ಬೆಂಗಳೂರು: ಆನ್‌ಲೈನ್ ಗೇಮಿಂಗ್ ಆ್ಯಪ್ ‘ಡ್ರೀಮ್ 11’ ಕರ್ನಾಟಕದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದ್ದು, ಇದಕ್ಕೆ ಬೇಸರ ಪಟ್ಟವರ ಸಂಖ್ಯೆಗಿಂತ ಸಂಬ್ರಮಿಸಿದವರ ಸಂಖ್ಯೆಯೇ ಹೆಚ್ಚು. ಕಂಪನಿಯ ಸಂಸ್ಥಾಪಕರ ಮೇಲೆ 2 ದಿನದ ಹಿಂದೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ, ‘ಡ್ರೀಮ್ 11’ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. #ಡ್ರೀಮ್11ಸ್ಥಗಿತ ಅಡಿಯಲ್ಲಿ ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಪ್ರತ್ರಿಕ್ರಿಯಿಸಿರುವ ಅನೇಕ ಜನರು ಇದೊಂದು ಉತ್ತಮ ನಿರ್ಧಾರ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಕ್ತಬೀಜಾಸುರನಂತೆ, ಜೂಜು ಸಾಯುವುದು ಸುಲಭವಲ್ಲ ಇನ್ನೊಂದು, ಮತ್ತೊಂದು, ಮಗದೊಂದು ರೂಪ ತಳೆದು ಬಂದೇ ಬರುತ್ತದೆ, ರಕ್ತ ರುಚಿಯ ಸವಿದ ಕಾಡು ಮೃಗ ಊರಿಗೆ ನುಗ್ಗಿದಂತೆ! ಕಣ್ಣೊರೆಸುವ ತಂತ್ರ, ಹುಶಾರಾಗಿರಬೇಕಷ್ಟೆ!’ ಎಂದು ಮಂಜುನಾಥ್ ಪಾಪಣ್ಣ ಕೂ ಮಾಡಿದ್ದಾರೆ.
‘ಆನ್ಲೈನ್ ಜೂಜಿನ ಜಾಹೀರಾತು ಮಾಡುವವರ ಮೇಲೆ ಹೋರಾಟಗಾರರು ಮುರಕೊಂಡು ಬೀಳೋರು, ಅವರ ಉದ್ದೇಶವೂ ಸರಿಯಾಗಿತ್ತು. ಈಗ ಸರ್ಕಾರದ ಈ ನಿರ್ಧಾರ ಭೇಷ್ ಎನ್ನಿಸಿಕೊಳ್ಳುವಂತಿದೆ’ ಎಂದು ಸುನಿಲ್ ಎನ್ನುವರು ಹೇಳಿದ್ದಾರೆ.
‘ಮಹಾಭಾರತಕ್ಕೆ ಕಾರಣವು ಜೂಜೆ ಎಷ್ಟೋ ಜನರ ಜೀವನ ಹಾಳಾಗುವುದಕ್ಕೆ ಕಾರಣ ಜೂಜು. ಸರ್ಕಾರ ಆನ್ಲೈನ್ ಜೂಜು ನಿಷೇದ ಮಾಡಿರುವುದು ಒಳ್ಳೆಯ ವಿಚಾರ. ನನ್ನ ಸ್ನೇಹಿತನನ್ನು ಈ ಜೂಜಿನಿಂದ ಕಳೆದುಕೊಂಡಿದ್ದೇನೆ. ಆದ್ದರಿಂದ ಈ ನಿರ್ಧಾರ ತುಂಬಾ ಖುಷಿ ತಂದಿದೆ. ಇದು ಇನ್ನಷ್ಟೇ ತರಹದ ಜೂಜಿನ ಮೇಲೆ ಇದು ಅನ್ವಯವಾಗಲಿ’ ಎಂದು ಕಾರ್ತಿಕ್ ಎನ್ನುವವರು ಆಶಯ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಫ್ಯಾಂಟಸಿ ಗೇಮ್ ಸಂಸ್ಥೆ ಡ್ರೀಮ್ 11 ಸ್ಥಗಿತಗೊಳಿಸಿದೆ. ಮುಂಬೈ ಮೂಲದ ಡ್ರೀಮ್ 11 ಸಂಸ್ಥೆ ಕರ್ನಾಟಕದಲ್ಲಿ ಜಾರಿಯಾಗಿರುವ ಆನ್‌ಲೈನ್ ಜೂಜು ನಿಷೇಧ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಅನ್ನೋ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಡ್ರೀಮ್ 11 ಕನ್ನಡಿಗರಿಗೆ ನಿರ್ಬಂಧ ವಿಧಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರು ಡ್ರೀಮ್ 11 ನಲ್ಲಿ ನಗದು ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಮೇಘಶ್ರೀ.