ಪಾಕಿಸ್ತಾನ ಟಿ20ಐ ತಂಡದಲ್ಲಿ ಕ್ರಿಕೆಟರ್​ಗಳಿಗಿಂತ ಕುಸ್ತಿಪಟುಗಳು ಜಾಸ್ತಿ ಕಾಣುತ್ತಿದ್ದಾರೆ: ಆಕಿಬ್ ಜಾವೆದ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2021 | 11:22 PM

ಒಡಿಐ ಸರಣಿಯನ್ನು 3-0 ಅಂತರದಿಂದ ಸೋತ ಪಾಕಿಸ್ತಾನ ಶುಕ್ರವಾರದಿಂದ ಪೂರ್ಣ-ಬಲದ ಇಂಗ್ಲೆಂಡ್​ ತಂಡವನ್ನು ಮೂರು ಪಂದ್ಯಗಳ ಟಿ20ಐ ಪಂದ್ಯಗಳ ಸರಣಿಯಲ್ಲಿ ಎದುರಿಸಲಿದೆ.

ಪಾಕಿಸ್ತಾನ ಟಿ20ಐ ತಂಡದಲ್ಲಿ ಕ್ರಿಕೆಟರ್​ಗಳಿಗಿಂತ ಕುಸ್ತಿಪಟುಗಳು ಜಾಸ್ತಿ ಕಾಣುತ್ತಿದ್ದಾರೆ: ಆಕಿಬ್ ಜಾವೆದ್
ಆಕಿಬ್ ಜಾವೆದ್
Follow us on

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅಂತ ಹೇಳ್ತಾರಲ್ಲ, ಹಾಗಾಗಿದೆ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ಸೀಮಿತ ಓವರ್​ಗಳ ತಂಡದ ಸ್ಥಿತಿ. ಇಂಗ್ಲೆಂಡ್​ ವಿರುದ್ಧ ಆಡಿದ ಮೂರು ಒಂದು ದಿನದ ಪಂದ್ಯಗಳ ಸರಣಿಯನ್ನು 0-3 ಅಂತರದಿಂದ ಸೋಲು ಅನುಭವಿಸಿದ ನಂತರ ಆ ದೇಶದ ಮಾಜಿ ಆಟಗಾರರೆಲ್ಲ ಟೀಮಿನ ಪ್ರದರ್ಶನವನ್ನು ಖಂಡಿಸುತ್ತಿದ್ದಾರೆ. ಟೀಕಿಸುವವರ ಪಟ್ಟಿಗೆ ಲೇಟೆಟ್ಟ್​ ಎಂಟ್ರಿ ಅಂದರೆ ಮಾಜಿ ವೇಗದ ಬೌಲರ್ ಆಕಿಬ್ ಜಾವೆದ್. ಅನನುಭವಿ ಆಟಗಾರರರಿಂದ ಕೂಡಿದ ಇಂಗ್ಲೆಂಡ್​ ತಂಡದ ವಿರುದ್ಧ ಹೀನಾಯವಾಗಿ ಸೋತಿರುವುದು ಅಕ್ಷಮ್ಯ ಎಂದು ಆಕಿಬ್ ಹೇಳಿದ್ದಾರೆ. ಪಾಕಿಸ್ತಾನದ ಪರ 22 ಟೆಸ್ಟ್ ಮತ್ತು 163 ಒಡಿಐ ಪಂದ್ಯಗಳನ್ನಾಡಿದ ಆಕಿಬ್ ಪಾಕಿಸ್ತಾನದ ಸೀಮಿತ ಓವರ್​ಗಳ ತಂಡ ಕ್ರಿಕೆಟರ್​ಗಳಿಗಿಂತ ಜಾಸ್ತಿ ಕುಸ್ತಿಪಟುಗಳಿಂದ ಕೂಡಿದೆ ಎಂದು ಹೇಳಿದ್ದಾರೆ. ಅವರೇನು ಮಾಡುತ್ತಿದ್ದಾರೆ ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ.

