ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ಭಾರತದ ಅಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮಂಗಳವಾರ ಸ್ಟೇಡ್ ಡಿ ಫ್ರಾನ್ಸ್ ಸ್ಟೇಡಿಯಂ ನಲ್ಲಿ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪೈಪೋಟಿ ಕಂಡು ಬಂದಿತ್ತು. ಅದರಲ್ಲೂ ಮೂವರು ಭಾರತೀಯರು ಟಾಪ್-5 ಹಣಾಹಣಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಆದರೆ ಕ್ಯೂಬಾದ ಗಿಲ್ಲೆರ್ಮೊ ವರೋನಾ ಗೊನ್ಝಲ್ವೆಝ್ ಅವರು ವೈಯಕ್ತಿಕವಾಗಿ 66.14 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದರು. ಈ ವರ್ಷದ ಆರಂಭದಲ್ಲಿ ಜಪಾನ್‌ನ ಕೋಬ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿರುವ ಗೊನ್ಝಲ್ವೆಝ್ ಹಾಲಿ ವಿಶ್ವ ಚಾಂಪಿಯನ್ ಆಗಿ ಪ್ಯಾರಾಲಿಂಪಿಕ್ಸ್ ಗೆ ಆಗಮಿಸಿದ್ದರು. ವಿಶೇಷ ಎಂದರೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಗೊನ್ಝಲ್ವೆಝ್ ಈ ಬಾರಿ ಬಂಗಾರದ ಪದಕಕ್ಕೆ ಕೊರೊಳೊಡ್ಡಿದರು.
ಇನ್ನು 31 ಮೂಲದ ಅಜೀತ್ ಅವರು 65.62 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕವನ್ನು ಪಡೆದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ. 2021 ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಜೀತ್ 8 ನೇ ಸ್ಥಾನ ಪಡೆದಿದ್ದರು. ಈ ಬಾರಿ ಅತ್ಯುತ್ತಮ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನ ಪಡೆದರು.
ಪ್ರಸ್ತುತ ವಿಶ್ವ ದಾಖಲೆ ಹೊಂದಿರುವ ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತ ಗುರ್ಜರ್ ಮತ್ತೊಮ್ಮೆ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. 64.96 ಮೀ ಎಸೆಯುವ ಮೂಲಕ ಭಾರತೀಯ ಜಾವೆಲಿನ್ ತಾರೆ ಕಂಚಿನ ಪದಕವನ್ನು ಪಡೆದರು.
ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ರಿಂಕು, 61.65 ಮೀಟರ್‌ಗಳ ಎಸೆತದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. 25 ವರ್ಷ ರಿಂಕು ಈ ವರ್ಷದ ಆರಂಭದಲ್ಲಿ ಜಪಾನ್‌ನ ಕೋಬ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಆದರೆ ಅದೇ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್
ಇನ್ನು ಈ ಎರಡು ಜಾವೆಲಿನ್ ಪದಕಗಳಿಗೂ ಮುನ್ನ, ಮಹಿಳೆಯರ 400 ಮೀಟರ್ ಟಿ20 ಸ್ಪರ್ಧೆಯಲ್ಲಿ ಭಾರತದ ದೀಪ್ತಿ ಜೀವನಜಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರು ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದಾರೆ.
Published On - 7:51 am, Wed, 4 September 24