Updated on: May 11, 2023 | 10:28 PM
IPL 2023: ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದರು.
ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. 2018 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಇದಾದ ಬಳಿಕ 2022 ರಲ್ಲಿ ಕೆಕೆಆರ್ ಪರ ಕಣಕ್ಕಿಳಿದಿದ್ದ ಪ್ಯಾಟ್ ಕಮಿನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ರಾಹುಲ್ ಅವರ ದಾಖಲೆ ಸರಿಗಟ್ಟಿದ್ದರು.
ಇದೀಗ ಕೇವಲ 13 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ 50 ರನ್ ಬಾರಿಸಿ ಕೆಎಲ್ ರಾಹುಲ್ ಹಾಗೂ ಪ್ಯಾಟ್ ಕಮಿನ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಅಳಿಸಿ ಹಾಕಿದ್ದಾರೆ.
ಇನ್ನು ನಿತೀಶ್ ರಾಣಾ ಎಸೆದ ಈ ಪಂದ್ಯದ ಮೊದಲ ಓವರ್ನಲ್ಲಿ 20 ವರ್ಷದ ಯಶಸ್ವಿ ಜೈಸ್ವಾಲ್ 6, 6, 4, 4, 2, 4 ಫೋರ್ ಬಾರಿಸಿದ್ದರು. ಈ ಮೂಲಕ ಮೊದಲ ಓವರ್ನಲ್ಲೇ ಅತ್ಯಧಿಕ ರನ್ ಕಲೆಹಾಕಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ಹಾಗೆಯೇ ಮೊದಲ ಓವರ್ನಲ್ಲಿ ಅತೀ ಹೆಚ್ಚು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಮೊದಲ ಓವರ್ನಲ್ಲಿ 27 ರನ್ ಬಾರಿಸಿತ್ತು. ಆದರೆ ಆ ಓವರ್ನಲ್ಲಿ 7 ಎಕ್ಸ್ಟ್ರಾ ರನ್ಗಳಿದ್ದವು.
ಆದರೀಗ ಯಶಸ್ವಿ ಜೈಸ್ವಾಲ್ ಮೊದಲ ಓವರ್ನಲ್ಲಿ 2 ಭರ್ಜರಿ ಸಿಕ್ಸ್, ಮೂರು ಫೋರ್ ಹಾಗೂ 2 ರನ್ಗಳೊಂದಿಗೆ 26 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಪ್ರಥಮ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.