ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮಧ್ಯೆ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿದ್ದ ಒಂದು ದಿನದ ಪಂದ್ಯಗಳ ಸರಣಿಯನ್ನು ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಎರಡೂ ಕ್ರಿಕೆಟ್ ಮಂಡಳಿಗಳ ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯೆಂದು ತಿಳಿಸಿದೆ.
ಜೈವಿಕ-ಸುರಕ್ಷತೆ ಶಿಷ್ಟಾಚಾರ ಪಾಲಿಸುವಲ್ಲಿ ಅಗಿರುವ ಉಲ್ಲಂಘನೆಯಿಂದಾಗಿ ಅಟಗಾರರು ಮತ್ತು ಅವರು ಕೇಪ್ಟೌನ್ನಲ್ಲಿ ಉಳಿದುಕೊಂಡಿರುವ ಹೊಟೆಲ್ ಸಿಬ್ಬಂದಿ ಪೈಕಿ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾದ ನಂತರ ಸರಣಿಯನ್ನು ಮುಂದೂಡಲಾಗಿದೆಯೆಂದು ಈಸಿಬಿ ಪ್ರಕಟಣೆ ತಿಳಿಸಿದೆ.
ಮೂಲಗಳ ಪ್ರಕಾರ ಅತಿಥೇಯ ತಂಡದ ಒಬ್ಬ ಆಟಗಾರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೆಯೇ ಪ್ರವಾಸಿ ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರಲ್ಲಿ ಖಚಿತವಲ್ಲದ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ.
‘‘ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಪರಸ್ಪರ ಒಪ್ಪಿಕೊಂಡು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಪುರುಷರ ಒಂದು ದಿನದ ಪಂದ್ಯಗಳ ಸರಣಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಎರಡು ಮಂಡಳಿಗಳಿಗೂ ತಮ್ಮ ತಮ್ಮ ಟೀಮಿನ ಆಟಗಾರರ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಈ ಸರಣಿಯು ಐಸಿಸಿ ಪುರುಶರ ಕ್ರಿಕೆಟ್ ಸೂಪರ್ ಲೀಗ್ನ ಭಾಗವಾಗಿರುವುದರಿಂದ, ಸರಣಿಯನ್ನು ಯಾವಾಗ ಆಯೋಜಿಲಾಗುವುದೆಂದು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ,’’ ಎಂದು ಈಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
‘‘ಆಟಗಾರರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯೆನ್ನುವುದನ್ನು ಈಸಿಬಿ ಯಾವಾಗಲೂ ಪ್ರತಿಪಾದಿಸಿದೆ. ಅಲ್ಲಿನ ವಿದ್ಯಮಾನಗಳು ಆಟಗಾರರ ಮೇಲೆ ತೀವ್ರ ಸ್ವರೂಪದ ಪರಿಣಾಮವನ್ನು ಬೀರಬಹುದು. ವಿಷಯದ ಗಂಭೀರತೆಯನ್ನು ಗ್ರಹಿಸಿಕೊಂಡು ಸರಣಿ ಮುಂದೂಡುವ ನಮ್ಮ ಮನವಿಗೆ ಸ್ಪಂದಿಸಿದ ಸಿಎಸ್ಎಗೆ ನಾವು ಆಭಾರಿಯಾಗಿದ್ದೆವೆ,’’ ಎಂದು ಈಸಿಬಿ ಮುಖ್ಯ ನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಸ್ಎ ಹಂಗಾಮಿ ಸಿಈಒ ಕುಗಂಡ್ರಿ ಗೊವೆಂಡರ್, ಈಸಿಬಿ ತಮ್ಮ ಮಂಡಳಿಯೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯಕ್ಕಾಗಿ ಧನ್ಯವಾದಗಳನ್ನು ಹೇಳುತ್ತಾ, ಸರಣಿಯನ್ನು ಆದಷ್ಟು ಬೇಗನೆ ಆಯೋಜನೆಗೊಳ್ಳುವ ಬಗ್ಗೆ ತಮ್ಮ ಮಂಡಳಿ ನಿರೀಕ್ಷೆಯಿಟ್ಟುಕೊಂಡಿದೆ ಎಂದು ಹೇಳಿದ್ದಾರೆ.
Published On - 9:26 pm, Mon, 7 December 20