಗನ್ನಿಸುತ್ತೆ. ಯಾಕೆಂದರೆ ನಿಸ್ಸಂಶಯವಾಗಿ ಅವರೊಬ್ಬ ಶ್ರೇಷ್ಠ ಬೌಲರ್. ಅವರನ್ನು ಬಿಟ್ಟರೆ ಬೇಱವುದೇ ಯುವ ಬೌಲರ್ 800 ವಿಕೆಟ್​ ಪಡೆಯುವ ಸಾಮರ್ಥ್ಯ ಹೊಂದಿದ್ದಾನೆ ಅಂತಾ ನನಗನ್ನಿಸುವುದಿಲ್ಲ. ನೇಥನ್ ಲಿಯಾನ್ ಸುಮಾರು 400 ವಿಕೆಟ್​ಗಳನ್ನು ಪಡೆದಿದಿರುವುದರಿಂದ ಅವರಿಗೂ ಅವಕಾಶವಿದೆ. ಆದರೆ 800 ವಿಕೆಟ್​ ಪಡೆಯಲು ಆಸ್ಸೀ ಬಹಳಷ್ಟು ಟೆಸ್ಟ್​ಗಳನ್ನಾಡಬೇಕಾಗುತ್ತದೆ ಎಂದು ಮುರಳಿ ಹೇಳಿದ್ದಾರೆ.

ಕ್ರಿಕೆಟ್​ನ ಸ್ವರೂಪ ತೀವ್ರವಾಗಿ ಬದಲಾಗುತ್ತಿರುವುದರಿಂದ ಸ್ಪಿನ್ನರ್​ಗಳ ಮತ್ತೊಂದು ಸುವರ್ಣ ಯುಗ ಬರಲಾರದೆಂದು ಮುರಳಿ ಭಾವಿಸುತ್ತಾರೆ.

ಮೂಲಭೂತ ಸಮಸ್ಯೆಯೇನೆಂದರೆ, ಟಿ20 ಕ್ರಿಕೆಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಟೆಸ್ಟ್​ ಕ್ರಿಕೆಟ್​ನ ಸ್ವರೂಪವನ್ನು ಬದಲಾಯಿಸಿವೆ. ನಾನಾಡುತ್ತಿದ್ದ ದಿನಗಳಲ್ಲಿ ಬ್ಯಾಟ್ಸ್​ಮನ್​ಗಳು ತಾಂತ್ರಿಕವಾಗಿ ಪರಿಣಿತರಾಗಿದ್ದರು ಮತ್ತು ನಿರ್ಜೀವ ಪಿಚ್​ಗಳ ಮೇಲೆ ನಾವು ಬೌಲಿಂಗ್ ಮಾಡಬೇಕಾಗುತ್ತಿತ್ತು, ಈಗಿನ ಆಟಗಾರರು ಮೂರು ದಿನಗಳಲ್ಲಿ ಟೆಸ್ಟ್ ಪಂದ್ಯವನ್ನು ಮುಗಿಸುವ ತವಕದಲ್ಲಿರುತ್ತಾರೆ ಎಂದು ಮುರಳಿ ಹೇಳಿದ್ದಾರೆ.

ನೇಥನ್ ಲಿಯಾನ್

ನನ್ನ ಸಮಕಾಲೀನ ಸ್ಪಿನ್ನರ್​ಗಳು ಪಿಚ್​ನಿಂದ ನೆರವು ಪಡೆಯಲು ಹೆಚ್ಚು ಶ್ರಮವಹಿಸಬೇಕಾಗುತಿತ್ತು. ಈಗಿನ ಬೌಲರ್​ಗಳು ಅದನ್ನು ಮಾಡಬೇಕಿಲ್ಲ. ಸತತವಾಗಿ ಉತ್ತಮ ಲೈನ್ ಮತ್ತು ಲೆಂಗ್ತ್ ಕಾಯ್ದುಕೊಂಡು ಬೌಲ್ ಮಾಡಿದರೆ ಸಾಕು, ಅವರಿಗೆ 5 ವಿಕೆಟ್​ಗಳು ಸುಲಭವಾಗಿ ಸಿಗುತ್ತವೆ. ಯಾಕೆಂದರೆ ಮಾಡರ್ನ್ ಯುಗದ ಬ್ಯಾಟ್ಸ್​ಮನ್​ಗಳು ಆಕ್ರಮಣಕಾರಿ ಆಟವಾಡಲು ಬಯಸುತ್ತಾರೆ ಎಂದು ಮುರಳಿ ಹೇಳಿದ್ದಾರೆ.

ಸ್ಪಿನ್ನರ್​ಗಳು ಫೀಲ್ಡ್ ಅನ್ನು ಸರಿಯಾಗಿ ಸೆಟ್ ಮಾಡಿಕೊಂಡರೆ ವಿಕೆಟ್​ಗಳನ್ನು ಕಬಳಿಸುವ ಉತ್ತಮ ಅವಕಾಶ ಅವರಿಗಿದೆ. ಬ್ಯಾಟ್ಸ್​ಮನ್​ಗಳು ತಾವಾಗಿಯೇ ಪ್ರಮಾದವೆಸಗಿ ವಿಕೆಟ್ ಒಪ್ಪಿಸಿಬಿಡುತ್ತಾರೆ. ನನ್ನ ಜಮಾನಾದಲ್ಲಿ ಸ್ಪಿನ್ನರ್​ಗಳು ವಿಕೆಟ್ ಪಡೆಯಲು ಬಹಳ ಶ್ರಮ ಪಡಬೇಕಾಗುತ್ತಿತ್ತು. ಹಾಗಾಗೇ ಅವರು ಹೊಸ ಎಸೆತಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈಗಿನ ಬೌಲರ್​ಗಳು ಅದನ್ನೆಲ್ಲ ಟಿ20 ಕ್ರಿಕೆಟ್​ನಲ್ಲಿ ಮಾಡುತ್ತಾರೆ. ಬ್ಯಾಟ್ಸ್​ಮನ್​ಗಳು ಅಕ್ರಮಣಕಾರಿ ಮೂಡ್​ನಲ್ಲಿ ಇರುವುದರಿಂದ ಸ್ಪಿನ್ನರ್​ಗಳು ತಮ್ಮ ಬೌಲಿಂಗ್​ನಲ್ಲಿ ವೈವಿಧ್ಯತೆ ತರಲು ಪ್ರಯತ್ನಿಸುತ್ತಾರೆ. ಆದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅದು ಬೇಕಿಲ್ಲ ಎಂದು ಮುರಳಿ ಹೇಳಿದ್ದಾರೆ.

 

ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Loading...
Unable to load recommendations.
Follow Us