AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ್ ಸಿಂಗ್ ತಾಯಿ ಬಳಿ 40 ಲಕ್ಷ ರೂ. ಸುಲಿಗೆಗೆ ಯತ್ನಿಸಿದ ಮಹಿಳೆಯ ಬಂಧನ..!

Yuvraj Singh: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಾಯಿ ಶಬನನ್ ಸಿಂಗ್ ಅವರನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ, 40 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಲು ಯತ್ನಿಸಿದ ಯುವತಿಯನ್ನು ದೆಹಲಿಯ ಗುರುಗ್ರಾಮ ಪೊಲೀಸರು ಮಂಗಳವಾರ ಬಂದಿಸಿದ್ದಾರೆ.

ಯುವರಾಜ್ ಸಿಂಗ್ ತಾಯಿ ಬಳಿ 40 ಲಕ್ಷ ರೂ. ಸುಲಿಗೆಗೆ ಯತ್ನಿಸಿದ ಮಹಿಳೆಯ ಬಂಧನ..!
ತಾಯಿಯೊಂದಿಗೆ ಯುವರಾಜ್ ಸಿಂಗ್Image Credit source: insidesport
ಪೃಥ್ವಿಶಂಕರ
|

Updated on: Jul 26, 2023 | 10:39 AM

Share

ಟೀಂ ಇಂಡಿಯಾದ (Team India) ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರ ತಾಯಿ ಶಬನನ್ ಸಿಂಗ್ ಅವರನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ, 40 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಲು ಯತ್ನಿಸಿದ ಯುವತಿಯನ್ನು ದೆಹಲಿಯ ಗುರುಗ್ರಾಮ ಪೊಲೀಸರು (Delhi Police) ಮಂಗಳವಾರ ಬಂದಿಸಿದ್ದಾರೆ. ವಾಸ್ತವವಾಗಿ ಬಂಧಿತ ಆರೋಪಿಯಾದ ಹೇಮಾ ಕೌಶಿಕ್ ಅಲಿಯಾಸ್ ಡಿಂಪಿ ಅವರನ್ನು ಈ ಹಿಂದೆ ಅಂದರೆ 2022 ರಲ್ಲಿ ಯುವರಾಜ್ ಸಿಂಗ್ ಅವರ ಕಿರಿಯ ಸಹೋದರ ಜೋರಾವರ್ ಸಿಂಗ್ ಅವರನ್ನು ನೋಡಿಕೊಳ್ಳಲು ಕೇರ್‌ಟೇಕರ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಆಕೆಯ ಕೆಲಸದಿಂದ ತೃಪ್ತಿಯಾಗದ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಾಯಿ ಶಬನಮ್ ಸಿಂಗ್ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಹೇಮಾ ಕೌಶಿಕ್ ಸುಲಿಗೆಗೆ ಮುಂದಾಗಿದ್ದರು ಎಂದು ವರದಿಯಾಗಿದೆ.

ವಾಸ್ತವವಾಗಿ ಯುವರಾಜ್ ಸಿಂಗ್ ಅವರ ಕಿರಿಯ ಸಹೋದರ ಜೋರಾವರ್ ಸಿಂಗ್​ ಕಳೆದ 10 ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ನೋಡಿಕೊಳ್ಳಲು ಹೇಮಾ ಕೌಶಿಕ್ ಅಲಿಯಾಸ್ ಡಿಂಪಿ ಅವರನ್ನು 2022ರಲ್ಲಿ ಕೇರ್‌ಟೇಕರ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ನೇಮಕಗೊಂಡ 20 ದಿನಗಳಲ್ಲಿ, ಹೇಮಾ ವೃತ್ತಿಪರಳಲ್ಲ ಎಂಬುದನ್ನು ಅರಿತ ಶಬನಮ್ ಸಿಂಗ್ ಆಕೆಯನ್ನು ಕೆಲಸದಿಂದ ಕಿತ್ತೊಗೆದಿದ್ದರು. ಇದರಿಂದ ಕೋಪಗೊಂಡಿದ್ದ ಹೇಮಾ, ಯುವರಾಜ್ ಕುಟುಂಬದವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ 40 ಲಕ್ಷ ಹಣ ನೀಡದಿದ್ದರೆ ನಿಮ್ಮ ಮೇಲೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಳು.

ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲ ಬಾರಿಗೆ ತನ್ನ ಮಗನ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್; ಹೆಸರೇನು ಗೊತ್ತಾ?

