ಪಾಕಿಸ್ತಾನ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ್ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಅಂದರೆ ಬಾಂಗ್ಲಾ ಪಡೆಯು ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇತ್ತ ಬಾಂಗ್ಲಾದೇಶ್ ಗೆಲುವಿನ ಸಂಭ್ರಮದಲ್ಲಿದ್ದರೆ, ಅತ್ತ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದೆ. ಏಕೆಂದರೆ ಪಾಕ್ ಪಡೆಯು ಕಳೆದ 3 ವರ್ಷಗಳಿಂದ ತವರಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿಲ್ಲ. ಕೊನೆಯ ಬಾರಿಗೆ ಪಾಕ್ ತಂಡವು ಗೆದ್ದಿರುವುದು ಬಾಂಗ್ಲಾದೇಶ್ ವಿರುದ್ಧ. ಇದೀಗ ಬಾಂಗ್ಲಾ ಪಡೆಯೇ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿ ಟ್ರೋಫಿ ಗೆದ್ದಿದೆ.
ಪಾಕಿಸ್ತಾನ್ ತಂಡವು ಕಳೆದ 3 ವರ್ಷಗಳಲ್ಲಿ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿಸಿರುವುದು ವಿಶೇಷ. ಇನ್ನು ಗೆದ್ದಿರುವುದು 2021 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಮಾತ್ರ. ಆದರೆ ಈ ಬಾರಿ ಪಾಕಿಸ್ತಾನ್ ತಂಡದ ಲೆಕ್ಕಾಚಾರಗಳನ್ನು ಬಾಂಗ್ಲಾದೇಶ್ ತಲೆಕೆಳಗಾಗಿಸಿದೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳ ವಿರುದ್ಧ ಪಾಕಿಸ್ತಾನ್ ತಂಡ ಸೋಲನುಭವಿಸಿತ್ತು. ಅಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಬರೋಬ್ಬರಿ 1,303 ದಿನಗಳೇ ಕಳೆದಿವೆ.
ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ
ಇತ್ತ ಈ ಸೋಲಿನ ಕಾರಣ ಪಾಕ್ ಟೆಸ್ಟ್ ತಂಡದ ನಾಯಕತ್ವದಿಂದ ಬಾಬರ್ ಆಝಂ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಶಾನ್ ಮಸೂದ್ ಮುಂದಾಳತ್ವದಲ್ಲಿ ಕಣಕ್ಕಿಳಿದಿರುವ ಪಾಕ್ ಪಡೆಯು ಬಾಂಗ್ಲಾದೇಶ್ ವಿರುದ್ಧ ಸರಣಿ ಸೋತಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದ್ದು, ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಸತತ ಸೋಲುಗಳನ್ನು ಅನುಭವಿಸಿದ ಅತ್ಯಂತ ಕೆಟ್ಟ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಝಿಂಬಾಬ್ವೆ ತಂಡವು ತವರಿನಲ್ಲಿ ಗೆದ್ದು 4002 ದಿನಗಳೇ ಕಳೆದಿವೆ. ಇದೀಗ 1,303 ದಿನಗಳ ನಡುವೆ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಈ ಮೂಲಕ ತವರಿನಲ್ಲಿ ದೀರ್ಘಕಾಲದವರೆಗೆ ಟೆಸ್ಟ್ ಪಂದ್ಯ ಗೆಲ್ಲದ ಕೆಟ್ಟ ದಾಖಲೆ ಪಟ್ಟಿಯಲ್ಲಿ ಪಾಕ್ ಪಡೆಯು ದ್ವಿತೀಯ ಸ್ಥಾನ ಅಲಂಕರಿಸಿದೆ.