Updated on:Dec 29, 2022 | 5:14 PM
ಟೀಂ ಇಂಡಿಯಾದ ಉಪನಾಯಕ ಹಾಗೂ ಆರಂಭಿಕ ಆಟಗಾರ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತ್ತು. ಆದರೆ ಈ ಸರಣಿಯಲ್ಲೂ ರಾಹುಲ್ ಬ್ಯಾಟ್ ಸೈಲೆಂಟ್ ಆಗಿದ್ದರಿಂದ, ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳೂ ಎದ್ದಿವೆ. ಟಿ20 ವಿಶ್ವಕಪ್ನಂತಹ ದೊಡ್ಡ ಪಂದ್ಯಾವಳಿಲ್ಲೂ ರಾಹುಲ್ ರನ್ ಗಳಿಸಲು ಹೆಣಗಾಡಿದರು. ಹೀಗಾಗಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸ್ಥಾನಕ್ಕೆ ಕುತ್ತು ಎದುರಾಗಿದೆ. ಅಲ್ಲದೆ ರಾಹುಲ್ ಅವರ ಸ್ಥಾನಕ್ಕೆ ಐವರು ಯುವ ಆಟಗಾರರು ಫೈಪೋಟಿ ನಡೆಸುತ್ತಿರುವುದು ಕೂಡ ಕನ್ನಡಿಗನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಹುಲ್ ಸ್ಥಾನದ ಆಕಾಂಕ್ಷಿಗಳಾಗಿರುವ ಆ 5 ಆಟಗಾರರ ವಿವರ ಇಲ್ಲಿದೆ.
1. ಶುಭ್‌ಮನ್ ಗಿಲ್: ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಹೆಸರು ಮೊದಲನೇ ಸ್ಥಾನದಲ್ಲಿದೆ. ಸದ್ಯ ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗಿಲ್ ಅದ್ಭುತ ಶತಕ ಗಳಿಸಿದ್ದರು. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಒಟ್ಟು 157 ರನ್ ಗಳಿಸಿದರು. ಹೀಗಾಗಿ ಗಿಲ್ ಅವರನ್ನು ರಾಹುಲ್‌ಗೆ ಉತ್ತಮ ಬದಲಿ ಆಟಗಾರ ಎಂದು ಪರಿಗಣಿಸಲಾಗುತ್ತಿದೆ.
2. ಸಂಜು ಸ್ಯಾಮ್ಸನ್: 2ನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇದ್ದಾರೆ. ಸಂಜು ಬಳಿ ಪ್ರತಿಭೆಗೆ ಕೊರತೆ ಇಲ್ಲ, ಆದರೆ, ಆಡುವ ಅವಕಾಶ ಸಿಕ್ಕಿರಲಿಲ್ಲ. ಇಲ್ಲಿಯವರೆಗೆ 226 ಟಿ20 ಪಂದ್ಯಗಳಲ್ಲಿನ್ನಾಡಿರುವ (ಐಪಿಎಲ್ ಸೇರಿದಂತೆ ಹಾಗೂ ಇತರೆ) ಸಂಜು ಒಟ್ಟು 5612 ರನ್ ಗಳಿಸಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಏಕದಿನದಲ್ಲಿ 11 ಪಂದ್ಯಗಳಲ್ಲಿ 330 ರನ್ ಗಳಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕೆಎಲ್ ರಾಹುಲ್‌ಗೆ ಪರ್ಯಾಯವಾಗಿ ಸಂಜು ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ
3. ಇಶಾನ್ ಕಿಶನ್: ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್ ಹೆಸರಿದೆ. ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್‌ಗೆ ಉತ್ತಮ ಪರ್ಯಾಯ ಆಟಗಾರನೆಂದರೆ ಅದು ಕಿಶನ್. ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 21 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 29.45 ಸರಾಸರಿಯಲ್ಲಿ ಒಟ್ಟು 589 ರನ್ ಗಳಿಸಿದ್ದಾರೆ. ಇತ್ತೀಚೆಗೆ ಇಶಾನ್ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಕೇವಲ 131 ಎಸೆತಗಳನ್ನು ಎದುರಿಸಿದ ಕಿಶನ್ 24 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 210 ರನ್ ಗಳಿಸಿದರು. ಇಂತಹ ಪರಿಸ್ಥಿತಿಯಲ್ಲಿ, ಟಿ20 ಮಾದರಿಯಲ್ಲಿ ಕೆಎಲ್ ರಾಹುಲ್‌ಗೆ ಇಶಾನ್ ಅತ್ಯುತ್ತಮ ಪರ್ಯಾಯ ಎಂದು ಹೇಳಲಾಗುತ್ತಿದೆ.
4. ಪೃಥ್ವಿ ಶಾ: ರಾಹುಲ್ ಸ್ಥಾನಕ್ಕೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಪೃಥ್ವಿ ಶಾ ಭಾರತ ಪರ ಆಡಿ ತುಂಬಾ ದಿನಗಳೇ ಕಳೆದಿವೆ. ಆದರೆ, ಪೃಥ್ವಿಯ ಫಾರ್ಮ್ ಇದೀಗ ಅದ್ಭುತವಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಪೃಥ್ವಿ ಮುಂಬೈ ತಂಡದ ಪರ ಅದ್ಭುತವಾಗಿ ಆಡಿದ್ದರು. ಮುಂಬೈ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2018 ರಿಂದ 2022 ರವರೆಗೆ ಒಟ್ಟು 92 ಟಿ20 ಪಂದ್ಯಗಳನ್ನು ಆಡಿರುವ ಶಾ ಒಟ್ಟು 2401 ರನ್ ಗಳಿಸಿದ್ದಾರೆ. ಇದರಲ್ಲಿ 18 ಅರ್ಧ ಶತಕ ಮತ್ತು ಒಂದು ಶತಕವೂ ಸೇರಿದೆ. ಹೀಗಾಗಿ ಪೃಥ್ವಿ ಶಾ ಕೂಡ ರಾಹುಲ್‌ಗೆ ಅತ್ಯುತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ.
5. ರುತುರಾಜ್ ಗಾಯಕ್ವಾಡ್: ಭಾರತ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ಈ ಸ್ಥಾನಕ್ಕೆ ಸ್ಪರ್ಧಿಯಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅದರಲ್ಲೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ಪರ 4 ಶತಕಗಳನ್ನು ರುತುರಾಜ್ ಬಾರಿಸಿದ್ದರು. ಅಲ್ಲದೆ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿ ದಾಖಲೆಯನ್ನೂ ಬರೆದಿದ್ದಾರೆ. ಇದರೊಂದಿಗೆ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ ಕೆಎಲ್ ರಾಹುಲ್ ಬದಲಿಗೆ ಅವರನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.
Published On - 5:10 pm, Thu, 29 December 22