ಅಜರ್ಬೈಜಾನ್ನ ಬಾಕುನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ 2023 ರಲ್ಲಿ (ISSF World Cup) ಭಾರತ ಮೊದಲ ಚಿನ್ನ ಪದಕ ಗೆದ್ದಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್ನಲ್ಲಿ ದಿವ್ಯಾ ಟಿಎಸ್ (Divya TS) ಹಾಗೂ ಸರಬ್ಜೋತ್ ಸಿಂಗ್ (Sarabjot Singh) ಜೋಡಿ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ. ಇವರು ಸರ್ಬಿಯಾದ ದಮಿರ್, ಜೊರಾನಾ ವಿರುದ್ಧ 16-14 ಅಂಕಗಳ ಅಂತರದ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟರು. ದಿವ್ಯಾ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ನಿವಾಸಿಯಾಗಿದ್ದಾರೆ. ಇವರಿಗೆ ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮೊದಲ ಪದಕ.
ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ಮತ್ತು ಸರ್ಬಿಯದ ಜೋಡಿ 14-14 ರಲ್ಲಿ ಸಮಬಲ ಸಾಧಿಸಿತ್ತು. ತಮ್ಮ ಕೊನೆಯ ಪ್ರಯತ್ನದಲ್ಲಿ ಸರಬ್ಜೋತ್ 10.6 ಮತ್ತು ದಿವ್ಯಾ 9.9 ಪಾಯಿಂಟ್ಸ್ ಗಳಿಸಿದರು. ಸರ್ಬಿಯದ ದಾಮಿರ್ 10.3 ಪಾಯಿಂಟ್ಸ್ ಗಳಿಸಿದರೂ, ಜೊರಾನಾ ನಿಖರ ಗುರಿ ಹಿಡಿಯುವಲ್ಲಿ ವಿಫಲರಾಗಿ 8.6 ಪಾಯಿಂಟ್ಸ್ ಮಾತ್ರ ಗಳಿಸಿದರು. ಇದರಿಂದ ಭಾರತದ ಜೋಡಿಗೆ ಚಿನ್ನ ಒಲಿಯಿತು. ಈ ಹಿಂದೆ ಮಾರ್ಚ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೆದ್ದಿದ್ದ ಸರಬ್ಜೋತ್ ಸಿಂಗ್ಗೆ ಇದು ಎರಡನೇ ISSF ವಿಶ್ವಕಪ್ ಚಿನ್ನವಾಗಿದೆ.
IPL 2023: ಕೊಂಚ ತಾಳ್ಮೆ ಇರಲಿ..ನಮ್ಮವರೂ ಕೂಡ ಅಬ್ಬರಿಸುತ್ತಾರೆ: RCB ಕೋಚ್ ಸಂಜಯ್ ಬಂಗಾರ್
ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ದಿವ್ಯಾ ಮತ್ತು ಸರಬ್ಜೋತ್ ಅವರು 581 ಪಾಯಿಂಟ್ಸ್‌ಗಳನ್ನು ಕಲೆಹಾಕುವ ಮೂಲಕ ಕಣದಲ್ಲಿದ್ದ 55 ತಂಡಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇಶಾ ಸಿಂಗ್ ಮತ್ತು ವರುಣ್ ತೋಮರ್ ಪದಕ ಸುತ್ತು ತಲುಪಲು ವಿಫಲರಾದರು. ಅವರು ಅರ್ಹತಾ ಹಂತದಲ್ಲಿ 578 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನ ಪಡೆದರು. ಇನ್ನು ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್‍ಎಸ್‍ಎಫ್ ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಟರ್ಕಿಯ ಸಿಮಲ್ ಯಿಲ್ಮಾಜ್ ಮತ್ತು ಇಸ್ಮಾಯಿಲ್ ಕೆಲೆಸ್ ಅವರು ಇಟಲಿಯ ಸಾರಾ ಕೊಸ್ಟಾಂಟಿನೊ ಮತ್ತು ಪಾವೊಲೊ ಮೊನ್ನಾ ಅವರನ್ನು 17-9 ರಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಭಾರತದ ವರುಣ್ ತೋಮರ್ ಮತ್ತು ಇಶಾ ಸಿಂಗ್ 578 ಸ್ಕೋರ್ ಗಳಿಸಿ 6ನೇ ಸ್ಥಾನ ಗಳಿಸಿದರು ಮತ್ತು ಪದಕ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಒಟ್ಟು 55 ಜೋಡಿಗಳು ಸ್ಪರ್ಧಿಸಿದ್ದವು. ಸದ್ಯ ಭಾರತ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದುವರೆಗೆ ಒಂದು ಚಿನ್ನ ಮತ್ತು ಬೆಳ್ಳಿಯೊಂದಿಗೆ ಚೀನಾ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