40 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಆರೋಪಿ

ಹೇಮಾ ಕೌಶಿಕ್​ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾಳೆ ಎಂಬ ಭಯದಿಂದ ಶಬನಮ್ ಸಿಂಗ್, ಆರೋಪಿ ಇಟ್ಟಿದ್ದ 40 ಲಕ್ಷ ರೂ. ಹಣದ ಮೊದಲ ಕಂತಾಗಿ 5 ಲಕ್ಷ ರೂಗಳನ್ನು ನೀಡಲು ಮುಂದಾಗಿದ್ದರು. ಹೀಗಾಗಿ ಮಂಗಳವಾರದಂದು 5 ಲಕ್ಷ ರೂಗಳನ್ನು ಪಡೆದುಕೊಳ್ಳಲು ಬಂದಾಗ ಹೇಮಾ ಕೌಶಿಕ್​ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ತಾಯಿ ಶಬನಮ್ ಸಿಂಗ್, ನನ್ನ ಮಗನನ್ನು ನೋಡಿಕೊಳ್ಳಲು ಹೇಮಾ ಕೌಶಿಕ್​ಳನ್ನು ನೇಮಕ ಮಾಡಿಕೊಂಡಿದ್ದೇವು. ಆದರೆ ನೇಮಕಗೊಂಡ 20 ದಿನಗಳಲ್ಲಿ ಆಕೆ ವೃತ್ತಿಪರಳಲ್ಲ ಎಂಬುದು ತಿಳಿಯಿತು. ಅಲ್ಲದೆ ಆಕೆ ಖಿನ್ನತೆಗೊಳಗಾಗಿದ್ದ ನನ್ನ ಮಗನನ್ನು ತನ್ನ ಬುಟ್ಟಿಗೆ ಬಿಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಹೀಗಾಗಿಯೇ ನಾನು ಹೇಮಾ ಕೌಶಿಕ್​ಳನ್ನು ಕೆಲಸದಿಂದ ವಜಾ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ವಾಟ್ಸಪ್​ನಲ್ಲಿ ನಿರಂತರ ಬೆದರಿಕೆ

ಡಿಎಲ್‌ಎಫ್ ಹಂತ 1 ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮೇ 2023 ರಲ್ಲಿ ಹೇಮಾ ಕೌಶಿಕ್ ವಾಟ್ಸಾಪ್ ಸಂದೇಶಗಳ ಮೂಲಕ ಶಬನಮ್‌ಗೆ ನಿರಂತರವಾಗಿ ಕರೆ ಮಾಡುತ್ತಿದ್ದಳು. ತನಗೆ ಹಣ ಸಿಗದಿದ್ದರೆ ಇಡೀ ಕುಟುಂಬವನ್ನೇ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಯುವರಾಜ್ ತಾಯಿಗೆ ಹೇಮಾ ಬೆದರಿಕೆ ಹಾಕಿದ್ದಳು. ಬಳಿಕ ಜುಲೈ 19 ರಂದು ಶಬನಮ್ ಸಿಂಗ್ ಮೇಸೆಜ್ ಮಾಡಿದ್ದ ಹೇಮಾ ಕೌಶಿಕ್, ಹಣ ಕೊಡದಿದ್ದರೆ ಜುಲೈ 23ರಂದು ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು. ಇದರಿಂದ ಭಯಭೀತರಾದ ಶಬನಮ್, ಹೇಮಾಳ ಬಳಿ ಹಣ ಹೊಂದಿಸಲು ಸಮಯ ಕೇಳಿದರು.

ಬಳಿಕ ಶಬನಮ್ ಈ ಬಗ್ಗೆ ಡಿಎಲ್‌ಎಫ್ ಹಂತ 1ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಹೇಮಾಗೆ ಮುಂಗಡವಾಗಿ 5 ಲಕ್ಷ ನೀಡುವ ಪ್ಲಾನೊಂದನ್ನು ರಚಿಸಿದ್ದರು. ಹೀಗಾಗಿ ಪೊಲೀಸರ ಯೋಜನೆಯಂತೆ ಮಂಗಳವಾರ ಮುಂಗಡ ಹಣ ತೆಗೆದುಕೊಳ್ಳಲು ಬಂದ ಹೇಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಶಬನಮ್ ಸಿಂಗ್ ಅವರ ದೂರಿನ ಆಧಾರದ ಮೇಲೆ ಹೇಮಾ ವಿರುದ್ಧ ಐಪಿಸಿ 384 ರ ಅಡಿಯಲ್ಲಿ ಸುಲಿಗೆ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