PAK vs BAN: ಪಾಕ್ ಪಡೆಯನ್ನು ಬಗ್ಗು ಬಡಿದು ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ್
Pakistan vs Bangladesh: ಪಾಕಿಸ್ತಾನ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ್ ತಂಡವು 10 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಬಾಂಗ್ಲಾ ಪಡೆಯು ಪಾಕಿಸ್ತಾನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ್ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಇದು ಪಾಕಿಸ್ತಾನ್ ವಿರುದ್ಧದ ಬಾಂಗ್ಲಾ ತಂಡದ ಮೊದಲ ಸರಣಿ ಗೆಲುವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಮೊದಲ ಇನಿಂಗ್ಸ್ನಲ್ಲಿ 274 ರನ್ಗಳನ್ನು ಪೇರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬಾಂಗ್ಲಾದೇಶ್ ತಂಡವು ಲಿಟ್ಟನ್ ದಾಸ್ (138) ಶತಕದ ನೆರವಿನಿಂದ 262 ರನ್ಗಳಿಸಿ ಆಲೌಟ್ ಆಗಿದೆ.
ಪಾಕ್ ಪಡೆಗೆ ಅಲ್ಪ ಮುನ್ನಡೆ:
ಮೊದಲ ಇನಿಂಗ್ಸ್ನಲ್ಲಿ 12 ರನ್ಗಳ ಮುನ್ನಡೆ ಪಡೆದ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಬಾಂಗ್ಲಾ ವೇಗಿಗಳ ಮಾರಕ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಪಾಕ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೇವಲ 172 ರನ್ಗಳಿಗೆ ಪಾಕಿಸ್ತಾನ್ ತಂಡವು ಆಲೌಟ್ ಆಯಿತು. ಬಾಂಗ್ಲಾದೇಶ್ ಪರ ಯುವ ವೇಗಿ ಹಸನ್ ಮಹಮೂದ್ 43 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ನಹೀದ್ ರಾಣ 44 ರನ್ ಬಿಟ್ಟು ಕೊಟ್ಟು 4 ವಿಕೆಟ್ ಕಬಳಿಸಿ ಮಿಂಚಿದರು.
185 ರನ್ಗಳ ಗುರಿ:
ಮೊದಲ ಇನಿಂಗ್ಸ್ನ ಅಲ್ಪ ಹಿನ್ನಡೆಯೊಂದಿಗೆ ಬಾಂಗ್ಲಾದೇಶ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 185 ರನ್ಗಳ ಗುರಿ ಪಡೆಯಿತು. ಅದರಂತೆ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಬಾಂಗ್ಲಾದೇಶ್ ಆರಂಭಿಕರು 42 ರನ್ ಕಲೆಹಾಕಿದ್ದರು.
ಇನ್ನು ಐದನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಝಕೀರ್ ಹಸನ್ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಶದ್ಮಾನ್ ಇಸ್ಲಾಂ 24 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಈ ಹಂತದಲ್ಲಿ ಜೊತೆಯಾದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಹಾಗೂ ಮೊಮಿನುಲ್ ಹಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 3ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿ ಶಾಂತೊ (38) ಔಟಾದರು. ಇದರ ಬೆನ್ನಲ್ಲೇ ಮೊಮಿನುಲ್ (34) ಕೂಡ ಒಪ್ಪಿಸಿದರು.
ಈ ವೇಳೆ ಕಣಕ್ಕಿಳಿದ ಅನುಭವಿ ಆಟಗಾರರಾದ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಎಚ್ಚರಿಕೆಯ ಆಟದೊಂದಿಗೆ ಬಾಂಗ್ಲಾದೇಶ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 4 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
10ನೇ ಟೆಸ್ಟ್ ಸರಣಿ ಗೆಲುವು:
ಬಾಂಗ್ಲಾದೇಶ್ ತಂಡವು ಈವರೆಗೆ 144 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 10 ಟೆಸ್ಟ್ ಸರಣಿಗಳನ್ನು ಮಾತ್ರ ಎಂಬುದು ವಿಶೇಷ. 2005 ರಲ್ಲಿ ಝಿಂಬಾಬ್ವೆ ತಂಡವನ್ನು 1-0 ಅಂತರದಿಂದ ಮಣಿಸಿ ಬಾಂಗ್ಲಾದೇಶ್ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
ಇದಾದ ಬಳಿಕ 2009 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಇದು ಬಾಂಗ್ಲಾ ತಂಡದ ಮೊದಲ ವಿದೇಶಿ ಟೆಸ್ಟ್ ಸರಣಿ ಗೆಲುವು ಎಂಬುದು ವಿಶೇಷ.
2015 ರಲ್ಲಿ ಝಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿತ್ತು. ಇನ್ನು 2019 ರಲ್ಲೂ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿತ್ತು.
2020 ರಲ್ಲಿ ಝಿಂಬಾಬ್ವೆ ಹಾಗೂ 2021-22 ರಲ್ಲಿ ಝಿಂಬಾಬ್ವೆ ವಿರುದ್ಧ ಹಾಗೂ 2022-23 ರಲ್ಲಿ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾದೇಶ್ ತಂಡವು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದ್ದರು.
ಇದೀಗ ಪಾಕಿಸ್ತಾನ್ ತಂಡವನ್ನು ಪಾಕ್ನಲ್ಲೇ ಬಗ್ಗು ಬಡಿಯುವ ಮೂಲಕ ಬಾಂಗ್ಲಾದೇಶ್ ತಂಡ ಇತಿಹಾಸ ನಿರ್ಮಿಸಿದೆ. ಈ ಮೂಲಕ ಮೂರನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವಲ್ಲಿ ಬಾಂಗ್ಲಾ ಪಡೆ ಯಶಸ್ವಿಯಾಗಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ಝಾಕಿರ್ ಹಸನ್ , ನಜ್ಮುಲ್ ಹುಸೇನ್ ಶಾಂತೊ (ನಾಯಕ) , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಶಕಿಬ್ ಅಲ್ ಹಸನ್ , ಮೆಹಿದಿ ಹಸನ್ ಮಿರಾಜ್ , ಹಸನ್ ಮಹಮೂದ್ , ತಸ್ಕಿನ್ ಅಹ್ಮದ್ , ನಹಿದ್ ರಾಣ.
ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯೂಬ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ, ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಖುರ್ರಂ ಶಹಜಾದ್ , ಅಬ್ರಾರ್ ಅಹ್ಮದ್ , ಮೀರ್ ಹಮ್ಜಾ , ಮೊಹಮ್ಮದ್ ಅಲಿ.
Published On - 3:02 pm, Tue, 3 September 24