Oscar Piastri: ಆಸ್ಕರ್ ಪಿಯಾಸ್ಟ್ರಿಗೆ ಚೊಚ್ಚಲ F1 ಕಿರೀಟ

|

Updated on: Jul 23, 2024 | 7:54 AM

Formula1 Grand Prix: ಫಾರ್ಮುಲಾ1 ಗ್ರ್ಯಾಂಡ್​ ಪ್ರಿಕ್ಸ್​ ರೇಸ್​ನಲ್ಲಿ ಅತ್ಯಧಿಕ ಬಾರಿ ಅಗ್ರಸ್ಥಾನ ಅಲಂಕರಿಸಿದ ವಿಶ್ವ ದಾಖಲೆ ಇಂಗ್ಲೆಂಡ್​ನ ಲೂಯಿಸ್ ಹ್ಯಾಮಿಲ್ಟನ್ ಹೆಸರಿನಲ್ಲಿದೆ. 2007 ರಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹ್ಯಾಮಿಲ್ಟನ್ ಈವರೆಗೆ 104 ಬಾರಿ ಜಯ ಸಾಧಿಸಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಜರ್ಮನಿಯ ಲೆಜೆಂಡ್ ಚಾಲಕ ಮೈಕೆಲ್ ಶುಮಾಕರ್. 1992 ರಲ್ಲಿ ಮೊದಲ ಗ್ರ್ಯಾಂಡ್ ಪಿಕ್ಸ್ ಗೆದ್ದಿದ್ದ ಶುಮಾಕರ್ ಒಟ್ಟು 91 ಬಾರಿ ಅಗ್ರಸ್ಥಾನ ಪಡೆದಿದ್ದಾರೆ.

ಹಂಗೇರಿಯ ಬುಡಾಪೆಸ್ಟ್​ನಲ್ಲಿ ನಡೆದ ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್​ನಲ್ಲಿ ಮೆಕ್​ಲಾರೆನ್ ಚಾಲಕ ಆಸ್ಕರ್ ಪಿಯಾಸ್ಟ್ರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 70 ಲ್ಯಾಪ್​ನ ಈ ಚಾಂಪಿಯನ್​ಶಿಪ್​ನಲ್ಲಿ ಆಸ್ಕರ್​ ​2ನೇ ಸ್ಥಾನದೊಂದಿಗೆ ರೇಸ್​ ಆರಂಭಿಸಿದ್ದರು. ಅಲ್ಲದೆ ಮೊದಲ ಸ್ಥಾನದಲ್ಲಿದ್ದ ತಮ್ಮದೇ ತಂಡದ ಲ್ಯಾಂಡೋ ನೊರಿಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನಲ್ಲೇ ಮುನ್ನಡೆ ಪಡೆದ ಆಸ್ಕರ್ ಪಿಯಾಸ್ಟ್ರಿ ಈ ಅಂತರವನ್ನು ಕೊನೆವರೆಗೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ 1:38:01.989 ಗಂಟೆಯಲ್ಲಿ ರೇಸ್ ಮುಗಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿದರು. ವಿಶೇಷ ಎಂದರೆ ಇದು ಆಸ್ಕರ್ ಪ್ರಿಯಾಸ್ಟ್ರಿಗೆ ಚೊಚ್ಚಲ ಗ್ರ್ಯಾಂಡ್​ ಪ್ರಿಕ್ಸ್ ಪಟ್ಟ.

ಇದಕ್ಕೂ ಮುನ್ನ ನಡೆದ ಬ್ರಿಟಿಷ್ ಗ್ರ್ಯಾಂಡ್ ಪಿಕ್ಸ್​ನಲ್ಲಿ ಆಸ್ಕರ್ ಪ್ರಿಯಾಸ್ಟ್ರಿ 4ನೇ ಸ್ಥಾನ ಅಲಂಕರಿಸಿದ್ದರು. ಆದರೆ ಈ ಬಾರಿ ಮರ್ಸಿಡೀಸ್​​ ಚಾಲಕ ಲೂಯಿಸ್ ಹ್ಯಾಮಿಲ್ಟನ್, ರೆಡ್ ಬುಲ್ ಡ್ರೈವರ್ ಮ್ಯಾಕ್ಸ್ ವರ್ಸ್ಟಪ್ಪೆನ್ ಅವರನ್ನು ಹಿಂದಿಕ್ಕಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿರುವುದು ವಿಶೇಷ. ಅದರಲ್ಲೂ ಬೆಲ್ಜಿಯಂ ಗ್ರ್ಯಾಂಡ್ ಪಿಕ್ಸ್​ನಿಂದ ಸತತವಾಗಿ ಅಗ್ರಸ್ಥಾನದಲ್ಲೇ ಕಾಣಿಸಿಕೊಳ್ಳುತ್ತಿದ್ದ ರೆಡ್​ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್ ಈ ಬಾರಿ 5ನೇ ಸ್ಥಾನಕ್ಕೆ ಕುಸಿದರು. ಮತ್ತೊಂದೆಡೆ ಲೂಯಿಸ್ ಹ್ಯಾಮಿಲ್ಟನ್ 3ನೇ ಸ್ಥಾನದೊಂದಿಗೆ ರೇಸ್​ ಅಂತ್ಯಗೊಳಿಸಿದ್ದರು.

ಅಂದಹಾಗೆ ಹಂಗೇರಿ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ ಮೆಕ್​ಲಾರೆನ್​ನ ಚಾಲಕರಿಬ್ಬರು ಅಗ್ರಸ್ಥಾನಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ 23 ವರ್ಷದ ಆಸ್ಕರ್ ಪಿಯಾಸ್ಟ್ರಿ ಅಗ್ರಸ್ಥಾನ ಪಡೆದರೆ, ಮೆಕ್​ಲಾರೆನ್​ನ ಮತ್ತೊರ್ವ ಚಾಲಕ ಲ್ಯಾಂಡೋ ನೊರಿಸ್ ದ್ವಿತೀಯ ಸ್ಥಾನ ಪಡೆದು ಸಂಭ್ರಮಿಸಿದರು. ಹಾಗೆಯೇ ದಾಖಲೆ ಸರದಾರ ಲೂಯಿಸ್ ಹ್ಯಾಮಿಲ್ಟನ್ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

 

Published on: Jul 23, 2024 07:54 AM