ನ್ಯೂಜಿಲೆಂಡ್​ನಲ್ಲಿ 10 ಪಾಕ್ ಆಟಗಾರರು ಕೊವಿಡ್-19 ಪಾಸಿಟಿವ್, ತನಿಖೆ ಶುರುಮಾಡಿದ ಪಿಸಿಬಿ

|

Updated on: Dec 05, 2020 | 4:20 PM

ತನ್ನ ಹಲವಾರು ಆಟಗಾರರು ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರೂ, ಅವರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿದೆ. ಹಾಗೆ ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂಬ ಟೀಕೆಗಳು ಕೇಳಿಬಂದ ನಂತರ ಪಿಸಿಬಿ ತನಿಖೆಯನ್ನು ಶುರಮಾಡಿದೆ.

ನ್ಯೂಜಿಲೆಂಡ್​ನಲ್ಲಿ 10 ಪಾಕ್ ಆಟಗಾರರು ಕೊವಿಡ್-19 ಪಾಸಿಟಿವ್, ತನಿಖೆ ಶುರುಮಾಡಿದ ಪಿಸಿಬಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
Follow us on

ಫಕರ್ ಜಮಾನ್

ಕೊವಿಡ್-19 ನಂಥ ಭಯಾನಕ ಸಾಂಕ್ರಾಮಿಕ ರೋಗವನ್ನು ಅಸಡ್ಡೆ ಮಾಡಿ ತನ್ನ ಹಲವಾರು ಆಟಗಾರರು, ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೂ ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವ್ಯಾಪಕ ಟೀಕೆಗೆ ಗುರಿಯಾಗಿದೆ. ನ್ಯೂಜಿಲೆಂಡ್​ನಲ್ಲಿ ಲ್ಯಾಂಡ್​ ಆಗಿರುವ ಪಾಕಿಸ್ತಾನದ ಆಟಗಾರರ ಪೈಕಿ 10 ಜನ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಈ ಬೆಳವಣಿಗೆಯ ನಂತರ ಪಿಸಿಬಿ ತನಿಖೆ ಶರುವಿಟ್ಟುಕೊಂಡರೆ ಕ್ರೈಸ್ಟ್​ಚರ್ಚ್​ನ ಸ್ಥಳೀಯ ಅಧಿಕಾರಿಗಳು ಇಡೀ ಪಾಕಿಸ್ತಾನದ ಟೀಮನ್ನು ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ.

ಪಿಸಿಬಿಯ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುವ ಕೈದ್-ಎ-ಆಜಮ್ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸಿದ್ದ ಒಂದು ನಿರ್ದಿಷ್ಟ ಪ್ರಾಂತ್ಯಕ್ಕೆ ಸೇರಿದ ಎರಡು ಟೀಮಿಗಳ ಕೆಲವು ಆಟಗಾರರು ನ್ಯೂಜಿಲೆಂಡ್​ಗೆ ತೆರಳುವ ಮೊದಲು ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅವರು ವೈರಲ್ ಸೋಂಕಿನಿಂದ ನರಳುತ್ತಿದ್ದಿದ್ದು ಗೊತ್ತಾಗಿತ್ತು. ಲಾಹೋರ್​ನಲ್ಲಿ ಅವರನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿದಾಗ ರಿಸಲ್ಟ್ ನೆಗೆಟಿವ್ ಬಂದಿತ್ತು. ಆದರೆ ಕ್ರೈಸ್ಟ್​ಚರ್ಚ್​ನಲ್ಲಿ ಅದೇ ಆಟಗಾರರ ಕೊರೊನಾ ಟೆಸ್ಟ್​ಗಳ ಫಲಿತಾಂಶಗಳು ಪಾಸಿಟಿವ್ ಬಂದಿವೆ. ಅವರ ಕೊರೊನಾ ರಿಸಲ್ಟ್​ಗಳು ದೊರೆತ ನಂತರವೇ ಪೂರ್ತಿ ಪಾಕಿಸ್ತಾನದ ಟೀಮನ್ನು ಒಂದ ಪ್ರತ್ಯೇಕವಾದ ಸ್ಥಳದಲ್ಲಿ ಕ್ವಾರೈಂಟೈನ್ ಮಾಡಲಾಗಿದೆಯೆಂದು ಮೂಲಗಳು ತಿಳಿಸಿವೆ.

ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ, ಆ ನಿರ್ದಿಷ್ಟ ಪ್ರಾಂತ್ಯದ ಎರಡು ತಂಡಗಳ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ನಲ್ಲೂ ಆಡಿದ್ದರು ಮತ್ತು ಅವರೆಲ್ಲ ಪಿಎಸ್​ಎಲ್​ನಲ್ಲಿ ಒಂದು ನಿರ್ದಿಷ್ಟವಾದ ಫ್ರಾಂಚೈಸಿಯ ಪರ ಆಡಿದ್ದರು! ಒಬ್ಬ ವಿದೇಶೀ ಮೂಲದ ಆಟಗಾರ ಸಹ ಇದೇ ಫ್ರಾಂಚೈಸಿಗೆ ಆಡಿದ್ದ ಮತ್ತು ಸ್ವದೇಶಕ್ಕೆ ಹಿಂತಿರುಗಿದ ನಂತರ ಅವನ ಕೊವಿಡ್-19 ಟೆಸ್ಟ್ ಮಾಡಿದಾಗ ಅದು ಪಾಸಿಟಿವ್ ಬಂದಿದೆ.

