Hockey World Cup 2023: ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ ಪ್ರತಿಯೊಬ್ಬರಿಗೂ 25 ಲಕ್ಷ! ಹಾಕಿ ಇಂಡಿಯಾದ ಘೋಷಣೆ
Hockey World Cup 2023: ಹಾಕಿ ಇಂಡಿಯಾ, ಭಾರತ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ ತಂಡದ ಪ್ರತಿಯೊಬ್ಬ ಸದಸ್ಯನಿಗೆ 25 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದೆ.
ಮುಂದಿನ ತಿಂಗಳು ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ಗೆ (FIH Men’s Hockey World Cup) ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ನೇಮಕಗೊಂಡಿದ್ದಾರೆ. ಡಿಫೆಂಡರ್ ಅಮಿತ್ ರೋಹಿದಾಸ್ಗೆ (Amit Rohidas) ತಂಡದ ಉಪನಾಯಕತ್ವವಹಿಸಲಾಗಿದೆ. ಭಾರತ ತಂಡ ಜನವರಿ 13 ರಂದು ಸ್ಪೇನ್ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆದರೆ ಅದಕ್ಕೂ ಮುನ್ನ ಭಾರತೀಯ ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಪ್ರೇರೇಪಿಸಲು ಹಾಕಿ ಇಂಡಿಯಾ (Hockey India) ನಗದು ಬಹುಮಾನಗಳನ್ನು ಘೋಷಿಸಿದೆ.
ಪದಕ ವಿಜೇತ ಆಟಗಾರರಿಗೆ 25 ಲಕ್ಷ
ಹಾಕಿ ಇಂಡಿಯಾ, ಭಾರತ ಹಾಕಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ ತಂಡದ ಪ್ರತಿಯೊಬ್ಬ ಸದಸ್ಯನಿಗೆ 25 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದೆ. ಮತ್ತೊಂದೆಡೆ, ಬೆಳ್ಳಿ ಪದಕ ಗೆದ್ದರೆ ಪ್ರತಿ ಆಟಗಾರನಿಗೆ 15 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೆಯೇ ಕಂಚಿನ ಪದಕ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರರಿಗೆ 10 ಲಕ್ಷ ರೂಪಾಯಿ ಹಾಗೂ ಸಹಾಯಕ ಸಿಬ್ಬಂದಿಗೆ 2 ಲಕ್ಷ ರೂಪಾಯಿ ನೀಡಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.
To boost the morale of an already motivated Indian Men’s Hockey team, Hockey India has announced cash prizes for podium finishes in the FIH Odisha Men’s Hockey 2023 Bhubaneswar and Rourkela.#HockeyIndia #IndiaKaGame #HWC2023 @CMO_Odisha @sports_odisha @Media_SAI @IndiaSports pic.twitter.com/5JhADxrDTS
— Hockey India (@TheHockeyIndia) December 28, 2022
ಬಹುಮಾನ ಘೋಷಣೆಯ ಕುರಿತು ಮಾತನಾಡಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, “ಸೀನಿಯರ್ ಪುರುಷರ ವಿಶ್ವಕಪ್‌ನಲ್ಲಿ ಪದಕ ಗೆಲ್ಲುವುದು ಸುಲಭವಲ್ಲ. ಹೀಗಾಗಿ ನಾವು ಘೋಷಿಸಿರುವ ಬಹುಮಾನದ ಮೊತ್ತ ಭಾರತ ತಂಡದ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
Hockey World Cup 2023: ಹಾಕಿ ವಿಶ್ವಕಪ್ 2023: ಬಲಿಷ್ಠ ಭಾರತ ತಂಡ ಪ್ರಕಟ
ಕೊನೆಯ ಬಾರಿಗೆ 1975 ರಲ್ಲಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ಆ ನಂತರ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ. ಬಳಿಕ 1971 ರಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಹಾಕಿ ತಂಡ 1973 ರಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ವರ್ಷ ಭಾರತ ಹಾಕಿ ತಂಡ ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ಜೊತೆಗೆ ಪೂಲ್ ಡಿ ಯಲ್ಲಿ ಸ್ಥಾನ ಪಡೆದಿದೆ.
ಹರ್ಮನ್ಪ್ರೀತ್ಗೆ ತಂಡದ ನಾಯಕತ್ವ
ಹರ್ಮನ್‌ಪ್ರೀತ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ ಈ ಸರಣಿಯನ್ನು ಭಾರತ 1-4 ರಿಂದ ಸೋತಿತ್ತು. ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ನಾಯಕತ್ವವಹಿಸಿದ್ದ ಮನ್‌ಪ್ರೀತ್ ಸಿಂಗ್ ಆಟಗಾರನಾಗಿ ತಂಡದಲ್ಲಿ ಇರಲಿದ್ದಾರೆ.
ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ಜೊತೆಗೆ ಡಿ ಪೂಲ್‌ನಲ್ಲಿರುವ ಭಾರತ ಹಾಕಿ ತಂಡ 2023ರ ಜನವರಿ 13 ರಂದು ಸ್ಪೇನ್ ವಿರುದ್ಧ ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯ ಮತ್ತು ವೇಲ್ಸ್ ವಿರುದ್ಧ ಮೂರನೇ ಪಂದ್ಯವನ್ನಾಡಲಿದೆ. ಬಳಿಕ ನಾಕೌಟ್ ಹಂತವು ಜನವರಿ 22 ಮತ್ತು ಜನವರಿ 23 ರಂದು ಕ್ರಾಸ್ ಓವರ್ ಪಂದ್ಯಗಳೊಂದಿಗೆ ಪ್ರಾರಂಭವಾಗುತ್ತದೆ.
ಇದಾದ ನಂತರ ಜನವರಿ 25 ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದರೆ, ಜನವರಿ 27 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಬಳಿಕ ಜನವರಿ 29 ರಂದು ಕಂಚಿನ ಪದಕದ ಪಂದ್ಯ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Thu, 29 December 22