Khelo India University Games: ಬೆಂಗಳೂರಿನಲ್ಲಿ 10 ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಅದ್ದೂರಿ ತೆರೆ
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಧಾನಿ ಮೋದಿಯವರ ಕಲ್ಪನೆ. ಯೂತ್ ಇಂಡಿಯಾ, ಯೂನಿವರ್ಸಿಟಿ ಗೇಮ್ಸ್ ಮೋದಿಯವರ ಕನಸಿನಿಂದ ಕೂಡಿದೆ. ಕೋವಿಡ್‌ನಿಂದ ಕಳೆದ ಎರಡು ವರ್ಷ ಖೇಲೋ ಇಂಡಿಯಾ ನಡೆಸಲು ಆಗಿಲ್ಲ.
ಬೆಂಗಳೂರು: ಮೋದಿ ಸರ್ಕಾರ ಬಂದ ಬಳಿಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯಾಗುತ್ತಿದೆ. ಕ್ರೀಡಾ ಕ್ಷೇತ್ರವೂ ಕೂಡ ಅಭಿವೃದ್ಧಿಯತ್ತ ಸಾಗುತ್ತಿದೆ. ನಮ್ಮ ಸರ್ಕಾರ ಕ್ರೀಡಾ ಕ್ಷೇತವನ್ನ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ (Khelo India University Games) ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬೆಂಗಳೂರಿನಲ್ಲಿ 10 ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿದೆ. ಒಲಿಪಿಂಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆಯಿದೆ. ಅಲ್ಪ ಕಾಲಾವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ಮುಂದಿದೆ. ಬುಡಕಟ್ಟು, ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕೋಚ್ಗಳಿಂದ ತರಬೇತಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಒಲಿಪಿಂಕ್ಸ್ನಲ್ಲಿ ಹೆಚ್ಚು ಪದಕ ಗೆಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರೀಡಾಪಟುಗಳಿಗೆ ತರಬೇತಿ ನೀಡಲಿದೆ. ಎಲ್ಲ ಸರ್ಕಾರಗಳೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದಕೇಂದ್ರ ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಧಾನಿ ಮೋದಿಯವರ ಕಲ್ಪನೆ. ಯೂತ್ ಇಂಡಿಯಾ, ಯೂನಿವರ್ಸಿಟಿ ಗೇಮ್ಸ್ ಮೋದಿಯವರ ಕನಸಿನಿಂದ ಕೂಡಿದೆ. ಕೋವಿಡ್‌ನಿಂದ ಕಳೆದ ಎರಡು ವರ್ಷ ಖೇಲೋ ಇಂಡಿಯಾ ನಡೆಸಲು ಆಗಿಲ್ಲ. ಈ ವರ್ಷ ನಡೆದ ಕ್ರೀಡಾಕೂಟ ಸಾಕಷ್ಟು ಯಶಸ್ವಿಯಾಗಿದೆ. ಅದರಲ್ಲೂ ಕೂಟ ಎರಡು ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದೆ. ಸ್ವಿಮ್ಮಿಂಗ್ ಮತ್ತು ವೇಯ್ಟ್ ಲಿಫ್ಟಿಂಗ್‌ನಲ್ಲಿ ದಾಖಲೆ ಬ್ರೇಕ್ ಮಾಡಲಾಗಿದೆ. ಈ ಸಲದ ಕ್ರೀಡಾಕೂಟದಲ್ಲಿ ಯೋಗ ಮತ್ತು ಮಲ್ಲಗಂಬ ಸೇರಿಸಲಾಗಿತ್ತು. ಮೋದಿಯವರು ಯೋಗ ದಿನಾಚರಣೆಗೆ ಕರೆ ಕೊಟ್ಟಾಗ ಪ್ರಪಂಚದ ಎಲ್ಲಾ ದೇಶಗಳು ಅವರ ಜೊತೆ ನಿಂತವು. ಯೋಗದ ಶಕ್ತಿ ಏನು ಅಂತ ಇಂದು ನೋಡಿದ್ದೇವೆ ಎಂದರು.
