ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಬಿಸಿಸಿಐನ ಉನ್ನತ ಅಧಿಕಾರಿಗಳು! ವರದಿ

Asia Cup 2023: ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಗಳಿಗೆ ಪಿಸಿಬಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಭಾಗವಾಗಿರುವ ಅಧಿಕಾರಿಗಳನ್ನು ಆಹ್ವಾನಿಸಿದೆ. ಆದರೆ ಈ ಪೈಕಿ ಬಿನ್ನಿ ಮತ್ತು ಶುಕ್ಲಾ ಮಂಡಳಿಯಿಂದ ಅನುಮತಿ ಪಡೆದಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಂಡಳಿಯ ಕಾರ್ಯದರ್ಶಿ ಜಯ್ ಶಾ ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಬಿಸಿಸಿಐನ ಉನ್ನತ ಅಧಿಕಾರಿಗಳು! ವರದಿ
ಬಿಸಿಸಿಐ ಅಧಿಕಾರಿಗಳು
Follow us
ಪೃಥ್ವಿಶಂಕರ
|

Updated on:Aug 26, 2023 | 7:10 AM

ಏಷ್ಯಾಕಪ್ 2023 (Asia Cup 2023) ಆಗಸ್ಟ್ 30 ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ (Pakistan and Sri Lanka) ಆರಂಭವಾಗಲಿದೆ. ಟೂರ್ನಿಯ ಮೂಲ ಆತಿಥೇಯ ಪಾಕಿಸ್ತಾನದಲ್ಲಿ ಟೂರ್ನಿಯ ನಾಲ್ಕು ಪಂದ್ಯಗಳು ನಡೆಯಲಿದ್ದು, ಪಾಕ್ ನೆಲದಲ್ಲಿ ನಡೆಯಲ್ಲಿರುವ ಕೆಲವು ಪಂದ್ಯಗಳನ್ನು ವೀಕ್ಷಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್ ಬಿನ್ನಿ (Roger Binny) ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಿಸಿಸಿಐ ಅಧಿಕಾರಿಗಳಿಗೆ ಈ ಹಿಂದೆ ಆಹ್ವಾನವನ್ನು ಕಳುಹಿಸಿತ್ತು. ಅಂತಿಮವಾಗಿ ಪಾಕ್ ಆಹ್ವಾನಕ್ಕೆ ಬಿಸಿಸಿಐ ಅಸ್ತು ಎಂದಿದ್ದು, ಮಂಡಳಿಯ ಅಧ್ಯಕ್ಷ ಬಿನ್ನಿ ಅವರಲ್ಲದೆ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla ) ಕೂಡ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಆದರೆ, ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ (Jay Shah) ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಗಳಿಗೆ ಪಿಸಿಬಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಭಾಗವಾಗಿರುವ ಅಧಿಕಾರಿಗಳನ್ನು ಆಹ್ವಾನಿಸಿದೆ. ಆದರೆ ಈ ಪೈಕಿ ಬಿನ್ನಿ ಮತ್ತು ಶುಕ್ಲಾ ಮಂಡಳಿಯಿಂದ ಅನುಮತಿ ಪಡೆದಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಂಡಳಿಯ ಕಾರ್ಯದರ್ಶಿ ಜಯ್ ಶಾ ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

Asia Cup 2023: ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಆಹ್ವಾನ ನೀಡಿದ ಪಾಕ್ ಕ್ರಿಕೆಟ್ ಮಂಡಳಿ

ಬಿನ್ನಿ-ಶುಕ್ಲಾ ಪಾಕಿಸ್ತಾನಕ್ಕೆ

ಆಗಸ್ಟ್ 30 ರಂದು ಮುಲ್ತಾನ್‌ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಮೊದಲ ಪಂದ್ಯ ಸೇರಿದಂತೆ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಏಷ್ಯಾಕಪ್‌ನ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಇದಲ್ಲದೇ ಪಾಕಿಸ್ತಾನದಲ್ಲಿ ಸೂಪರ್-ಫೋರ್ ಪಂದ್ಯವೂ ನಡೆಯಲಿದ್ದು, ಇದರಲ್ಲಿ ಪಾಕ್ ತಂಡ ಆಡುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಬಿನ್ನಿ ಮತ್ತು ಶುಕ್ಲಾ ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 7 ರವರೆಗೆ ಪಾಕಿಸ್ತಾನದಲ್ಲಿರುತ್ತಾರೆ. ಈ ಸಮಯದಲ್ಲಿ, ಅವರು ಸೆಪ್ಟೆಂಬರ್ 5 ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪಂದ್ಯವನ್ನು ವೀಕ್ಷಿಸಲಿದ್ದಾರೆ ಮತ್ತು ಮರುದಿನ ಸೂಪರ್ ಫೋರ್‌ನಲ್ಲಿ ಪಾಕಿಸ್ತಾನದ ಮೊದಲ ಪಂದ್ಯವನ್ನೂ ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.

