AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ್ ಸಿಂಗ್ ಮನೆಗೆ ಪುಟ್ಟ ರಾಜಕುಮಾರಿಯ ಆಗಮನ; ಮುದ್ದಾದ ಮಗುವಿನ ಹೆಸರೇನು ಗೊತ್ತಾ?

Yuvraj Singh: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹೇಝಲ್ ಕೀಚ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಈ ವಿಚಾರವನ್ನು ಯುವರಾಜ್ ಸಿಂಗ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳು ಮೂಲಕ ಮಾಹಿತಿ ನೀಡಿದ್ದಾರೆ.

ಯುವರಾಜ್ ಸಿಂಗ್ ಮನೆಗೆ ಪುಟ್ಟ ರಾಜಕುಮಾರಿಯ ಆಗಮನ; ಮುದ್ದಾದ ಮಗುವಿನ ಹೆಸರೇನು ಗೊತ್ತಾ?
2ನೇ ಮಗುವಿನೊಂದಿಗೆ ಯುವರಾಜ್ ಸಿಂಗ್ ದಂಪತಿಗಳು
ಪೃಥ್ವಿಶಂಕರ
|

Updated on:Aug 26, 2023 | 8:13 AM

Share

ಟೀಂ ಇಂಡಿಯಾದ (Team India) ಮಾಜಿ ಆಲ್‌ರೌಂಡರ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh) ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹೇಝಲ್ ಕೀಚ್ (Hazel Keech) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಈ ವಿಚಾರವನ್ನು ಯುವರಾಜ್ ಸಿಂಗ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳು ಮೂಲಕ ಮಾಹಿತಿ ನೀಡಿದ್ದಾರೆ. ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಯುವಿ ತಮ್ಮ ಫ್ಯಾಮಿಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಎರಡನೇ ಮಗುವನ್ನು ಎತ್ತಿಕೊಂಡಿದ್ದರೆ, ಅವರ ಪತ್ನಿ ಮೊದಲ ಮಗುವಿನೊಂದಿಗೆ ಕುಳಿತಿರುವುದನ್ನು ಕಾಣಬಹುದಾಗಿದೆ.

ಮಗುವಿಗೆ ಹೆಸರಿಟ್ಟ ಯುವಿ

ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಯುವರಾಜ್ ಮತ್ತು ಹೇಝಲ್ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ. ಇನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವುದರೊಂದಿಗೆ ಯುವಿ ಎರಡನೇ ಮಗುವಿನ ಹೆಸರನ್ನು ಸಹ ಬಹಿರಂಗ ಪಡಿಸಿದ್ದಾರೆ. ಫೋಟೋ ಹಂಚಿಕೊಂಡಿರುವ ಯುವಿ ನಮ್ಮ ಪುಟ್ಟ ರಾಜಕುಮಾರಿ ‘ಔರಾ’ಗೆ ಸ್ವಾಗತ. ಇದೀಗ ನಮ್ಮ ಕುಟುಂಬ ಪೂರ್ಣಗೊಂಡಿದೆ. ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಆನಂದದಾಯಕವಾಗಿವೆ ಎಂದು ಬರೆದುಕೊಂಡಿದ್ದಾರೆ.

ಎರಡನೇ ಬಾರಿಗೆ ತಂದೆಯಾದ ಯುವಿ

ಯುವರಾಜ್ ಸಿಂಗ್ ಮತ್ತು ಅವರ ಬಹುದಿನಗಳ ಗೆಳತಿ ಹೇಝಲ್ ಕೀಚ್ 30 ಸೆಪ್ಟೆಂಬರ್ 2016 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಸುಮಾರು 5 ವರ್ಷಗಳ ನಂತರ, ಯುವಿ ಮತ್ತು ಹೇಝಲ್ ದಂಪತಿಗಳಿಗೆ 25 ಜನವರಿ 2022 ರಂದು ಗಂಡು ಮಗು ಜನಿಸಿತ್ತು. ಮಗನಿಗೆ ಓರಿಯನ್ ಕೀಚ್ ಸಿಂಗ್ ಎಂದು ಹೆಸರಿಸಿಟ್ಟಿರುವ ಈ ದಂಪತಿಗಳು ತಮ್ಮ ಮಗನ ಮೊದಲ ಹುಟ್ಟುಹಬ್ಬವನ್ನು ಅತ್ಯಂತ ಸ್ಮರಣೀಯ ರೀತಿಯಲ್ಲಿ ಆಚರಿಸಿದ್ದರು.

ಯುವರಾಜ್ ಸಿಂಗ್ ತಾಯಿ ಬಳಿ 40 ಲಕ್ಷ ರೂ. ಸುಲಿಗೆಗೆ ಯತ್ನಿಸಿದ ಮಹಿಳೆಯ ಬಂಧನ..!

ಯುವಿ ವೃತ್ತಿ ಬದುಕು ಹೀಗಿತ್ತು

ಇನ್ನು ಯುವಿ ವೃತ್ತಿಜೀವನದ ಕುರಿತು ಮಾತನಾಡುವುದಾದರೆ, 2000 ರಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಯುವರಾಜ್ 2019 ರಲ್ಲಿ ಕ್ರಿಕೆಟ್​ಗೆ ವಿದಾಯ ಹೇಳಿದರು. ಟೀಂ ಇಂಡಿಯಾ ಪರ ಮೂರು ಸ್ವರೂಪಗಳಲ್ಲಿ 398 ಪಂದ್ಯಗಳನ್ನಾಡಿರುವ ಯುವಿ ಇದರಲ್ಲಿ ಒಟ್ಟು 11,000 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಯುವಿ ವೃತ್ತಿಜೀವನದ ಅವಿಸ್ಮರಣೀಯ ಗಳಿಗೆ ಎಂದರೆ 2007 ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸುವುದರೊಂದಿಗೆ ಕೇವಲ 12 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ದಾಖಲೆ ಬರೆದಿದ್ದರು.

ಇನ್ನು ಭಾರತ 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಒಂದೇ ವಿಶ್ವಕಪ್‌ನಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 15 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಆಲ್‌ರೌಂಡರ್ ಎನಿಸಿಕೊಂಡಿದ್ದರು. ಈ ವಿಶ್ವಕಪ್​ನಲ್ಲಿ ಯುವಿ 362 ರನ್ ಮತ್ತು 15 ವಿಕೆಟ್‌ ಸೇರಿದಂತೆ ನಾಲ್ಕು ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆಗೆ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:03 am, Sat, 26 August 23