Neeraj Chopra: 40 ಮೀಟರ್ನಿಂದ 88.17 ಮೀಟರ್ವರೆಗೆ; ಇಲ್ಲಿದೆ ನೀರಜ್ ಬೆಳೆದು ಬಂದ ಹಾದಿ
Neeraj Chopra: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೀಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರಕ್ಕೆ ಭರ್ಜಿಯಿಂದ ಚುಚ್ಚಿದ ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ 40 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವೃತ್ತಿಜೀವನ ಆರಂಭಿಸಿದ ನೀರಜ್ ಇದೀಗ ಒಲಿಂಪಿಕ್ಸ್ ಜೊತೆಗೆ ವಿಶ್ವ ಅಥ್ಲೀಟಿಕ್ ಚಾಂಪಿಯನ್ಶಿಪ್ನಲ್ಲೂ ಚಿನ್ನ ಗೆದ್ದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ನೀರಜ್ ಚೋಪ್ರಾ
ನೀರಜ್ ಚೋಪ್ರಾ (Neeraj Chopra) ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಚಿನ್ನದ ಪದಕ ಬಂದು ಸೇರಿದೆ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೀಟಿಕ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಬಂಗಾರಕ್ಕೆ ಭರ್ಜಿಯಿಂದ ಚುಚ್ಚಿದ ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ 40 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವೃತ್ತಿಜೀವನ ಆರಂಭಿಸಿದ ನೀರಜ್ ಇದೀಗ ಒಲಿಂಪಿಕ್ಸ್ ಜೊತೆಗೆ ವಿಶ್ವ ಅಥ್ಲೀಟಿಕ್ ಚಾಂಪಿಯನ್ಶಿಪ್ನಲ್ಲೂ ಚಿನ್ನ ಗೆದ್ದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
24 ಡಿಸೆಂಬರ್ 1997 ರಂದು ಹರಿಯಾಣದಲ್ಲಿ ಜನಿಸಿದ ನೀರಜ್, ತೂಕ ಇಳಿಸಿಕೊಳ್ಳುವ ಸಲುವಾಗಿ ಜಿಮ್‌ಗೆ ಸೇರಿದ್ದರು. ಈ ವೇಳೆ ಪಾಣಿಪತ್‌ನ ಸ್ಟೇಡಿಯಂನಲ್ಲಿ ಆಡುತ್ತಿದ್ದಾಗ ಕೆಲವು ಜಾವೆಲಿನ್ ಎಸೆತಗಾರರನ್ನು ನೋಡಿದ ನೀರಜ್‌ಗೆ ತಾನೂ ಜಾವೆಲಿನ್ ಎಸೆತಗಾರನಾಗಬೇಕೆಂಬ ಬಯಕೆ ಹುಟ್ಟಿತು. 2010 ರಲ್ಲಿ, ಜಾವೆಲಿನ್ ಎಸೆತಗಾರ ಅಭಿಷೇಕ್ ಚೌಧರಿ ಪಾಣಿಪತ್‌ನ ಸಾಯಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದುದನ್ನು ನೋಡಿ ನೀರಜ್ ಕೂಡ ಜಾವೆಲಿನ್ ಎಸೆಯಲಾರಂಭಿಸಿದರು. ಈ ವೇಳೆ ತರಬೇತಿಯಿಲ್ಲದೆ ನೀರಜ್ 40 ಮೀಟರ್ ಎಸೆಯುವುದನ್ನು ನೋಡಿದ ಅಭಿಷೇಕ್, ನೀರಜ್‌ಗೆ ತರಬೇತಿ ನೀಡಲು ಪ್ರಾರಂಭಿಸಿದರು. ಅಲ್ಲಿಂದ ಪ್ರಾರಂಭವಾದ ನೀರಜ್ ಜಾವೆಲಿನ್ ಸಾಧನೆ ಇದೀಗ ವಿಶ್ವದ ಗಮನ ಸೆಳೆಯುತ್ತಿದೆ. ಇನ್ನು ಜಾವೆಲಿನ್‌ನಲ್ಲಿ ನೀರಜ್ ಹಂತಹಂತವಾಗಿ ಬೆಳೆದುದ್ದನ್ನು ಗಮನಿಸುವುದಾದರೆ..
ನೀರಜ್ ಚೋಪ್ರಾ ಅವರ ಟಾಪ್ 10 ಬೆಸ್ಟ್ ಜಾವೆಲಿನ್ ಎಸೆತಗಳಿವು
- ಜಿಲ್ಲಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸುವುದರೊಂದಿಗೆ ನೀರಜ್ ತಮ್ಮ ಜಾವೆಲಿನ್ ವೃತ್ತಿಜೀವನದ ಪದಕ ಬೇಟೆ ಆರಂಭಿಸಿದರು.
- 2012ರ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 68.40 ಮೀಟರ್ ದೂರ ಎಸೆದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು.
- 2013 ರಲ್ಲಿ ಉಕ್ರೇನ್‌ನಲ್ಲಿ ನಡೆದ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಭಾಗವಹಿಸಿದ್ದರು. ಇದು ಅವರ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿತ್ತು.
- 2014 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ನೀರಜ್ ತಮ್ಮ ಅಂತರರಾಷ್ಟ್ರೀಯ ಪದಕದ ಬೇಟೆಯನ್ನು ಆರಂಭಿಸಿದರು.
- 2015 ರಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕೂಟದಲ್ಲಿ 81.04 ಮೀಟರ್ ದೂರ ಭರ್ಜಿ ಎಸೆದಿದ್ದ ನೀರಜ್, ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು.