ಭಾರತ-ಪಾಕ್ ಪಂದ್ಯದ ನಂತರ ಪಾಕಿಸ್ತಾನ ಪ್ರವಾಸ

ಆದಾಗ್ಯೂ, ಪಾಕಿಸ್ತಾನಕ್ಕೆ ಹೋಗುವ ಮೊದಲು, ಬಿಸಿಸಿಐ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಶ್ರೀಲಂಕಾಕ್ಕೆ ತೆರಳಲ್ಲಿದ್ದು, ಅಲ್ಲಿ ಅವರು ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲ್ಲಿದ್ದಾರೆ. ಈ ವೇಳೆ ಜಯ್ ಶಾ ಕೂಡ ಅವರ ಜೊತೆ ಇರುತ್ತಾರೆ. ಈ ಮೂವರೂ ಅಧಿಕಾರಿಗಳು ಸೆಪ್ಟೆಂಬರ್ 3 ರಂದು ಭಾರತಕ್ಕೆ ಮರಳಲಿದ್ದಾರೆ. ಆ ಬಳಿಕ ಬಿನ್ನಿ ಹಾಗೂ ಶುಕ್ಲಾ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದು ವದಂತಿ- ಇನ್‌ಸೈಡ್‌ಸ್ಪೋರ್ಟ್‌ ವರದಿ

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಬಿಸಿಸಿಐನ ಉನ್ನತ ಅಧಿಕಾರಿಗಳು ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂದು ಪಿಟಿಐ ಮಾಡಿರುವ ವರದಿಯ ತದ್ವಿರುದ್ಧವಾಗಿ ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದ್ದು, ಆ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐನ ಉನ್ನತ ಅಧಿಕಾರಿಗಳು ಹೋಗುತ್ತಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಖಚಿತಪಡಿಸಿದ್ದಾರೆ ಎಂದು ವರದಿ ಮಾಡಿದೆ. ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಎಸಿಸಿ ಅಧ್ಯಕ್ಷ ಜಯ್ ಶಾ ಕೂಡ ಅಲ್ಲಿಗೆ ಹೋಗುತ್ತಿಲ್ಲ. ಆದರೆ ಮುಲ್ತಾನ್‌ನಲ್ಲಿ ಆಗಸ್ಟ್ 30 ರಂದು ಪ್ರಾರಂಭವಾಗುವ ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಹ್ವಾನವನ್ನು ನೀಡಿದೆ ಎಂದು ಅಧಿಕಾರಿ ಖಚಿತಪಡಿಸಿದ್ದಾರೆ.

ಬಿಸಿಸಿಐನ ಹಿರಿಯ ಅಧಿಕಾರಿಯರನ್ನು ಉಲ್ಲೇಖಿಸಿ ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿರುವಂತೆ, “ಹೌದು, ನಮಗೆ ಪಿಸಿಬಿಯಿಂದ ಆಹ್ವಾನ ಬಂದಿದೆ. ಆದರೆ ಈ ಸಮಯದಲ್ಲಿ, ಯಾರೂ ಭೇಟಿ ನೀಡುವ ಸಾಧ್ಯತೆಯಿಲ್ಲ. ಆಟಗಾರರಷ್ಟೇ ಅಲ್ಲ, ಅಧಿಕಾರಿಗಳಾದ ನಾವು ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತ ಸರ್ಕಾರದ ಅನುಮತಿಯನ್ನು ಹೊಂದಿರಬೇಕು. ಆದರೆ ಭಾರತ ಸರ್ಕಾರದಿಂದ ನಮಗೆ ಯಾವುದೇ ಅನುಮತಿ ಸಿಕ್ಕಿಲ್ಲ” ಎಂದು ವರದಿ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:08 am, Sat, 26 August 23