ಜಾವೆಲಿನ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟ ಕನ್ನಡಿಗ ಡಿಪಿ ಮನು; ಚಾಂಪಿಯನ್ ಪಟ್ಟಕ್ಕಾಗಿ ನೀರಜ್- ಅರ್ಷದ್ ನಡುವೆ ಪೈಪೋಟಿ!

|

Updated on: Aug 26, 2023 | 9:11 AM

World Championships Final: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಜಾವೆಲಿನ್ ತಾರೆ ಅರ್ಷದ್ ನದೀಮ್ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಸಲುವಾಗಿ ಮುಖಾಮುಖಿಯಾಗಲಿದ್ದಾರೆ. ಭಾರತದ ನೀರಜ್ ಅವರಲ್ಲದೆ, ಡಿಪಿ ಮನು (81.31 ಮೀಟರ್) ಮತ್ತು ಕಿಶೋರ್ ಜೆನಾ (80.55 ಮೀಟರ್) ಕೂಡ ಫೈನಲ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ.

ಜಾವೆಲಿನ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟ ಕನ್ನಡಿಗ ಡಿಪಿ ಮನು; ಚಾಂಪಿಯನ್ ಪಟ್ಟಕ್ಕಾಗಿ ನೀರಜ್- ಅರ್ಷದ್ ನಡುವೆ ಪೈಪೋಟಿ!
ಕನ್ನಡಿಗ ಡಿಪಿ ಮನು, ನೀರಜ್ ಚೋಪ್ರಾ, ಕಿಶೋರ್
Follow us on

ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championship) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಅಂತಿಮ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಭಾನುವಾರ, ಆಗಸ್ಟ್ 27 ರಂದು, ಒಲಿಂಪಿಕ್ ಚಾಂಪಿಯನ್ ಮತ್ತು ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಮತ್ತು ಪಾಕಿಸ್ತಾನದ ಜಾವೆಲಿನ್ ಸ್ಟಾರ್ ಅರ್ಷದ್ ನದೀಮ್ (Arshad Nadeem) ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಸಲುವಾಗಿ ಮುಖಾಮುಖಿಯಾಗಲಿದ್ದಾರೆ. ಭಾರತದ ನೀರಜ್ ಅವರಲ್ಲದೆ, ಡಿಪಿ ಮನು (81.31) ಮತ್ತು ಕಿಶೋರ್ ಜೆನಾ (80.55) ಕೂಡ ಫೈನಲ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಮೊದಲ ಬಾರಿಗೆ ಭಾರತದ ಮೂವರು ಅಥ್ಲೀಟ್‌ಗಳು ಫೈನಲ್‌ನಲ್ಲಿ ಭಾಗವಹಿಸುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ , ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಪಂದ್ಯವು ಶುಕ್ರವಾರ, ಆಗಸ್ಟ್ 25 ರಂದು ನಡೆಯಿತು. ಇದರಲ್ಲಿ ಭಾರತದ ಮೂವರು ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಭಾಗವಹಿಸಿದ್ದರು. ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಮತ್ತು ಜೆಕ್ ಗಣರಾಜ್ಯದ ಜಾಕೋಬ್ ವಾಡ್ಲೆಚ್ ಅವರಂತಹ ಸ್ಟಾರ್ ಜಾವೆಲಿನ್‌ ಎಸೆತಗಾರರೂ ಸಹ ಇದರಲ್ಲಿ ಭಾಗವಹಿಸಿದ್ದರು.

Asian Athletics Championships 2023: ಜಾವೆಲಿನ್ ಥ್ರೋ ವಿಭಾಗದಲ್ಲಿ ಬೆಳ್ಳಿ ಗೆದ್ದ ಹಾಸನದ ಡಿಪಿ ಮನು! ವಿಡಿಯೋ ನೋಡಿ

