CPL 2024: ಲೂಯಿಸ್ ಸ್ಪೋಟಕ ಸೆಂಚುರಿ: ದಾಖಲೆಯ ಜೊತೆಯಾಟ
Evin Lewis: ಎವಿನ್ ಲೂಯಿಸ್ ಐಪಿಎಲ್ನಲ್ಲಿ ಈವರೆಗೆ ಮೂರು ತಂಡಗಳ ಪರ ಕಣಕ್ಕಿಳಿದಿದ್ದಾರೆ. 2018 ರಲ್ಲಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ವಿಂಡೀಸ್ ದಾಂಡಿಗ ಆ ಬಳಿಕ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇನ್ನು 2022 ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಎವಿನ್ ಲೂಯಿಸ್ ಅವರನ್ನು ಖರೀದಿಸಿತ್ತು.
Updated on: Sep 02, 2024 | 10:55 AM

CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಎವಿನ್ ಲೂಯಿಸ್ ಅಜೇಯ ಶತಕ ಸಿಡಿಸಿದ್ದಾರೆ. ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಹಾಗೂ ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅಲ್ಲದೆ ಟಾಸ್ ಗೆದ್ದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ಇನಿಂಗ್ಸ್ ಆರಂಭಿಸಿದ ಆಂಡ್ರೆ ಫ್ಲೆಚರ್ (1) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಮತ್ತೋರ್ವ ಆರಂಭಿಕ ಎವಿನ್ ಲೂಯಿಸ್ ಸಿಡಿಲಬ್ಬರ ಮುಂದುವರೆಸಿದ್ದರು. ಸೇಂಟ್ ಲೂಸಿಯಾ ಕಿಂಗ್ಸ್ ಬೌಲರ್ಗಳ ಬೆಂಡೆತ್ತಿದ ಲೂಯಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್ ಫೋರ್ಗಳ ಸುರಿಮಳೆಗೈದರು. ಪರಿಣಾಮ ಲೂಯಿಸ್ ಬ್ಯಾಟ್ನಿಂದ 54 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 100 ರನ್ ಮೂಡಿಬಂತು.

ಮತ್ತೊಂದೆಡೆ ಲೂಯಿಸ್ಗೆ ಉತ್ತಮ ಸಾಥ್ ನೀಡಿದ ಕೈಲ್ ಮೇಯರ್ಸ್ 62 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 92 ರನ್ ಸಿಡಿಸಿದರು. ಈ ಮೂಲಕ 2ನೇ ವಿಕೆಟ್ಗೆ 199 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಇದರೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ದಾಖಲೆ ಎವಿನ್ ಲೂಯಿಸ್ ಹಾಗೂ ಕೈಲ್ ಮೇಯರ್ಸ್ ಪಾಲಾಯಿತು.

ಇನ್ನು ಎವಿನ್ ಲೂಯಿಸ್ ಹಾಗೂ ಕೈಲ್ ಮೇಯರ್ಸ್ ಅವರ ದಾಖಲೆಯ ಜೊತೆಯಾಟದ ನೆರವಿನಿಂದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಸೇಂಟ್ ಲೂಸಿಯಾ ಕಿಂಗ್ಸ್ ಪರ ಡೇವಿಡ್ ವೀಝ 3 ಓವರ್ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಬಳಿಸಿದರು.

ವಿಶೇಷ ಎಂದರೆ ಎವಿನ್ ಲೂಯಿಸ್ಗೆ ಇದು 2ನೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಶತಕ. ಇದಕ್ಕೂ ಮುನ್ನ 2021 ರಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಎರಡು ಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎವಿನ್ ಲೂಯಿಸ್ ಕೂಡ ಸೇರ್ಪಡೆಯಾಗಿದ್ದಾರೆ.
