KCL 2024: 9 ಭರ್ಜರಿ ಸಿಕ್ಸ್ಗಳೊಂದಿಗೆ ಅಬ್ಬರಿಸಿದ ಅಝರ್
Mohammed Azharuddeen: ಮೊಹಮ್ಮದ್ ಅಝರುದ್ದೀನ್ ಆರ್ಸಿಬಿ ತಂಡದ ಮಾಜಿ ಆಟಗಾರ. 2021 ಆರ್ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದ ಯುವ ವಿಕೆಟ್ ಕೀಪರ್ಗೆ ಒಂದೇ ಒಂದು ಪಂದ್ಯದಲ್ಲೂ ಚಾನ್ಸ್ ನೀಡಿರಲಿಲ್ಲ. ಇದೀಗ ಕೇರಳ ಕ್ರಿಕೆಟ್ ಲೀಗ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಲಾರಂಭಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.
ಕೇರಳ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ ಯುವ ದಾಂಡಿಗ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಿದ್ದಾರೆ. ಅದು ಸಹ 9 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಎಂಬುದು ವಿಶೇಷ. ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಲೆಪ್ಪಿ ರಿಪ್ಪಲ್ಸ್ ಹಾಗೂ ತ್ರಿಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಲೆಪ್ಪಿ ರಿಪ್ಪಲ್ಸ್ ತಂಡದ ನಾಯಕ ಮೊಹಮ್ಮದ್ ಅಝರುದ್ದೀನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ತ್ರಿಶೂರ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅಭಿಷೇಕ್ (0) ಶೂನ್ಯಕ್ಕೆ ಔಟಾದರೆ, ವರುಣ್ ನಾಯನಾರ್ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷಯ್ ಮನೋಹರ್ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 57 ರನ್ ಬಾರಿಸಿದರು. ಇನ್ನು ಅರ್ಜುನ್ ವೇಣುಗೋಪಾಲ್ 20 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ತ್ರಿಶೂರ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು.
ಅಝರ್ ಅಬ್ಬರ- ಸಿಡಿಲಬ್ಬರ:
162 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಅಲೆಪ್ಪಿ ರಿಪ್ಪಲ್ಸ್ ಪರ ಮೊಹಮ್ಮದ್ ಅಝರುದ್ದೀನ್ ಹಾಗೂ ಕೃಷ್ಣ ಪ್ರಸಾದ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ 1 ರನ್ಗಳಿಸಿ ಕೃಷ್ಣ ಪ್ರಸಾದ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅಕ್ಷಯ್ ಶಿವ್ (3) ಕೂಡ ವಿಕೆಟ್ ಕೈಚೆಲ್ಲಿದರು.
ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಅಝರುದ್ದೀನ್ ನಾಯಕನಾಟ ಪ್ರದರ್ಶಿಸಿದರು. ತನ್ನ ಸ್ಪೋಟಕ ಬ್ಯಾಟಿಂಗ್ನಿಂದಲೇ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಅಝರ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
Mohammed Azharuddeen created ripples on the opening day of #KCL, lifting the Alleppey Ripples to victory with his knock of 9⃣2⃣! 💪#KCLonFanCode pic.twitter.com/eY5msQ67Iy
— FanCode (@FanCode) September 3, 2024
ಅಲ್ಲದೆ ಕೇವಲ 47 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 92 ರನ್ ಚಚ್ಚಿದರು. ಆದರೆ ಶತಕದಂಚಿನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತರು. ಅಷ್ಟರಲ್ಲಾಗಲೇ ಅಲೆಪ್ಪಿ ರಿಪ್ಪಲ್ಸ್ ತಂಡವು 15 ಓವರ್ಗಳಲ್ಲಿ 139 ರನ್ ಕಲೆಹಾಕಿತು. ಅಂತಿಮವಾಗಿ 18.3 ಓವರ್ಗಳಲ್ಲಿ 163 ರನ್ಗಳ ಗುರಿ ಮುಟ್ಟುವ ಮೂಲಕ ಅಲೆಪ್ಪಿ ರಿಪ್ಪಲ್ಸ್ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಆರ್ಸಿಬಿ ತಂಡದ ಮಾಜಿ ಆಟಗಾರ:
ವಿಶೇಷ ಎಂದರೆ ಮೊಹಮ್ಮದ್ ಅಝರುದ್ದೀನ್ ಈ ಹಿಂದೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. 2021 ಆರ್ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದ ಯುವ ವಿಕೆಟ್ ಕೀಪರ್ಗೆ ಒಂದೇ ಒಂದು ಪಂದ್ಯದಲ್ಲೂ ಚಾನ್ಸ್ ನೀಡಿರಲಿಲ್ಲ. ಇದೀಗ ಕೇರಳ ಕ್ರಿಕೆಟ್ ಲೀಗ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಲಾರಂಭಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.