ಮೊದಲ ಎಸೆತದಲ್ಲೇ ನೀರಜ್ ಪಾಸ್

ವಾಸ್ತವವಾಗಿ ಈ ಚಾಂಪಿಯನ್​ಶಿಪ್​ನ ಜಾವೆಲಿನ್‌ ವಿಭಾಗದಲ್ಲಿ ಫೈನಲ್​ಗೆ ಅರ್ಹತೆ ಪಡೆಯಲು 83 ಮೀಟರ್‌ ದೂರ ಜಾವೆಲಿನ್‌ ಎಸೆಯಬೇಕಿತ್ತು. ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿದ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ನೀರಜ್, ತನ್ನ ಮೊದಲ ಎಸೆತದಿಂದಲೇ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದರು. ಒಲಿಂಪಿಕ್ ಚಾಂಪಿಯನ್‌ನ ಈ ಥ್ರೋ ನೇರವಾಗಿ 88.77 ಮೀಟರ್‌ ದೂರ ಕ್ರಮಿಸಿತು. ಇದು ನೀರಜ್ ಅವರ ಈ ಸೀಸನ್​ ಅತ್ಯುತ್ತಮ ಥ್ರೋ ಕೂಡ ಆಗಿದ್ದು, ಇದಾದ ನಂತರ ನೀರಜ್ ಯಾವುದೇ ಥ್ರೋಗಳನ್ನು ಮಾಡದೆ ನೇರವಾಗಿ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡರು.

ಫೈನಲ್ ಪ್ರವೇಶಿಸಿದ ಪಾಕಿಸ್ತಾನದ ಅರ್ಷದ್

ಜಾವೆಲಿನ್ ಥ್ರೋನಲ್ಲಿ ಭಾರತದಲ್ಲಿ ನೀರಜ್ ಹೇಗೆ ಖ್ಯಾತಿ ಗಳಿಸಿದ್ದಾರೋ, ಪಾಕಿಸ್ತಾನದಲ್ಲಿ ಅರ್ಷದ್ ನದೀಮ್ ಅಷ್ಟೇ ಖ್ಯಾತಿ ಗಳಿಸಿದ್ದಾರೆ. ಗಾಯದಿಂದ ವಾಪಸಾಗುತ್ತಿದ್ದ ಅರ್ಷದ್ ತಮ್ಮ ಮೊದಲ ಎಸೆತದಲ್ಲಿ ಕೇವಲ 70 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಆರಂಭಿಸಿದರು. ಆದಾಗ್ಯೂ, ಆ ಬಳಿಕ ಪುನರಾಗಮನ ಮಾಡಿದ ಅರ್ಷದ್ ಮುಂದಿನ ಎರಡು ಎಸೆತಗಳಲ್ಲಿ ಕ್ರಮವಾಗಿ 81.53 ಮೀಟರ್ ಮತ್ತು ಕೊನೆಯ ಎಸೆತದಲ್ಲಿ 86.79 ಮೀಟರ್ ದೂರ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು.

ಈ ಬಾರಿ ಸ್ಪರ್ಧೆ ಕಠಿಣವಾಗಿದೆ

ಇದರೊಂದಿಗೆ ಫೈನಲ್‌ನಲ್ಲಿ ನೀರಜ್ ಮತ್ತು ಅರ್ಷದ್ ನದೀಮ್ ಮತ್ತೊಮ್ಮೆ ಮುಖಾಮುಖಿಯಾಗುವುದು ಖಚಿತವಾದಂತ್ತಾಗಿದೆ. ಈ ಇಬ್ಬರೂ ಕೂಡ 2018 ರ ಏಷ್ಯನ್ ಗೇಮ್ಸ್‌ನಿಂದ ಒಲಂಪಿಕ್ ಗೇಮ್ಸ್‌ವರೆಗೆ ಅನೇಕ ಈವೆಂಟ್​ಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಆದರೆ ಈ ಮುಖಾಮುಖಿಯಲ್ಲಿ ಪ್ರತಿ ಬಾರಿಯೂ ನೀರಜ್ ಮೇಲುಗೈ ಸಾಧಿಸಿದ್ದಾರೆ. ಆದರೆ, ಈ ಬಾರಿ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಕಳೆದ ವರ್ಷ ನೀರಜ್ ಅನುಪಸ್ಥಿತಿಯಲ್ಲಿ ಅರ್ಷದ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅರ್ಷದ್ ಆಗ 90 ಮೀಟರ್‌ಗಿಂತ ಹೆಚ್ಚು ದೂರ ಜಾವೆಲಿನ್ ಎಸೆದಿದ್ದರು. ಆದರೆ ನೀರಜ್ ಇಲ್ಲಿಯವರೆಗೆ 90 ಮೀಟರ್ ದೂರ ಭರ್ಜಿ ಎಸೆದಿಲ್ಲ. ಹೀಗಿರುವಾಗ ಫೈನಲ್‌ನಲ್ಲಿ ಇಬ್ಬರ ಪೈಪೋಟಿ ಈ ಬಾರಿ ಕುತೂಹಲ ಹಾಗೂ ರೋಚಕತೆಯಿಂದ ಕೂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