‘ಪಾಕಿಸ್ತಾನದ ಟಿ20ಐ ತಂಡದಲ್ಲಿ ನನಗೆ ಕುಸ್ತಿಪಟುಗಳೇ ಹೆಚ್ಚು ಕಾಣುತ್ತಿದ್ದಾರೆ. ಶರ್ಜೀಲ್ ಖಾನ್, ಆಜಮ್ ಖಾನ್ ಮತ್ತು ಸೋಹೆಬ್ ಮಕ್ಸೂದ್ ಅವರ ಫಿಟ್ನೆಸ್ ಪ್ರಶ್ನಾರ್ಹವಾಗಿದೆ,’ ಎಂದು, ಜಿಯೋ ಚ್ಯಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಒಡಿಐ ಸರಣಿಯನ್ನು 3-0 ಅಂತರದಿಂದ ಸೋತ ಪಾಕಿಸ್ತಾನ ಶುಕ್ರವಾರದಿಂದ ಪೂರ್ಣ-ಬಲದ ಇಂಗ್ಲೆಂಡ್​ ತಂಡವನ್ನು ಮೂರು ಪಂದ್ಯಗಳ ಟಿ20ಐ ಪಂದ್ಯಗಳ ಸರಣಿಯಲ್ಲಿ ಎದುರಿಸಲಿದೆ.

‘ಕೇವಲ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ (ಪಿಎಸ್​ಎಲ್) ನೀಡಿದ ಪ್ರದರ್ಶನಗಳ ಆಧಾರದ ಮೇಲೆ ಪಾಕಿಸ್ತಾನ ಆಯ್ಕೆ ಸಮಿತಿಯು ಸೋಹೆಬ್ ಮಕ್ಸೂದ್ ಅವರನ್ನು ತಂಡಕ್ಕೆ ಆರಿಸಿದೆ. ಅವರಿಗೆ ಯಾವ ಸ್ಥಾನದಲ್ಲಿ ಆಡಿಸಬೇಕೆಂಬ ಯೋಚನೆ ಸಹ ಸಮಿತಿ ಮಾಡಿಲ್ಲ,’ ಎಂದು ಆಕಿಬ್ ಹೇಳಿದ್ದಾರೆ.

‘ತಂಡದ ಕಾಂಪೋಸಿಶನ್ ನೋಡಿದ್ದೇಯಾದಲ್ಲಿ ಸಮಾನ ಸಾಮರ್ಥ್ಯದ ಇಲ್ಲವೇ ಒಂದು ಪೊಸಿಶನ್​ನಲ್ಲಿ ಆಡುವ ಹಲವಾರು ಆಟಗರರು ತಂಡದಲ್ಲಿದ್ದಾರೆ. ಭವಿಷ್ಯದ ತಂಡವನ್ನು ಹೀಗೆ ಕಟ್ಟಲಾಗುತ್ತದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿದ ಹೈದರ್ ಅಲಿಯನ್ನು ತಂಡದಿಂದ ಕೈಬಿಟ್ಟ ನಂತರ ಅವರ ಸ್ಥಾನದಲ್ಲಿ ಮಕ್ಸೂದ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಕೋಚ್ ಆಗಿರುವ ಆಕಿಬ್ ಅವರು, ಇಂಗ್ಲೆಂಡ್ ತಂಡ ಮತ್ತು ಮ್ಯಾನೇಜ್ಮೆಂಟ್ ಬಿಳಿ ಚೆಂಡಿನ ಪಂದ್ಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊಂದಿದೆ ಎಂದು ಪ್ರಶಂಸಿಸಿದ್ದಾರೆ. ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಉತ್ತಮ ರನ್​ರೇಟ್​ ಹೊಂದುವುದರ ಮೇಲೆ ಅವರು ಗಮನ ಕೇಂದ್ರೀಕರಿಸಿವುದರಿಂದ ಯಶಸ್ಸು ಲಭ್ಯಾವಗುತ್ತಿದೆ ಎಂದು ಆಕಿಬ್ ಹೇಳಿದ್ದಾರೆ.

ಇದನ್ನೂ ಓದಿ: ಒಡಿಐಗಳಲ್ಲಿ ಕೇವಲ 76ನೇ ಇನ್ನಿಂಗ್ಸ್​ನಲ್ಲಿ 13 ನೇ ಶತಕ ಬಾರಿಸಿ ಕೊಹ್ಲಿ ಮತ್ತು ಆಮ್ಲಾರನ್ನು ಹಿಂದಿಕ್ಕಿದ ಬಾಬರ್ ಆಜಂ