Updated on:May 11, 2023 | 9:23 PM
IPL 2023: ಐಪಿಎಲ್ನ 56ನೇ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ವಿರುದ್ಧ ಚಹಾಲ್ 11ನೇ ಓವರ್ನಲ್ಲಿ ದಾಳಿಗಿಳಿದಿದ್ದರು.
ತಮ್ಮ ಮೊದಲ ಓವರ್ನಲ್ಲೇ ಕೆಕೆಆರ್ ರಾಣಾ ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು.
ಸಿಎಸ್ಕೆ, ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಒಟ್ಟು 158 ಇನಿಂಗ್ಸ್ಗಳಲ್ಲಿ 183 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಯುಜ್ವೇಂದ್ರ ಚಹಾಲ್ ಅಳಿಸಿ ಹಾಕಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 142 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಚಹಾಲ್ 187 ವಿಕೆಟ್ ಕಬಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಕೂಡ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು.
ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದ ಚಹಾಲ್ ಅವರನ್ನು 2021 ರ ಬಳಿಕ ತಂಡದಿಂದ ಕೈ ಬಿಡುವ ಮೂಲಕ ಆರ್ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿತ್ತು.
ಇದೀಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಚಹಾಲ್ ಕಳೆದ ಸೀಸನ್ನಲ್ಲಿ 27 ವಿಕೆಟ್ ಕಬಳಿಸಿದ್ದರು.
ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ಒಟ್ಟು 21 ವಿಕೆಟ್ ಉರುಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Published On - 9:18 pm, Thu, 11 May 23