Vinesh Phogat: ವಿನೇಶ್ ಫೋಗಟ್ ಅನರ್ಹ: ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ CAS

|

Updated on: Aug 09, 2024 | 4:36 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ರಿಂದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹಗೊಂಡಿರುವ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಇಂದು ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಒಲಿಂಪಿಕ್ಸ್ ಅಂತ್ಯದ ವೇಳೆಗೆ ಅಂದರೆ ಆಗಸ್ಟ್ 11 ಕ್ಕೂ ಮುನ್ನ ತೀರ್ಪು ನೀಡುವುದಾಗಿ ತಿಳಿಸಿದೆ.

Vinesh Phogat: ವಿನೇಶ್ ಫೋಗಟ್ ಅನರ್ಹ: ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ CAS
ವಿನೇಶ್ ಫೋಗಟ್
Follow us on

ಪ್ಯಾರಿಸ್ ಒಲಿಂಪಿಕ್ಸ್​ನ ಮಹಿಳಯೆರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಆ ಬಳಿಕ ಈ ನಿರ್ಧಾರದ ವಿರುದ್ಧ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಇದೀಗ ವಿನೇಶ್ ಅವರ ಮನವಿಯ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ, ‘ಒಲಿಂಪಿಕ್ಸ್ ಅಂತ್ಯದ ವೇಳೆಗೆ ಅಂದರೆ ಆಗಸ್ಟ್ 11 ಕ್ಕೂ ಮುನ್ನ ತೀರ್ಪು ನೀಡುವುದಾಗಿ ತಿಳಿಸಿದೆ.

ವಿನೇಶ್ ತನ್ನ ಮನವಿಯಲ್ಲಿ ತನಗೆ ಫೈನಲ್ ಪಂದ್ಯವನ್ನು ಆಡಲು ಅನುಮತಿ ನೀಡಬೇಕೆಂದು ಕೋರಿದ್ದರು. ಆದರೆ ವಿನೇಶ್ ಅವರ ಮನವಿಯ ಮೇರೆಗೆ ಫೈನಲ್ ಪಂದ್ಯವನ್ನು ತಡಮಾಡಲು ಸಾಧ್ಯವಿಲ್ಲ ಎಂದು ಸಿಎಎಸ್ ಹೇಳಿತ್ತು. ಆ ನಂತರ ಫೋಗಟ್ ಜಂಟಿ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು ಕೋರಿದ್ದರು. ಇದೀಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವಿನೇಶ್ ಫೋಗಟ್ ಅವರ ಅನರ್ಹತೆಯ ವಿರುದ್ಧದ ಅರ್ಜಿಯ ಬಗ್ಗೆ ಒಲಿಂಪಿಕ್ ಕ್ರೀಡಾಕೂಟ ಮುಗಿಯುವ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ತಿಳಿಸಿದೆ.

 

ಇನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿನೇಶ್ ಫೋಗಟ್​ ಅವರ ಮನವಿಯ ಬಗ್ಗೆ ವಾದಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ದೇಶದ ಪ್ರಖ್ಯಾತ ವಕೀಲರಾದ ಮತ್ತು ದುಬಾರಿ ವಕೀಲರಲ್ಲಿ ಒಬ್ಬರಾಗಿರುವ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ನೇಮಿಸಿದೆ.

ಕೋರ್ಟ್ ಆಫ್ ಆರ್ಬಿಟ್ರೇಶನ್ ಕಾರ್ಯವೇನು?

ಕೋರ್ಟ್ ಆಫ್ ಆರ್ಬಿಟ್ರೇಶನ್, ಕ್ರೀಡಾ ವಿವಾದಗಳನ್ನು ಪರಿಹರಿಸಲು 1984 ರಲ್ಲಿ ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ. ಇದು ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ನ್ಯೂಯಾರ್ಕ್ ನಗರ ಮತ್ತು ಸಿಡ್ನಿಯಲ್ಲಿ ನ್ಯಾಯಾಲಯಗಳನ್ನು ಹೊಂದಿದೆ. ಇದರ ಜೊತೆಗೆ ಪ್ರತಿ ಬಾರಿಯ ಒಲಿಂಪಿಕ್ಸ್​ನಲ್ಲೂ ಆತಿಥೇಯ ನಗರಗಳಲ್ಲಿ ತಾತ್ಕಾಲಿಕ ನ್ಯಾಯಾಲಯಗಳನ್ನು ಸ್ಥಾಪಿಸಿ ಕ್ರೀಡಾಕೂಟದಲ್ಲಿ ಕೇಳಿಬರುವ ದೂರಗಳನ್ನು ಇತ್ಯರ್ಥಗೊಳಿಸುವ ಕೆಲಸವನ್ನು ಮಾಡುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 9 August 24