ಮನೋಜ್ ಭಾಂಡಗೆ... RCB ಅಭಿಮಾನಿಗಳಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕನ್ನಡಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಈ ವೇಳೆ ಆರ್ಸಿಬಿ 29 ಪಂದ್ಯಗಳನ್ನಾಡಿದರೂ, ಮನೋಜ್ ಭಾಂಡಗೆಗೆ ಒಂದೇ ಒಂದು ಚಾನ್ಸ್ ನೀಡಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ 2023 ರಲ್ಲಿ ಹಾಗೂ ಐಪಿಎಲ್ 2024 ರಲ್ಲಿ ಮನೋಜ್ ಆರ್ಸಿಬಿ ಪರ ಬೆಂಚ್ ಕಾದಿದ್ದಾರೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೆಂಚ್ ಕಾದಿದ್ದ ಅದೇ ಮನೋಜ್ ಭಾಂಡಗೆ ಇದೀಗ ಆರ್ಸಿಬಿ ತಂಡದ ತವರು ಮೈದಾನದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಬ್ಬರಿಸಿ ತೋರಿಸಿದ್ದಾರೆ. ಅದು ಅಂತಿಂಥ ಅಬ್ಬರವಲ್ಲ. ಬದಲಾಗಿ ಸಿಡಿಲಬ್ಬರ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯ. ಏಕೆಂದರೆ ವಾರಿಯರ್ಸ್ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಯುವ ಎಡಗೈ ದಾಂಡಿಗ ಮ್ಯಾಚ್ ಫಿನಿಶರ್ ಪಾತ್ರ ನಿರ್ವಹಿಸಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಮನೋಜ್ ಕೇವಲ 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 44 ರನ್ ಬಾರಿಸಿದ್ದರು. ಈ ಒಂದು ಇನಿಂಗ್ಸ್ ಫೈನಲ್ ಪಂದ್ಯದ ಚಿತ್ರಣವನ್ನೇ ಬದಲಿಸಿತ್ತು ಎಂದರೆ ತಪ್ಪಾಗಲಾರದು.
ಏಕೆಂದರೆ 170ರ ಅಸುಪಾಸಿನಲ್ಲಿದ್ದ ಮೈಸೂರು ವಾರಿಯರ್ಸ್ ತಂಡದ ಸ್ಕೋರ್ ಅನ್ನು ಮನೋಜ್ ಭಾಂಡೆಗೆ ಕೊನೆಯ ಎರಡು ಓವರ್ಗಳ ಮೂಲಕ 200ರ ಗಡಿದಾಟಿಸಿದ್ದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡವು 45 ರನ್ಗಳ ಅಂತರದ ಗೆಲುವು ದಾಖಲಿಸಿತ್ತು. ಅಂದರೆ ಇಲ್ಲಿ ಭಾಂಡೆಗೆ ಬಾರಿಸಿದ 44 ರನ್ಗಳು ಮೈಸೂರು ವಾರಿಯರ್ಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಎಂದರೆ ತಪ್ಪಾಗಲಾರದು.
ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಮನೋಜ್ ಭಾಂಡಗೆ 12 ಪಂದ್ಯಗಳಿಂದ ಒಟ್ಟು 292 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 137 ಎಸೆತಗಳಲ್ಲಿ ಎಂಬುದು ವಿಶೇಷ. ಇದೇ ವೇಳೆ 25 ಸಿಕ್ಸ್ಗಳನ್ನು ಸಹ ಸಿಡಿಸಿದ್ದಾರೆ. ಹಾಗೆಯೇ ಮಹಾರಾಜ ಟ್ರೋಫಿ 2024 ರಲ್ಲಿ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಮನೋಜ್ ಭಾಂಡಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಇನ್ನು 10 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಮನೋಜ್ 8 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೊಡುಗೆ ನೀಡಿದ್ದಾರೆ. ಆದರೆ ಇದೇ ಮನೋಜ್ ಭಾಂಡಗೆಯನ್ನು ಆರ್ಸಿಬಿ ಪರ 2 ಐಪಿಎಲ್ ಸೀಸನ್ಗಳಲ್ಲಿ ಬೆಂಚ್ನಲ್ಲೇ ಕೂರಿಸಿದ್ದರು ಎಂಬುದೇ ಅಚ್ಚರಿ.
2023 ರಲ್ಲಿ ಮನೋಜ್ ಭಾಂಡಗೆಯನ್ನು 20 ಲಕ್ಷ ರೂ.ಗೆ ಖರೀದಿಸಿದ ಆರ್ಸಿಬಿ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಇದಾಗ್ಯೂ 2024 ರ ಹರಾಜಿಗೂ ಮುನ್ನ ಯುವ ಆಲ್ರೌಂಡರ್ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದ್ದರು.
ಆದರೆ ಕಳೆದ ಸೀಸನ್ನಲ್ಲೂ ಬೆಂಚ್ ಕಾದಿದ್ದೇ ಬಂತು. ಇದೀಗ ಮಹಾರಾಜ ಟ್ರೋಫಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಮನೋಜ್ ಭಾಂಡಗೆ 2 ವರ್ಷ ಬೆಂಚ್ ಕಾಯಿಸಿದ ಆರ್ಸಿಬಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಅದು ಸಹ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ.
Published On - 3:00 pm, Mon, 2 September 24