- 2015 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 5 ನೇ ಸ್ಥಾನ ಗಳಿಸಿದ ನೀರಜ್ ಅವರನ್ನು ಆ ನಂತರ ರಾಷ್ಟ್ರೀಯ ಮಟ್ಟದ ತರಬೇತಿ ಶಿಬಿರಕ್ಕೆ ಕರೆತರಲಾಯಿತು. ಇಲ್ಲಿಂದ ನೀರಜ್ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ಸಿಕ್ಕಿತು.
- 2016 ರಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ 82.23 ಮೀಟರ್ ಎಸೆಯುವ ಮೂಲಕ ನೀರಜ್ ಚಿನ್ನ ಗೆದ್ದರು. ಆದರೆ ಕೇವಲ 1 ಮೀಟರ್ ಅಂತರದಲ್ಲಿ ಒಲಿಂಪಿಕ್ ಅರ್ಹತೆಯನ್ನು ಕಳೆದುಕೊಂಡರು.
- 2016 ರಲ್ಲಿ ನಡೆದ ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 86.48 ಮೀಟರ್ ಎಸೆಯುವ ಮೂಲಕ ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆ ಸೃಷ್ಟಿಸಿ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಈ ವಿಶ್ವ ದಾಖಲೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮಾಡಿದರಾದರೂ ನೀರಜ್‌ಗೆ 2016 ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಚಾಂಪಿಯನ್ ಆಗುವ ಒಂದು ವಾರದ ಮೊದಲು ಒಲಿಂಪಿಕ್ ಅರ್ಹತೆಯ ಕಟ್-ಆಫ್ ದಿನಾಂಕದ ಗುಡುವು ಮುಗಿದಿತ್ತು.
- 2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 85.23 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು.
- 2018 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 86.47 ಮೀಟರ್ ಎಸೆದು ಚಿನ್ನ ಗೆದ್ದ ನೀರಜ್, ಆ ಬಳಿಕ 2018 ರ ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದರು.
- 2019 ರಲ್ಲಿ, ಮೊಣಕೈ ಗಾಯದಿಂದಾಗಿ ಅವರು ವಿಶ್ವ ಚಾಂಪಿಯನ್‌ಶಿಪ್ ಆಡಲು ಸಾಧ್ಯವಾಗಲಿಲ್ಲ. 16 ತಿಂಗಳ ಕಠಿಣ ಪರಿಶ್ರಮದ ನಂತರ, 2020 ರಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಮರಳಿದ ನೀರಜ್, ಅಥ್ಲೆಟಿಕ್ಸ್ ಸೆಂಟ್ರಲ್ ನಾರ್ತ್ ವೆಸ್ಟ್ ಲೀಗ್‌ನಲ್ಲಿ 87.86 ಮೀಟರ್ ಎಸೆಯುವ ಮೂಲಕ ಪದಕ ಗೆದ್ದರು. ಅಲ್ಲದೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
- ತರಬೇತಿಗಾಗಿ ಟರ್ಕಿಗೆ ಹೋಗಿದ್ದ ನೀರಜ್, ಕೊರೊನಾದಿಂದಾಗಿ ಮಾರ್ಚ್ 2020 ರಲ್ಲಿ ದೇಶಕ್ಕೆ ಮರಳಬೇಕಾಯಿತು. ಸಾಂಕ್ರಾಮಿಕ ರೋಗದಿಂದಾಗಿ, ತರಬೇತಿಗಾಗಿ ಅವರ ಸ್ವೀಡನ್ ವೀಸಾ ಅರ್ಜಿಯನ್ನು ಸಹ ತಿರಸ್ಕರಿಸಲಾಯಿತು. ಸಾಕಷ್ಟು ಪ್ರಯತ್ನದ ನಂತರ, ಯುರೋಪ್ಗೆ ಪ್ರಯಾಣ ಬೆಳೆಸಲು ಅನುಮತಿ ಪಡೆದ ನೀರಜ್, ಯುರೋಪ್ನಲ್ಲಿ ಅನೇಕ ಪಂದ್ಯಾವಳಿಗಳನ್ನು ಗೆದ್ದರು.
- 4 ಆಗಸ್ಟ್ 2021 ರಂದು, ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ ನೀರಜ್, ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರು. ಆಗಸ್ಟ್ 7ರಂದು ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಎಸೆದು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು.
- ಜೂನ್ 2022 ರಲ್ಲಿ ನಡೆದ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದರು. ಏಕೆಂದರೆ ಇದು ಅವರ ವೃತ್ತಿಜೀವನದ ಅತ್ಯುತ್ತಮ ಎಸೆತವಾಗಿತ್ತು.
- ಜುಲೈ 2022 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 88.13 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು.
- 8 ಸೆಪ್ಟೆಂಬರ್ 2022 ರಂದು ನಡೆದ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರಾದರು. ಇದರೊಂದಿಗೆ ಅವರು 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು.
- ಮೇ 2023 ರಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ 88.67 ಮೀಟರ್ ಎಸೆಯುವ ಮೂಲಕ ನೀರಜ್ ಅಗ್ರಸ್ಥಾನ ಪಡೆದರು.
- ಈಗ ಬುಡಾಪೆಸ್ಟ್‌ನಲ್ಲಿ 88.17 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದ ನೀರಜ್, ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯನೆಂಬ ದಾಖಲೆ ಬರೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 am, Mon, 28 August 23