ಭಾರತದ ಯುವ ಷಟ್ಲರ್ ಲಕ್ಷ್ಯ ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬ್ಯಾಡ್ಮಿಂಟನ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸುವ ಮೂಲಕ ಎಂಬುದು ವಿಶೇಷ. ಅಂದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾವುದೇ ಪುರುಷ ಷ್ಲಟರ್ ಸೆಮಿಫೈನಲ್ಗೆ ಹಂತಕ್ಕೇರಿಲ್ಲ. ಆದರೆ ಈ ಬಾರಿ 22ರ ಹರೆಯ ಲಕ್ಷ್ಯ ಸೇನ್ ಈ ಸಾಧನೆ ಮಾಡಿದ್ದಾರೆ. ಕ್ವಾರ್ಟರ್-ಫೈನಲ್‌ನಲ್ಲಿ ಚೀನಾದ (ಚೈನೀಸ್ ತೈಪೆ) ಟಿಯೆನ್-ಚೆನ್ ವಿರುದ್ಧ 19-21, 21-15, 21-12 ಅಂತರದಿಂದ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ಗೇರಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಇದೀಗ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಲಕ್ಷ್ಯ ಸೇನ್ ಸೆಮಿಫೈನಲ್ಗೇರಿದ್ದಾರೆ. ಈ ಮೂಲಕ ಪುರುಷರ ಬ್ಯಾಡ್ಮಿಂಟನ್ನಿಂದ ಭಾರತಕ್ಕೆ ಬ್ಯಾಡ್ಮಿಂಟನ್ನಲ್ಲಿ ಚೊಚ್ಚಲ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.
ಲಕ್ಷ್ಯ ಸೇನ್ ಈ ಹಿಂದೆ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದ ಲಕ್ಷ್ಯ ಸೇನ್, ಆ ಬಳಿಕ ಯೂತ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಂಗಾರ ಪದಕ ಗೆದ್ದಿದ್ದರು.
ಇನ್ನು 2022 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಹಿಂತಿರುಗಿದ್ದರು. ಹೀಗಾಗಿಯೇ ಈ ಬಾರಿ ಕೂಡ ಯುವ ಷಟ್ಲರ್ ಕಡೆಯಿಂದ ಬಂಗಾರದ ಪದಕವನ್ನು ನಿರೀಕ್ಷಿಸಲಾಗುತ್ತಿದೆ.
ಭಾನುವಾರ ನಡೆಯಲಿರುವ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಲಕ್ಷ್ಯ ಸೇನ್ ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದರೆ ಭಾರತಕ್ಕೆ ಬೆಳ್ಳಿ ಪದಕ ಖಚಿತವಾಗಲಿದೆ. ಹೀಗಾಗಿ ನಿರ್ಣಾಯಕ ಪಂದ್ಯದ ಮೂಲಕ ಭಾರತೀಯ ತಾರೆ ಫೈನಲ್ಗೆ ಪ್ರವೇಶಿಸಲಿ ಎಂದು ಆಶಿಸೋಣ.
Published On - 3:15 pm, Sat, 3 August 24