Pele
ಫುಟ್ಬಾಲ್ (Football) ಲೋಕದ ದೇವರು ಪೀಲೆ(Pele) ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ (82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಅವರ ಪುತ್ರಿ ಕೆಲಿ ನಾಸಿಮೆಂಟೊ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕರುಳಿನ ಕ್ಯಾನ್ಸರ್ (Cancer) ಬಂದಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಮೂತ್ರಪಿಂಡದ ಸಮಸ್ಯೆ ತಲೆದೋರಿತ್ತು. ಜತೆಗೆ ಕ್ಯಾನ್ಸರ್ ಗಂಟಲಿಗೂ ಹರಡಿತ್ತು. ಕಾಲ್ಚೆಂಡು ಜಗತ್ತಿನಲ್ಲಿ ವಿಶೇಷ ಗೌರವ ಸಂಪಾದಿಸಿದ ಪೀಲೆ ಹಲವು ಸಾಧನೆಗಳನ್ನು ಕ್ರೀಡಾ ಜಗತ್ತಿಗೆ ಬಿಟ್ಟುಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಪೀಲೆ ಅವರ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.
- ಅಂತರರಾಷ್ಟ್ರೀಯ ಮಟ್ಟದಲ್ಲಿ, 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಪೀಲೆ ತನ್ನ ದೇಶದ ಸಾರ್ವಕಾಲಿಕ ಟಾಪ್ ಸ್ಕೋರರ್ ಆಗಿ ಉಳಿದಿದ್ದಾರೆ.
- ಪೀಲೆ 1958 ರ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯ ಉದ್ದಕ್ಕೂ ಆರು ಗೋಲುಗಳನ್ನು ಗಳಿಸಿದರು. ಅವರು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು.
- FIFA ವಿಶ್ವಕಪ್‌ನಲ್ಲಿ, ಪೀಲೆ ನಾಲ್ಕು ಆವೃತ್ತಿಗಳಲ್ಲಿ 14 ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದ ಸಾಧನೆ ಕೂಡ ಮಾಡಿದ್ದಾರೆ.
- 16 ವರ್ಷವಿದ್ದಾಗ 1957ರಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅರ್ಜೆಂಟೀನಾ ವಿರುದ್ದ ಮೊದಲ ಪಂದ್ಯವಾಡಿದ್ದರು. ಅದರಲ್ಲೇ ಗೋಲ್ ಬಾರಿಸಿ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಸಣ್ಣ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಗೋಲ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು.
- 1958, 1966 ಹಾಗೂ 1970ರ ವಿಶ್ವ ಕಪ್ ಗೆದ್ದ ಬ್ರೆಜಿಲ್ ತಂಡದ ಸದಸ್ಯರಾಗಿದ್ದ ಅವರು ಮೂರು ವಿಶ್ವ ಕಿರೀಟ ಧರಿಸಿದ ಏಕೈಕ ಆಟಗಾರ.
- ಫುಟ್ಬಾಲ್ ವಿಶ್ವ ಕಪ್ನಲ್ಲಿ 10 ಬಾರಿ ಅಸಿಸ್ಟ್ (ಬೇರೆ ಆಟಗಾರರಿಗೆ ಗೋಲ್ ಬಾರಿಸಲು ನೆರವಾಗುವುದು) ಮಾಡಿದ ಕೀರ್ತಿ ಪೀಲೆ ಅವರದ್ದು. ಇಷ್ಟೊಂದು ಅಸಿಸ್ಟ್ ಮಾಡಿದ ಪೀಲೆ ದಾಖಲೆಯನ್ನು ಇನ್ನೂ ಯಾರೂ ಅಳಿಸಿಲ್ಲ.
- ಬ್ರೆಜಿಲ್ನ ಸ್ಯಾಂಟೋಸ್ ಕ್ಲಬ್ ಪರ ಆಡುತ್ತಿದ್ದ ಪೀಲೆ ಗರಿಷ್ಠ ಗೋಲ್ಗಳ ದಾಖಲೆ ಹೊಂದಿದ್ದಾರೆ. ಅವರು 659 ಪಂದ್ಯಗಳಲ್ಲಿ 643 ಗೋಲ್ಗಳನ್ನು ಬಾರಿಸಿದ್ದಾರೆ.
- ಬ್ರೆಜಿಲ್ನ ಈ ದಿಗ್ಗಜ ತಮ್ಮ ವೃತ್ತಿ ಫುಟ್ಬಾಲ್ನಲ್ಲಿ 92 ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ಗರಿಷ್ಠ ಸಾಧನೆಯಾಗಿದೆ.
- ಕ್ಯಾಲೆಂಡರ್ ವರ್ಷವೊಂದರಲ್ಲಿ 100ಕ್ಕೂ ಅಧಿಕ ಗೋಲ್ಗಳನ್ನು ಬಾರಿಸಿದ ಏಕೈಕ ಆಟಗಾರ ಪೀಲೆ ಎಂಬುದಾಗಿ ಫಿಫಾ ದಾಖಲೆಗಳು ಹೇಳುತ್ತವೆ. ಅವರು 1959ರಲ್ಲಿ 127 ಗೋಲ್ಗಳನ್ನು ಬಾರಿಸಿದ್ದರೆ, 1961ರಲ್ಲಿ 110 ಗೋಲ್ಗಳನ್ನು ಬಾರಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