‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ (Khelo India University Games) ಇಂದು (ಮೇ.3) ಪುರುಷ ಮತ್ತು ಮಹಿಳಾ ಕಬಡ್ಡಿ ಫೈನಲ್‌ಗಳೊಂದಿಗೆ ಮುಕ್ತಾಯಗೊಂಡಿದೆ. ಈ ಮೂಲಕ 10 ದಿನಗಳ ಕಾಲ ನಡೆದ ವರ್ಣರಂಜಿತ ಕ್ರೀಡಾಕೂಟಕ್ಕೆ ತೆರಬಿದ್ದಿದೆ. ಆತಿಥೇಯ ಜೈನ್ ವಿಶ್ವವಿದ್ಯಾನಿಲಯವು ಅತಿ ಹೆಚ್ಚು ಪದಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದೆ. ಕ್ರೀಡಾಕೂಟದ ಕೊನೆಯ ದಿನ ಜೈನ್ ವಿವಿಯು ಟ್ರ್ಯಾಕ್‌ನಲ್ಲಿ ಒಂದು ಚಿನ್ನ ಮತ್ತು ಕರಾಟೆಯಲ್ಲಿ ಎರಡು ಚಿನ್ನಗಳೊಂದಿಗೆ ಒಟ್ಟು 20 ಚಿನ್ನಗಳನ್ನು ಪಡೆಯಿತು. ‘ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ’ 17 ಚಿನ್ನ, 15 ಬೆಳ್ಳಿ ಮತ್ತು 19 ಕಂಚುಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಅದಾಗ್ಯೂ ಅತಿ ಹೆಚ್ಚು ಪದಕ ಪಡೆದ ಪಟ್ಟಿಯಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಮೊದಲ ಸ್ಥಾನ ಪಡೆಯಿತು. ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ವಿಶ್ವವಿದ್ಯಾಲಯವು 15 ಚಿನ್ನ, 9 ಬೆಳ್ಳಿ, 24 ಕಂಚುಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.
ಈ ಬಾರಿಯ ಕ್ರೀಡಾಕೂಟವು ಹಲವು ಕಾರಣಗಳಿಗೆ ವಿಶೇಷವಾಗಿದೆ. ಕಳೆದ ಬಾರಿಯ ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್’ನ ಒಟ್ಟು 97 ದಾಖಲೆಗಳು ಮುರಿದಿದ್ದು, ಹೊಸ ದಾಖಲೆಗಳು ನಿರ್ಮಾಣಗೊಂಡಿವೆ. ಇದರಲ್ಲಿ 42 ದಾಖಲೆಗಳು ವೇಟ್‌ಲಿಫ್ಟಿಂಗ್ ವಿಭಾಗಕ್ಕೆ ಸೇರಿದ್ದರೆ, 28 ದಾಖಲೆಗಳು ಪೂಲ್ನಲ್ಲಿ ಹಾಗೂ 23 ದಾಖಲೆಗಳು ಆಥ್ಲೆಟಿಕ್ಸ್ನಲ್ಲಿ ದಾಖಲಾಗಿವೆ.
ಎರಡು ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡಿದ್ದು, ಶಿವ ಶ್ರೀಧರ್ ಪುರುಷರ 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಹಿಳೆಯರ ವೇಟ್‌ಲಿಫ್ಟಿಂಗ್ +87 ಕೆಜಿ ವಿಭಾಗದಲ್ಲಿ ಎಂಟಿ ಆನ್ ಮರಿಯಾ ಕ್ಲೀನ್ ಹೊಸ ದಾಖಲೆ ಸ್ಥಾಪಿಸಿದ್ದಾರೆ.
ಈ ಬಾರಿಯ ಖೇಲೋ ಇಂಡಿಯಾ ವಿವಿ ಕ್ರೀಡಾಕೂಟದಲ್ಲಿ ಶ್ರೀಧರ್ ಅವರು 7 ಚಿನ್ನ ಮತ್ತು ಎರಡು ಬೆಳ್ಳಿ ಗೆದ್ದು ಹೆಚ್ಚಿನ ಪದಕ ಪಡೆದ ಸ್ಪರ್ಧಿ ಎನಿಸಿದರು. ಈಜುಗಾರ್ತಿ ಶೃಂಗಿ ಬಾಂದೇಕರ್ ಅವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ಕ್ರೀಡಾಕೂಟದ ಅತ್ಯಂತ ಯಶಸ್ವಿ ಮಹಿಳಾ ಕ್ರೀಡಾಪಟು ಎನಿಸಿದರು. ಪ್ರಿಯಾ ಮೋಹನ್ ಅವರ 200 ಮೀ, 400 ಮೀ ಡಬಲ್ಸ್ ಟ್ರ್ಯಾಕ್‌ನಲ್ಲಿ ಅತ್ಯಂತ ಪ್ರಬಲ ಅಥ್ಲೀಟ್ ಆಗಿ ಗುರುತಿಸಿಕೊಂಡರು.
ಅಂತಿಮ ಫಲಿತಾಂಶಗಳು:
ಕಬಡ್ಡಿ:
ಪುರುಷರು: ಫೈನಲ್: ಯೂನಿವರ್ಸಿಟಿ ಆಫ್ ಕೋಟಾವು 52-37 ಅಂಕಗಳಿಂದ ಸಿಎಚ್ ಬನ್ಸಿ ಲಾಲ್ ವಿಶ್ವವಿದ್ಯಾಲಯವನ್ನು ಮಣಿಸಿತು. ಕಂಚಿನ ಪದಕವನ್ನು ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಗುರುನಾನಕ್ ದೇವ್ ವಿಶ್ವವಿದ್ಯಾಲಯಗಳು ಪಡೆದವು.
ಮಹಿಳೆಯರು: ಫೈನಲ್: ಕುರುಕ್ಷೇತ್ರ ವಿಶ್ವವಿದ್ಯಾಲಯವು 46-19 ಅಂಕಗಳಿಂದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯವನ್ನು ಮಣಿಸಿತು. ಕಂಚಿನ ಪದಕಗಳನ್ನು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯಗಳು ಪಡೆದುಕೊಂಡವು.
ಫುಟ್ಬಾಲ್:
ಪುರುಷರು: ಫೈನಲ್ನಲ್ಲಿ MG ವಿಶ್ವವಿದ್ಯಾಲಯವು 2-0 ಅಂತರದಲ್ಲಿ ಯುನಿವರ್ಸಿಟಿ ಆಫ್ ಕೇರಳವನ್ನು ಮಣಿಸಿತು. ಕಂಚಿನ ಪದಕವನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯಗಳು ಪಡೆದವು.
ಕ್ರೀಡಾ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Khelo India University Games: ಬೆಂಗಳೂರಿನಲ್ಲಿ 10 ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ತೆರೆ