ಶಿವ ಶ್ರೀಧರ್ ಎಂಬ ವಿದ್ಯಾರ್ಥಿ 7 ಗೋಲ್ಡ್ ಮೆಡಲ್ ಗೆದ್ದಿದ್ದಾರೆ. ಪ್ರೋ ಕಬ್ಬಡಿ ಲೀಗ್‌ನಲ್ಲಿ ಯೂನಿವರ್ಸಿಟಿ ಗೇಮ್ಸ್ ಆಡಿದ ವಿದ್ಯಾರ್ಥಿಗಳ ಭಾಗಿಯಾಗ್ತಾರೆ. ಕರ್ನಾಟಕ ಸರ್ಕಾರ ಅದ್ಬುತವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದು, ಬೆಂಗಳೂರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೈನ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ಕ್ರೀಡಾಕೂಟ ನಡೆದಿದೆ. ಕ್ರೀಡಾಕೂಟದಲ್ಲಿ ಜೈನ್ ಯೂನಿವರ್ಸಿಟಿ 20 ಗೋಲ್ಡ್ ಮೆಡೆಲ್ ಗೆದ್ದಿದೆ. ಇಂದು ಯೂನಿವರ್ಸಿಟಿ ಗೇಮ್ಸ್ ವಿಶ್ವಮಟ್ಟದ ಕ್ರೀಡಾಕೂಟವಾಗಿದೆ. ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಅನೇಕರು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಈ ಸಲ ಖೇಲೋ ಇಂಡಿಯಾ ವಿದ್ಯಾರ್ಥಿಗಳ ಭಾಗಿಯಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಕ್ರೀಡೆ ಮನುಷನ ಸಹಜವಾದ ಕ್ರಿಯಾ ಶೀಲ ಚಟುವಟಿಕೆ. ಕ್ರೀಡೆಯಿಂದ ಶಿಸ್ತು ಬರಲಿದೆ, ಸ್ಪೋರ್ಟ್ಸ್ ಮನ್ ಸ್ಪಿರಿಟ್ ಬರಲಿದೆ. ಗೆಲ್ಲಲು ಆಟ ಆಡಬೇಕು, ಸೋಲಲು ಅಲ್ಲ. ಆ ಧ್ಯೇಯ ಇಟ್ಟುಕೊಂಡು ಆಡಬೇಕು. ಹಾಗಂತ ಸೋಲು ಗೆಲುವು ಎರಡು ಕೂಡ ಇರಲಿದೆ. ಪ್ರಧಾನ ಮಂತ್ರಿಗಳು ಖೇಲೋ ಇಂಡಿಯಾ ಅಂತ ಹೇಳಿದ್ರು, ನಂತರ ಫಿಟ್ ಇಂಡಿಯಾ ಅಂದ್ರು. ಒಲಿಂಪಿಕ್ ಬಂದಾಗ ಖೇಲೋ ಇಂಡಿಯಾ ಅಂತ ಕರೆದ್ರು. ಅಮಿತ್ ಶಾ ಅವರು ಬರೀ ಕ್ರಿಕೆಟ್ ಸ್ಟೇಡಿಯಂ ಮಾತ್ರವಲ್ಲ, ಸ್ಪೋರ್ಟ್ಸ್ ಸಿಟಿಯನ್ನೇ ಮಾಡಿದ್ರು. ಎರಡು ರಾಷ್ಟ್ರೀಯ ಸಾಧನೆ ಆಗಿವೆ. ಇಲ್ಲಿ ಭಾಗಿಯಾದವರಿಗೆ ಹೆಚ್ಚು ಒತ್ತು ನೀಡಿದ್ದೇವೆ. ಕನಿಷ್ಠ ಹತ್ತು ಜನ ಒಲಿಂಪಿಕ್ ನಲ್ಲಿ ಭಾಗಿಯಾಗಬೇಕು ಅಂತ ಟ್ರೈನಿಂಗ್ ನೀಡ್ತಿದ್ದೇವೆ. ಕರ್ನಾಟಕದ ಕಬಡ್ಡಿ ಮತ್ತು ಬ್ಯಾಸ್ಕೆಟ್ ಬಾಲ್ ಪ್ರೋತ್ಸಾಹಿಸುವ ಕೆಲಸ ಮಾಡ್ತಿದ್ದೇವೆ. ಹತ್ತು ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದೇವೆ. ಭಾಗವಹಿಸಿದ್ದವರಿಗೆ ಅಭಿನಂದನೆ ಸಲ್ಲಿಸ್ತೇನೆ ಗೆದ್ದವರಿಗೆ ಅಭಿನಂದನೆ ಸಲ್ಲಿಸ್ತೇನೆ. ಸೋತವರಿಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್ ಅಂತಾ ಹೇಳುತ್ತೇನೆ. ಇಲ್ಲಿ ಸಾಧನೆ ಮಾಡಿದ್ರೆ ನೀವೇ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಇಲಾಖೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕ್ರೀಡಾ ಸಚಿವ ನಾರಾಯಣ ಗೌಡ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಮತ್ತು ನಟ ಸುದೀಪ್ ಭಾಗಿಯಾಗಿದ್ದರು.
ಕ್ರೀಡಾ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 pm, Tue, 3 May 22