ಪಾಕಿಸ್ತಾನ ಟೀಮಿಗೆ ಆಯ್ಕೆಯಾಗದ ವೇಗದ ಬೌಲರ್ ಸೊಹೇಲ್ ತನ್ವೀರ್ ಸಹ ಪಿಎಸ್ಎಲ್​ನಲ್ಲಿ ಆಡಿದ್ದರು. ಆಮೇಲೆ ಅವರು ಲಂಕಾ ಪ್ರಿಮೀಯರ್ ಲೀಗ್​ನಲ್ಲಿ ಕ್ಯಾಂಡಿ ಪರ ಆಡಲು ಕೊಲೊಂಬೊ ತಲುಪಿದಾಗ ಅಲ್ಲಿ ನಡೆದ ಕೊವಿಡ್-19 ಪರೀಕ್ಷಣೆಯಲ್ಲಿ ಅವರ ರಿಸಲ್ಟ್ ಪಾಸಿಟಿವ್ ಬಂದಿದೆ. ಸೊಹೇಲ್​ರನ್ನು ಆಡಿಸುವುದು ಅಪಾಯಕ್ಕೆ ಮೂಲ ಎಂದರಿತ ಕ್ಯಾಂಡಿ ಫ್ರಾಂಚೈಸಿ ಮತ್ತು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿತು.

ಪಾಕಿಸ್ತಾನದ ಕ್ರಿಕೆಟ್ ಆಟಗಾರರು, ಅಲ್ಲಿನ ಮಂಡಳಿ ಮತ್ತು ಜನ ಅಂತರರಾಷ್ಟ್ರೀಯ ಕ್ರಿಕೆಟ್​ಗಾಗಿ ತವಕಿಸುತ್ತಿದ್ದಾರೆ. ಕ್ರಿಕೆಟಿಂಗ್ ದೇಶಗಳು ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನು ನಿಲ್ಲಿಸಿಬಿಟ್ಟಿವೆ. ಪಾಕಿಸ್ತಾನದ ಸ್ವದೇಶದ ಸರಣಿಗಳನ್ನು ಅಬು ಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ಆಯೋಜಿಸಲಾಗುತ್ತಿದೆ. ಪಾಕಿಸ್ತಾನದ ಜನರಲ್ಲಿ ಲೈವ್ ಅಂತರರಾಷ್ಟ್ರೀಯ ಕ್ರಿಕೆಟ್​ಗಾಗಿ ಇರುವ ತಹತಹಿಕೆ ಅರ್ಥಮಾಡಿಕೊಳ್ಳುವಂಥದ್ದು, ಅದನ್ನು ಅಂಗೀಕರಿಸಬಹುದು. ಹಾಗಂತ, ಕೊರೊನಾ ಪಾಸಿಟಿವ್ ಇರುವ ಅಥವಾ ಸೋಂಕಿನ ಲಕ್ಷಣಗಳನ್ನು ತೋರಿರುವ ಆಟಗಾರರನ್ನು ಬೇರೆ ದೇಶದ ಪ್ರವಾಸಕ್ಕೆ ಕಳಿಸಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಸೊಹೇಲ್ ತನ್ವೀರ್

ಪಿಸಿಬಿ ತನ್ನ ಸೀನಿಯರ್ ಟೀಮು ಮತ್ತು ಎ ಟೀಮಿನ 35 ಆಟಗಾರರು ಮತ್ತು 18 ಅಧಿಕಾರಿ ವರ್ಗದ ಸದಸ್ಯರನ್ನೊಳಗೊಂಡ ಒಂದು ದೊಡ್ಡ ದಂಡನ್ನೇ ನ್ಯೂಜಿಲೆಂಡ್​ಗೆ ಕಳಿಸಿದೆ. ಸೀನಿಯರ್ ಟೀಮಿನ ಆರಂಭ ಆಟಗಾರ ಫಕರ್ ಜಮಾನ್ ಟೀಮ್ ಪ್ರವಾಸಕ್ಕೆ ತೆರಳುವ ಮುನ್ನ ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರಿಂದ ಅವರನ್ನು ಪಾಕಿಸ್ತಾನದಲ್ಲೇ ಉಳಿಸಿಕೊಳ್ಳಲಾಯಿತು. ಆದರೆ ಎರಡನೇ ಬಾರಿ ನಡೆದ ಪರೀಕ್ಷಣೆಯಲ್ಲಿ ರಿಪೋರ್ಟ್ ನೆಗೆಟಿವ್ ಬಂತು. ಅವರನ್ನು  ನ್ಯೂಜಿಲೆಂಡ್​ಗೆ ಕಳಿಸಬೇಕೋ ಅಥವಾ ಇಲ್ಲವೋ ಅಂತ ಪಿಸಿಬಿ ಇನ್ನೂ ನಿರ್ಧರಿಸಿಲ್ಲ.